31 ಗೋವುಗಳನ್ನು ದತ್ತು ಪಡೆದ ಸಚಿವ ಪ್ರಭು ಚವ್ಹಾಣ್

ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಗೋಶಾಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದರಂತೆ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ 31 ಗೋವುಗಳನ್ನು ದತ್ತು ಪಡೆದಿದ್ದೇನೆ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ಘೋಷಣೆ ಮಾಡಿದರು.

ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಪುಣ್ಯಕೋಟಿ ದತ್ತು ಯೋಜನೆ ಪೋರ್ಟಲ್ ಗೆ ಚಾಲನೆ ನೀಡಿದರು. ಗುರುವಾರ 31 ಗೋವುಗಳನ್ನು ದತ್ತು ಪಡೆದು ಅದರ ಪಾಲನೆ, ಪೋಷಣೆ ಮತ್ತು ಆರೈಕೆಗೆ ಸಹಕರಿಸಲು ಮುಂದಾಗಿರುವುದು ನನ್ನ ಪೂರ್ವ ಜನ್ಮದ ಪುಣ್ಯದ ಫಲ ಎಂದರು.

ಈ ಹಿಂದೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಬೀದರ್ ಗೋಶಾಲೆಯಲ್ಲಿ ಗೋವುಗಳನ್ನು ದತ್ತು ಪಡೆದಿದ್ದೆ. ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಹುಟ್ಟುಹಬ್ಬದಂದು ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ 11 ಗೋವು ದತ್ತು ಪಡೆದು, ನಮಗೆಲ್ಲ ಮಾದರಿಯಾದರು. ಇದನ್ನು ಮನಗಂಡ ನಾನು ಸಚಿವರು, ಶಾಸಕರುಗಳು ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳು ಗೋವುಗಳನ್ನು ದತ್ತು ಪಡೆಯಬೇಕೆಂದು ಅಭಿಯಾನ ಆರಂಭಕ್ಕೆ ಮುಂದಾಗಿದ್ದೆ ಎಂದು ಪ್ರಭು ಚವ್ಹಾಣ್ ಪುಣ್ಯಕೋಟಿ ಯೋಜನೆ ಜಾರಿ ಕುರಿತಾಗಿ ಮಾಹಿತಿ ಹಂಚಿಕೊಂಡರು.

ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿ 100 ಗೋವುಗಳನ್ನು ನನ್ನನ್ನು ಒಳಗೊಂಡಂತೆ ಸಾರ್ವಜನಿಕರು ದತ್ತು ಪಡೆದಿದ್ದಾರೆ. ಗೋಶಾಲೆಗಳಿಗೆ 1314 ಜನ ದೇಣಿಗೆ ನೀಡಿದ್ದಾರೆ. ರಾಜ್ಯದಾದ್ಯಂತ ಪುಣ್ಯಕೋಟಿ ದತ್ತು ಯೋಜನೆ ಪೋರ್ಟಲಿನಲ್ಲಿ 123 ಗೋಶಾಲೆಗಳು ನೋಂದಣಿಯಾಗಿದ್ದು, 60 ಗೋಶಾಲೆಗಳ ನೋಂದಣಿ ಪ್ರಗತಿಯಲ್ಲಿದೆ. 16650 ಜಾನುವಾರುಗಳನ್ನು ನೊಂದಾಯಿಸಲಾಗಿದೆ ಎಂದು ಸಂಕ್ಷಿಪ್ತವಾಗಿ ಪ್ರಭು ಚವ್ಹಾಣ್ ತಿಳಿಸಿದರು.

ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ಸ್ಥಾಪಿಸಲಾಗಿದೆ. ರಾಷ್ಟ್ರದಲ್ಲಿಯೇ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ ಆಗಿದೆ. 2022-23ನೇ ಸಾಲಿನ ಆಯವ್ಯಯದಲ್ಲಿ ಪುಣ್ಯಕೋಟಿ ದತ್ತು ಯೋಜನೆ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.

ದಿನೇ ದಿನೇ ಗೋಶಾಲೆಗಳಲ್ಲಿ ಜಾನುವಾರುಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗೋಶಾಲೆಗಳನ್ನು ಆರ್ಥಿಕವಾಗಿ ಸದೃಢಗೊಳಿಸಿ, ಸಾರ್ವಜನಿಕರ ಸಹಕಾರದಿಂದ ಯಾವುದೇ ಅಡಚಣೆಯಿಲ್ಲದೇ ನಡೆಸುವುದು ಈ ಯೋಜನೆ ಉದ್ದೇಶವಾಗಿದೆ. ವಯಸ್ಸಾದ, ರೋಗಗ್ರಸ್ಥ, ನಿರ್ಗತಿಕ, ನಿಶ್ಯಕ್ತ, ರೈತರು ಸಾಕಲಾಗದೆ ತಂದು ಬಿಡುವ ಜಾನುವಾರುಗಳು, ಗಂಡು ಕರುಗಳು ಮತ್ತು ನ್ಯಾಯಾಲಯ ಹಾಗೂ ಪೊಲೀಸ್ ಕಸ್ಟಡಿಯಿಂದ ವಶಪಡಿಸಿಕೊಂಡ ಜಾನುವಾರುಗಳಿಗೆ ಆಶ್ರಯ ನೀಡಿ ಪೋಷಣೆ ಮಾಡಲಾಗುವುದು ಎಂದು ಪ್ರಭು ಚವ್ಹಾಣ್ ವಿವರಿಸಿದರು.

ಪುಣ್ಯಕೋಟಿ ದತ್ತು ಯೋಜನೆಯಲ್ಲಿ ಗೋವು ದತ್ತು, ಗೋಶಾಲೆಗೆ ದೇಣಿಗೆ ಮತ್ತು ಜಾನುವಾರುಗಳಿಗೆ ಆಹಾರ ಯೋಜನೆಯಡಿ ಸಾರ್ವಜನಿಕರು ಗೋಶಾಲೆಗಳಲ್ಲಿರುವ ಗೋವುಗಳ ಪಾಲನೆಗೆ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆಯನ್ನು ಮಾಧ್ಯಮಗಳಲ್ಲಿ ಪ್ರಚಾರ ಮಾಡಬೇಕು. ಸಾರ್ವಜನಿಕರು ಗೋವುಗಳನ್ನು ದತ್ತು ಪಡೆದು ಗೋಸಂಕುಲ ಸಂರಕ್ಷಣೆಯಲ್ಲಿ ಭಾಗವಹಿಸಬೇಕು ಎಂದು ಪ್ರಭು ಚವ್ಹಾಣ್ ಅವರು ಮಾಧ್ಯಮಗಳ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದರು.

Recent Articles

spot_img

Related Stories

Share via
Copy link
Powered by Social Snap