ಶ್ರೀನಗರ:
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸುವುದರ ವಿರುದ್ಧ ಪ್ರತಿಭಟನೆಯ ವೇಳೆ ಬಾವಿಗೆ ನುಗ್ಗಿದ ಪ್ರತಿಪಕ್ಷ ಸದಸ್ಯರನ್ನು ಹೊರಹಾಕಲು ಸ್ಪೀಕರ್ ಸೂಚಿಸಿದ ನಂತರ ಬಿಜೆಪಿ ಶಾಸಕರು ಮತ್ತು ಮಾರ್ಷಲ್‌ಗಳ ನಡುವೆ ವಾಗ್ವಾದ ನಡೆಯಿತು.
ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಅವರ ನಿರ್ದೇಶನದ ಮೇರೆಗೆ ಮೂವರು ಬಿಜೆಪಿ ಶಾಸಕರನ್ನು ಪ್ರತ್ಯೇಕಗೊಳಿಸಿದರು. ಇಂದು ಬೆಳಗ್ಗೆ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯರು ನಿನ್ನೆ ಅಂಗೀಕರಿಸಿದ ನಿರ್ಣಯದ ವಿರುದ್ಧ ಪ್ರತಿಭಟಿಸಿದ್ದರಿಂದ ಗದ್ದಲ ಉಂಟಾಯಿತು. ಬಿಜೆಪಿ ಶಾಸಕ ಮತ್ತು ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ಅವರು ನಿರ್ಣಯದ ಮೇಲೆ ಮಾತನಾಡುತ್ತಿದ್ದಾಗ, ಅವಾಮಿ ಇತ್ತೆಹಾದ್ ಪಕ್ಷದ ನಾಯಕ ಮತ್ತು ಶಾಸಕ ಲಂಗೇಟ್ ಶೇಖ್ ಖುರ್ಷೀದ್ ಅವರು ಆರ್ಟಿಕಲ್ 370 ಮತ್ತು 35 ಎ ನ್ನು ಮರುಸ್ಥಾಪಿಸುವಂತೆ ಬ್ಯಾನರ್ ಪ್ರದರ್ಶಿಸಿ ಸದನದ ಬಾವಿಗಿಳಿದರು.
ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಕೂಡ ಸದನದ ಬಾವಿಗೆ ಹಾರಿ ಬ್ಯಾನರ್ ಕಿತ್ತು ಹಾಕಿದರು. ಗದ್ದಲ ನಡುವೆಯೇ ಸ್ಪೀಕರ್ ಕಲಾಪವನ್ನು 15 ನಿಮಿಷಗಳ ಕಾಲ ಮುಂದೂಡಿದರು. ಆದರೆ, ಸದನ ಮುಂದೂಡಿದ ಬಳಿಕವೂ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು.