ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್ ಭೇದಿಸಿದ ದೆಹಲಿ ಪೊಲೀಸರು; 3 ಜನರ ಬಂಧನ

ನವದೆಹಲಿ

    ದೆಹಲಿ ಪೊಲೀಸರ ವಿಶೇಷ ಘಟಕವು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಮಾಡ್ಯೂಲ್ ಅನ್ನು ಭೇದಿಸಿದೆ. ಪ್ರಸ್ತುತ ನೆರೆಯ ದೇಶದಲ್ಲಿ ನೆಲೆಸಿರುವ ದರೋಡೆಕೋರ ಶಹಜಾದ್ ಭಟ್ಟಿ ನೇತೃತ್ವದಲ್ಲಿ ಈ ಮಾಡ್ಯೂಲ್ ನಡೆಯುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಡ್ಯೂಲ್‌ನ ಭಾಗವಾಗಿದ್ದ ಪಂಜಾಬ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಿಂದ ತಲಾ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರಿಂದ ಒಂದು ಅರೆ-ಸ್ವಯಂಚಾಲಿತ ಪಿಸ್ತೂಲ್, 10 ಲೈವ್ ಕಾರ್ಟ್ರಿಡ್ಜ್‌ಗಳು, ಕ್ರೈಂ ಚಾಟ್‌ಗಳು ಮತ್ತು ವಿಡಿಯೊಗಳನ್ನು ಹೊಂದಿರುವ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ವಿಶೇಷ ಘಟಕ) ಪ್ರಮೋದ್ ಸಿಂಗ್ ಕುಶ್ವಾ ತಿಳಿಸಿದ್ದಾರೆ. 

    ಈ ಮಾಡ್ಯೂಲ್ ನವೆಂಬರ್ 25ರಂದು ಪಂಜಾಬ್‌ನ ಗುರುದಾಸ್ಪುರದಲ್ಲಿರುವ ಸಿಟಿ ಪೊಲೀಸ್ ಠಾಣೆ ಹೊರಗೆ ನಡೆದ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿತ್ತು. ಈ ದಾಳಿ ಭಟ್ಟಿಯ ಸೂಚನೆಯ ಮೇರೆಗೆ ನಡೆಸಲಾಯಿತು. ಭಟ್ಟಿ ಪಾಕಿಸ್ತಾನದಿಂದ ಎನ್‌ಕ್ರಿಪ್ಟ್ ಮಾಡಲಾದ ಸಾಮಾಜಿಕ ಮಾಧ್ಯಮ ಚಾನೆಲ್‌ಗಳನ್ನು ಬಳಸಿಕೊಂಡು ಕಾರ್ಯಾಚರಣೆಗಳನ್ನು ಸಂಘಟಿಸುತ್ತಿದ್ದಾನೆ ಎಂದು ತಿಳಿದುಬಂದಿದೆ.

   ಬಂಧಿತರನ್ನು ಮಧ್ಯ ಪ್ರದೇಶದ ದಾಟಿಯಾ ನಿವಾಸಿ ವಿಕಾಸ್ ಪ್ರಜಾಪತಿ ಅಲಿಯಾಸ್ ಬೇತು (19), ಪಂಜಾಬ್‌ನ ಫಿರೋಜ್‌ಪುರದ ಹರ್ಗುಣ್‌ಪ್ರೀತ್ ಸಿಂಗ್ ಅಲಿಯಾಸ್ ಗುರ್ಕರನ್‌ಪ್ರೀತ್ ಸಿಂಗ್ (19) ಮತ್ತು ಉತ್ತರ ಪ್ರದೇಶದ ಬಿಜ್ನೌರ್‌ನ ಆಸಿಫ್ ಅಲಿಯಾಸ್ ಅರಿಶ್ (22) ಎಂದು ಗುರುತಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

   ಭಟ್ಟಿಯ ಸಾಮಾಜಿಕ ಮಾಧ್ಯಮದಲ್ಲಿ ನಡೆದ ಮಾತುಕತೆಗಳು ಸೇರಿದಂತೆ ಅವರ ಚಟುವಟಿಕೆಗಳನ್ನು ತಂಡವೊಂದು ಟ್ರ್ಯಾಕ್ ಮಾಡಲು ಪ್ರಾರಂಭಿಸಿದ ನಂತರ ಈ ಬೆಳವಣಿಗೆ ಕಂಡುಬಂದಿದೆ. ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಬೇಕಾಗಿದ್ದ ಪ್ರಜಾಪತಿ ಸಾಮಾಜಿಕ ಮಾಧ್ಯಮದಲ್ಲಿ ಭಟ್ಟಿ ಜತೆ ಆಗಾಗ ಸಂಪರ್ಕದಲ್ಲಿರುತ್ತಿದ್ದ ಎನ್ನುವುದು ಗೊತ್ತಾಗಿದೆ. ಪ್ರಜಾಪತಿಯ ಸ್ಥಳ ಗುರುದಾಸ್ಪುರ ಮತ್ತು ದೆಹಲಿಯ ನಡುವೆ ಬದಲಾಗುತ್ತಿತ್ತು. ಅಧಿಕಾರಿಗಳು ತನ್ನ ಮೊಬೈಲ್ ಅನ್ನು ಟ್ರ್ಯಾಕ್ ಮಾಡದಂತೆ ತಪ್ಪಿಸಲು ಭಟ್ಟಿ ಆಗಾಗ ತನ್ನ ಮೊಬೈಲ್ ಫೋನ್ ಅನ್ನು ಸ್ವಿಚ್ ಆಫ್ ಮಾಡುತ್ತಿದ್ದ ಎಂದು ಅಧಿಕಾರಿ ಹೇಳಿದರು.

    ಎರಡು ದಿನಗಳ ಶೋಧದ ನಂತರ ಪ್ರಜಾಪತಿಯನ್ನು ಮಧ್ಯಪ್ರದೇಶದಲ್ಲಿ ಬಂಧಿಸಲಾಯಿತು. ಆತನ ವಿಚಾರಣೆಯಲ್ಲಿ ಮಾಡ್ಯೂಲ್‌ನ ಕಾರ್ಯವೈಖರಿ ಬಹಿರಂಗವಾಯಿತು. ಭಟ್ಟಿ ಮತ್ತು ಆತನ ಪಾಕಿಸ್ತಾನ ಮೂಲದ ಸಹಚರರು ಸಾಮಾಜಿಕ ಮಾಧ್ಯಮದಲ್ಲಿ ಯುವ ಭಾರತೀಯರನ್ನು ಗುರಿಯಾಗಿಸಿಕೊಂಡು, ಹಣ ಮತ್ತು ದರೋಡೆಕೋರ ವೈಭವೀಕರಣದ ಆಮಿಷ ಒಡ್ಡುತ್ತಿದ್ದರು ಎಂದು ಹೆಚ್ಚುವರಿ ಕಮಿಷನರ್ ಹೇಳಿದರು. 

    ಗುರುದಾಸ್ಪುರದಲ್ಲಿ ಶಸ್ತ್ರಾಸ್ತ್ರ ಪಾರ್ಸೆಲ್ ಸ್ವೀಕರಿಸಲು ಭಟ್ಟಿ ಪ್ರಜಾಪತಿಯನ್ನು ಬಳಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ವಶಪಡಿಸಿಕೊಳ್ಳಲಾದ ಆಯುಧದಲ್ಲಿ ಗ್ರೆನೇಡ್ ಕೂಡ ಇತ್ತು. ಭಟ್ಟಿಯ ಸೂಚನೆಯ ಮೇರೆಗೆ, ಪ್ರಜಾಪತಿ ಗುರುದಾಸ್ಪುರದ ನಗರ ಪೊಲೀಸ್ ಠಾಣೆ ಮತ್ತು ಅಮೃತಸರದ ಟೌನ್ ಹಾಲ್ ಪೊಲೀಸ್ ಠಾಣೆಯಲ್ಲಿ ಪರಿಶೀಲನೆ ನಡೆಸಿ, ಗ್ರೆನೇಡ್ ಅನ್ನು ಹರ್ಗುಣಪ್ರೀತ್ ಸಿಂಗ್ ಮತ್ತು ಆತನ ಸಹಚರರಿಗೆ ಹಸ್ತಾಂತರಿಸಿದ್ದ.

    ವಿಚಾರಣೆಯ ಸಮಯದಲ್ಲಿ, ಫಿರೋಜ್‌ಪುರದ ಹರ್ಗುಣಪ್ರೀತ್ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ್ದು, ನವೆಂಬರ್ 25ರಂದು ನಗರ ಪೊಲೀಸ್ ಠಾಣೆಯ ಹೊರಗೆ ಸಹಚರನೊಬ್ಬ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಹಿಂಬದಿ ಸವಾರಿ ಮಾಡುವಾಗ ಗ್ರೆನೇಡ್ ದಾಳಿ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಮೂರನೇ ಆರೋಪಿ ಆಸಿಫ್‌ನನ್ನು ಸಾಮಾಜಿಕ ಮಾಧ್ಯಮದ ಮೂಲಕ ನೇಮಕ ಮಾಡಿಕೊಳ್ಳಲಾಗಿತ್ತು.

    ಪಂಜಾಬ್‌ನಲ್ಲಿ ಇದೇ ರೀತಿಯ ಗ್ರೆನೇಡ್ ದಾಳಿಗೆ ಸಿದ್ಧರಾಗಲು ಅವನಿಗೆ ಸೂಚನೆ ನೀಡಲಾಗಿತ್ತು. ಇದಕ್ಕಾಗಿ ಭಟ್ಟಿ ಸ್ಥಳದ ಮ್ಯಾಪ್ ಮತ್ತು ಛಾಯಾಚಿತ್ರಗಳನ್ನು ಅವನೊಂದಿಗೆ ಹಂಚಿಕೊಂಡಿದ್ದಾನೆ ಎಂದು ಅಧಿಕಾರಿ ಹೇಳಿದರು. ಮಾಡ್ಯೂಲ್‌ನ ಇತರ ಕಾರ್ಯಕರ್ತರನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Recent Articles

spot_img

Related Stories

Share via
Copy link