ಹಾವೇರಿ:
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು ಗ್ರಾಮದ ಸ್ವಾತಿ ರಮೇಶ್ ಬಡಿಗೆರೆ ಎಂಬ 22 ವರ್ಷದ ಯುವತಿಯ ಕೊಲೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಕ್ಕಾಗಿ ಅಭಿಯಾನ ನಡೆಸಲಾಗುತ್ತಿದೆ.
ರಾಣೆಬೆನ್ನೂರು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸ್ವಾತಿ ನಾಪತ್ತೆಯಾಗಿದ್ದಾಳೆ ಎಂದು ಕಳೆದ ಮಾರ್ಚ್ 3 ರಂದು ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಬೆನ್ನಲ್ಲೇ ಮಾರ್ಚ್ 6 ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಫತೇಪುರ್ ಗ್ರಾಮದ ತುಂಗಭದ್ರಾ ನದಿಯ ಬಳಿ ಆಕೆಯ ಶವ ಪತ್ತೆಯಾಗಿತ್ತು.
ಆರಂಭದಲ್ಲಿ, ಹಲಗೇರಿ ಪೊಲೀಸರು ಈ ಪ್ರಕರಣವನ್ನು ಗುರುತಿಸಲಾಗದ ಶವವೆಂದು ಪರಿಗಣಿಸಿ ಮರಣೋತ್ತರ ಪರೀಕ್ಷೆ ನಡೆಸಿದರು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಇದು ಕೊಲೆ ಎಂದು ದೃಢಪಟ್ಟಿದೆ. ತಕ್ಷಣ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಸ್ವಾತಿ ಹಂತಕ ನಯಾಜ್ ಎನ್ನುವುದು ದೃಢಪಟ್ಟಿದೆ. ಇದೀಗ ನಯಾಜ್ ಸೇರಿದಂತೆ ಮೂವರು ಆರೋಪಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಕೊಲೆಗೆ ಕೋಮು ಬಣ್ಣ ನೀಡಲಾಗಿದ್ದು, “ಜಸ್ಟೀಸ್ ಫಾರ್ ಸ್ವಾತಿ” ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳು ಹರಿದಾಡಲು ಪ್ರಾರಂಭಿಸಿದವು. ಪ್ರಕರಣದಲ್ಲಿ ಕೋಮು ಸಂಘರ್ಷಕ್ಕೆ ಸಂಬಂಧಿಸಿದ ಆರೋಪಗಳು ಕೇಳಿಬಂದವು.
ಆದಾಗ್ಯೂ, ಹಾವೇರಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಅನ್ಸುಕುಮಾರ್ ಅವರು ಈ ಕೊಲೆ ಯಾವುದೇ ಕೋಮು ಸಂಘರ್ಷಕ್ಕೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಮೂವರು ಆರೋಪಿಗಳು ವೈಯಕ್ತಿಕ ಕಾರಣಗಳಿಂದ ಸ್ವಾತಿಯನ್ನು ಕೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಆರೋಪಿ ನಯಾಜ್ ಹಿರೇಕೇರೂರು ತಾಲೂಕು ಹಳೆ ವಿರಾಪುರ ಗ್ರಾಮದವನಾಗಿದ್ದು, ಕೊಲೆಯಾದ ಸ್ವಾತಿ ಹಾಗೂ ಕೊಲೆ ಮಾಡಿದ ಮೂವರು ಆರೋಪಿಗಳು ಹೋರಿ ಬೆದರಿಸುವ ಸ್ಪರ್ಧೆ ಅಭಿಮಾನಿಗಳು ಎನ್ನಲಾಗಿದೆ.ಹೋರಿ ಬೆದರಿಸೋ ಸ್ಪರ್ಧೆ ಇದ್ದರೆ ಅಲ್ಲಿ ಹಾಜರಾಗ್ತಿದ್ದ ಸ್ವಾತಿಗೆ ಹೋರಿ ಬೆದರಿಸೋ ಸ್ಪರ್ಧೆ ಬಗ್ಗೆ ಕ್ರೇಜ್ ಇತ್ತು. ಈ ವೇಳೆ ನಯಾಜ್ , ವಿನಯ್, ದುರ್ಗಾಚಾರಿ ಜೊತೆ ಸ್ನೇಹ ಬೆಳೆದಿದೆ. ಬಳಿಕ ಆರೋಪಿ ನಯಾಜ್ ಹಾಗೂ ಸ್ವಾತಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಆದರೆ ನಯಾಜ್ ಸ್ವಾತಿಯನ್ನು ಬಿಟ್ಟು ತಮ್ಮ ಧರ್ಮದ ಯುವತಿ ಜೊತೆ ಮದುವೆಯಾಗಲು ಬಯಸಿದ್ದ. ಇದರಿಂದ ರೊಚ್ಚಿಗೆದ್ದಿದ್ದ ಸ್ವಾತಿ ನನಗೆ ಮೋಸ ಮಾಡಬೇಡ ಎಂದು ಜಗಳ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ನಯಾಜ್ ಹಾಗೂ ಇತರ ಇಬ್ಬರು ಸೇರಿ ಸ್ವಾತಿಯನ್ನು ಕೊಲೆ ಮಾಡಿ, ತುಂಗಭದ್ರಾ ನದಿಗೆ ಹಾಕಿದ್ದಾರೆ
