ಮುಂಬೈ :
2ನೇ ಪತ್ನಿ ಕಿರಣ್ ರಾವ್ಗೆ ಡಿವೋರ್ಸ್ ನೀಡಿದ ನಂತರ ಆಮಿರ್ ಖಾನ್ ಅವರು ಸಿಂಗಲ್ ಆಗಿಯೇ ಉಳಿದುಕೊಳ್ಳುತ್ತಾರಾ ಅಥವಾ ಇನ್ನೊಂದು ಮದುವೆ ಮಾಡಿಕೊಳ್ಳುತ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿತ್ತು. ಆಮಿರ್ ಖಾನ್ ಅವರಿಗೆ ಬೇರೆ ಸುಂದರಿಯ ಜೊತೆ ಆಪ್ತತೆ ಹೆಚ್ಚಿದ್ದರಿಂದಲೇ ಕಿರಣ್ ರಾವ್ ಜೊತೆಗಿನ ಸಂಸಾರ ಮುರಿದುಬಿತ್ತು ಎಂಬ ಮಾತು ಕೇಳಿಬಂದಿತ್ತು. ಅದೇನೇ ಇರಲಿ, ಆಮಿರ್ ಖಾನ್ ಅವರು 3ನೇ ಮದುವೆ ಸಜ್ಜಾಗಿರುವುದು ನಿಜವಾಗಿದೆ. ಬೆಂಗಳೂರು ಮೂಲದ ಮಹಿಳೆಯ ಜೊತೆಗೆ ಅವರು ರಿಲೇಷನ್ಶಿಪ್ನಲ್ಲಿ ಇದ್ದಾರೆ. ತಮ್ಮ ಹೊಸ ಪ್ರೇಯಸಿಯ ಹೆಸರು ಗೌರಿ ಎಂದು ಆಮಿರ್ ಖಾನ್ ಹೇಳಿದ್ದಾರೆ.
ಆಮಿರ್ ಖಾನ್ ಅವರಿಗೆ ಈಗ 60 ವರ್ಷ ವಯಸ್ಸು. ಮೊಮ್ಮಕ್ಕಳ ಜೊತೆ ಆಟ ಆಡಿಕೊಂಡು ಇರಬೇಕಾಗಿದ್ದ ಅವರು 3ನೇ ಮದುವೆ ಆಗಲು ಬಗ್ಗೆ ಆಲೋಚಿಸಿದ್ದಾರೆ ಎಂದರೆ ಅಭಿಮಾನಿಗಳಿಗೆ ಅಚ್ಚರಿ ಆಗುವುದು ಸಹಜ. ಗೌರಿ ಮತ್ತು ಆಮಿರ್ ಖಾನ್ ಅವರಿಗೆ 25 ವರ್ಷಗಳ ಹಿಂದೆಯೇ ಪರಿಚಯವಿತ್ತು. ಆದರೆ ಕೆಲವು ವರ್ಷ ಸಂಪರ್ಕದಲ್ಲಿ ಇರಲಿಲ್ಲವಂತೆ. ಕಳೆದ ಒಂದೂವರೆ ವರ್ಷದಿಂದ ಅವರಿಬ್ಬರು ಒಟ್ಟಿಗೆ ವಾಸಮಾಡಲು ಆರಂಭಿಸಿದ್ದಾರೆ.
ಮೊದಲೇ ಹೇಳಿದಂತೆ ಗೌರಿ ಅವರು ಬೆಂಗಳೂರಿನವರು. ಅವರ ತಾಯಿ ರಿಟಾ ಬೆಂಗಳೂರಿನಲ್ಲಿ ಸಲೂನ್ ಹೊಂದಿದ್ದಾರೆ. ಮೊದಲಿನಿಂದಲೂ ಗೌರಿ ಅವರು ಬೆಂಗಳೂರಿನಲ್ಲೇ ವಾಸವಾಗಿದ್ದಾರೆ. ಬ್ಲೂ ಮೌಂಟೇನ್ ಶಾಲೆಯಲ್ಲಿ ಅವರು ವಿದ್ಯಾಭ್ಯಾಸ ಮಾಡಿದ್ದಾರೆ. ಲಂಡನ್ನ ಯೂನಿವರ್ಸಿಟಿ ಆಫ್ ಆರ್ಟ್ಸ್ನಲ್ಲಿ ಅವರು ಫ್ಯಾಷನ್ ಹಾಗೂ ಫೋಟೋಗ್ರಫಿ ಕುರಿತು ಉನ್ನತ ಶಿಕ್ಷಣ ಪಡೆದಿದ್ದಾರೆ. ಸದ್ಯಕ್ಕೆ ಅವರು ಮುಂಬೈನಲ್ಲಿ ತಮ್ಮದೇ ಸಲೂನ್ ನಡೆಸುತ್ತಿದ್ದಾರೆ.
