ಬೆಂಗಳೂರು:
‘ಬಿಪರ್‌ಜಾಯ್’ ಕರ್ನಾಟಕದಲ್ಲಿ ನೈಋತ್ಯ ಮಾನ್ಸೂನ್ ಪ್ರಗತಿಯ ಮೇಲೆ ಪರಿಣಾಮ ಬೀರಿದೆ. ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ಜೂನ್ 1 ರಿಂದ ಕರ್ನಾಟಕದಲ್ಲಿ ಇದುವರೆಗೆ 34.3 ಮಿಮೀ ಮಳೆಯಾಗಿದ್ದು, ಸಾಮಾನ್ಯ ಮಳೆಯ 119.6 ಮಿಮೀ ವಿರುದ್ಧ ಶೇ 71 ರಷ್ಟು ಕೊರತೆಯಾಗಿದೆ.
ಐಎಂಡಿಯ ಬೆಂಗಳೂರು ನಿರ್ದೇಶಕ ಎ ಪ್ರಸಾದ್ ಮಾತನಾಡಿ, ‘ಬಿಪರ್‌ಜಾಯ್ ಚಂಡಮಾರುತವು ಮಾನ್ಸೂನ್ ಗಾಳಿಯ ಪ್ರಸರಣ ಮಾದರಿಯ ಮೇಲೆ ಪರಿಣಾಮ ಬೀರಿದೆ. ಇದು ಗುಜರಾತ್ ಅನ್ನು ದಾಟಿರುವುದರಿಂದ, ಮುಂಗಾರು ಪುನಶ್ಚೇತನಗೊಳ್ಳುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕದಲ್ಲಿ ಭಾನುವಾರದಿಂದ ವ್ಯಾಪಕ ಮಳೆಯಾಗುತ್ತಿದೆ. ಪಶ್ಚಿಮ ದಿಕ್ಕಿನ ಮಾರುತಗಳು ಮುನ್ನಡೆಯುತ್ತಿದ್ದು, ಮುಂದಿನ ಮೂರು ದಿನಗಳಲ್ಲಿ ಮಾನ್ಸೂನ್ ಮತ್ತಷ್ಟು ಚುರುಕು ಪಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಲಿದೆ’ ಎಂದು ಹೇಳಿದರು.
ಒಂದು ತಿಂಗಳ ಕಾಲ ವಿಸ್ತೃತ ಹವಾಮಾನ ಮುನ್ಸೂಚನೆಯ ಪ್ರಕಾರ, ಕರ್ನಾಟಕದಲ್ಲಿ ಜೂನ್ 21 ರಿಂದ ಎರಡು ವಾರಗಳವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆಯನ್ನು ಇಲಾಖೆ ನಿರೀಕ್ಷಿಸುತ್ತಿದೆ. ಮಾನ್ಸೂನ್‌ನ ಮತ್ತಷ್ಟು ಪ್ರಗತಿಗೆ ಪರಿಸ್ಥಿತಿಗಳು ಅನುಕೂಲಕರವಾಗಿವೆ ಮತ್ತು ಮುಂದಿನ ಮೂರು ದಿನಗಳಲ್ಲಿ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಳೆಯಾಗಲಿದೆ’ ಎಂದು ಪ್ರಸಾದ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ