ಇಂಗ್ಲೆಂಡ್‌ : ರಾಜ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ…!

ಲಂಡನ್:

    ಸೂರ್ಯ ಮುಳುಗದ ಸಾರ್ಮಜ್ಯ  ಬ್ರಿಟನ್‌ ನ ರಾಜ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ ಸಮಾರಂಭವು ಇಂದು ವೈಭವೋಪೇತವಾಗಿ ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಗಣ್ಯಾತಿಗಣ್ಯರ ದಂಡೇ ಇಲ್ಲಿನ ಬಕಿಂಗ್‌ಹ್ಯಾಮ್‌ ಅರಮನೆಗೆ ಹರಿದು ಬಂದಿದೆ.

      ವಾರಾಂತ್ಯದಲ್ಲಿ ನಡೆಯುತ್ತಿರುವ ಪಟ್ಟಾಭಿಷೇಕ ಸಮಾರಂಭದಲ್ಲಿ ಚಾರ್ಲ್ಸ್‌ ಮತ್ತು ಅವರ ಪತ್ನಿ ಕ್ಯಾಮಿಲ್ಲಾ ಕೇಂದ್ರಬಿಂದುವಾಗಿದ್ದಾರೆ.

     ಈ ಐತಿಹಾಸಿಕ ಸಮಾರಂಭಕ್ಕೆ ಸುಮಾರು 2,300 ಅತಿಥಿಗಳು ಸಾಕ್ಷಿಯಾಗಲಿದ್ದಾರೆ. ಇದರಲ್ಲಿ ವಿದೇಶಗಳ ನಾಯಕರು, ರಾಜಮನೆತನದವರು, ಚುನಾಯಿತ ಪ್ರತಿನಿಧಿಗಳು, ನಾಗರಿಕ ಸಮಾಜದ ಪ್ರತಿನಿಧಿಗಳೂ ಇದ್ದಾರೆ.

     ರಾಣಿ 2ನೇ ಎಲಿಜಬೆತ್‌ 1953ರಲ್ಲಿ ಬ್ರಿಟನ್‌ ರಾಣಿಯಾಗಿ ಕಿರೀಟ ಧರಿಸಿ ವೆಸ್ಟ್‌ಮಿನ್‌ಸ್ಟರ್‌ ಅಬೆ ಸೇರಿದ ಸಮಾರಂಭದಲ್ಲಿ 8 ಸಾವಿರಕ್ಕೂ ಹೆಚ್ಚು ಅತಿಥಿಮಹೋದಯರು ಭಾಗಿಯಾಗಿದ್ದರು.

      ಪಟ್ಟಾಭಿಷೇಕ ಸಮಾರಂಭಕ್ಕೆ ಯಾರೆಲ್ಲ ಗಣ್ಯರು ಭಾಗವಹಿಸಬಹುದು ಎನ್ನುವ ಕುತೂಹಲದ ನಡುವೆ ಯಾರು ಗೈರು ಆಗಬಹುದೆಂಬ ಚರ್ಚೆಗಳೂ ನಡೆಯುತ್ತಿವೆ.

      ರಾಜನ ಕಿರಿಯ ಪುತ್ರ, ರಾಜಕುಮಾರ ಹ್ಯಾರಿ ರಾಜಪ್ರಭುತ್ವದ ಕರ್ತವ್ಯಗಳನ್ನು ತ್ಯಜಿಸಿ, ಸಾಮಾನ್ಯ ಜೀವನ ನಡೆಸಲು ರಾಜ ಪರಿವಾರದಿಂದ ಹೊರನಡೆದ ನಂತರ ಪರಿವಾರದಿಂದ ಭಾರಿ ಟೀಕೆ ಮತ್ತು ಕೆಂಗಣ್ಣಿಗೆ ಗುರಿಯಾಗಿದ್ದರು. ಪಟ್ಟಾಭಿಷೇಕ ಸಮಾರಂಭಕ್ಕೆ ಹ್ಯಾರಿ ಹಾಜರಾಗಬಹುದೆಂದು ನಿರೀಕ್ಷಿಸಲಾಗಿದೆ. ಆದರೆ, ದಿನದ ಬೇರೆ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುವುದಿಲ್ಲ ಎನ್ನಲಾಗಿದೆ. ಹ್ಯಾರಿ ಅವರ ಪತ್ನಿ ಮೇಘನ್ ಅವರು ತಮ್ಮ ಇಬ್ಬರು ಮಕ್ಕಳಾದ ಲಿಲಿಬೆಟ್ ಮತ್ತು ಅರ್ಚಿಯೊಂದಿಗೆ ಕ್ಯಾಲಿಫೋರ್ನಿಯಾದಲ್ಲೇ ಉಳಿದುಕೊಂಡಿದ್ದಾರೆ.

     ಪಟ್ಟಾಭಿಷೇಕ ಸಮಾರಂಭದಲ್ಲಿ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಸೇರಿದಂತೆ ಬ್ರಿಟನ್ ಸಂಸತ್‌ನ 80 ಸದಸ್ಯರು, ಚಾರಿಟಿಗಾಗಿ ದೇಣಿಗೆ ಸಂಗ್ರಹಿಸಲು ತನ್ನ ಗಾರ್ಡನ್ನಿನ ಗುಡಾರದಲ್ಲೇ ಮೂರು ವರ್ಷಗಳ ಕಾಲ ಮಲಗಿದ ಇಂಗ್ಲಿಷ್ ಸ್ಕೂಲ್ ಬಾಯ್ ಮ್ಯಾಕ್ಸ್ ವೂಸಿ ಸೇರಿದಂತೆ ನೂರಾರು ಪ್ರಭಾವಿ ನಾಯಕರು ಪಾಲ್ಗೊಳ್ಳಲಿದ್ದಾರೆ.

    ಭಾರತದ ಪರವಾಗಿ ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲದೆ, ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬೆನಿಸ್‌, ಚೀನಾ ಉಪಾಧ್ಯಕ್ಷ ಹ್ಯಾನ್‌ ಝೆಂಗ್‌, ಯುರೋಪಿಯನ್‌ ಕಮಿಷನ್‌ ಅಧ್ಯಕ್ಷೆ ಉರ್ಸುಲಾ ವಾನ್‌ ಡೇರ್‌ ಲೆಯೆನ್‌, ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌, ಜರ್ಮನಿ ಅಧ್ಯಕ್ಷ ಫ್ರಾಂಕ್‌ ವಾಲ್ಟರ್‌ ಸ್ಟೇನ್ಮಿಯರ್‌, ನ್ಯೂಜಿಲೆಂಡ್‌ ಪ್ರಧಾನಿ ಕ್ರಿಸ್‌ ಹಿಪ್‌ಕಿನ್ಸ್‌, ಪಾಕಿಸ್ತಾನ ಪ್ರಧಾನಿ ಶೆಹಬಾಜ್‌ ಶರೀಫ್, ಫಿಲಿಪ್ಪೀನ್ಸ್‌ ಅಧ್ಯಕ್ಷ ಫೆರ್ಡಿನೆಂಡ್‌ ಮಾರ್ಕಸ್‌ ಜೂನಿಯರ್‌ ಸೇರಿದಂತೆ ಸ್ಪೇನ್‌, ಡೆನ್ಮಾರ್ಕ್‌, ಜಪಾನ್‌, ಮೊನಾಕೊ, ಜೋರ್ಡಾನ್‌, ಥಾಯ್ಲೆಂಡ್‌ನ ರಾಜರು ಮತ್ತು ರಾಣಿಯರೂ ಸಮಾರಂಭಕ್ಕೆ ಅತಿಥಿಗಳಾಗಿ ಆಹ್ವಾನಿತರಾಗಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap