ತುಮಕೂರು:
ಪ್ರೊ.ಸಿದ್ದೇಗೌಡರ ಅವಧಿ ಮುಗಿಯುವ ವೇಳೆಗೆ ಕ್ಯಾಂಪಸ್ಗಾಗಿ ಬಂತು 10 ಕೋಟಿ ಅನುದಾನ
ತುಮಕೂರು ವಿವಿ ಕುಲಪತಿಗಳಾದ ಪ್ರೊ.ವೈ.ಎಸ್.ಸಿದ್ದೇಗೌಡ ಅವರ ಅಧಿಕಾರವಧಿ ಇದೇ ಮಾ.26ಕ್ಕೆ ಕೊನೆಗೊಳ್ಳಲಿದ್ದು, ಕುಲಪತಿಗಳ ಅವಧಿ ಅಂತ್ಯದ ವೇಳೆಗೆ ನೂತನ ಕ್ಯಾಂಪಸ್ಗೆ 10 ಕೋಟಿ ಅನುದಾನ ಬಜೆಟ್ನಲ್ಲಿ ಬಿಡುಗಡೆಯಾಗಿದೆ. ಆದರೆ 4 ಕÀುಲಪತಿಗಳ ಅವಧಿ ಮುಗಿದರೂ ವಿವಿ ಕ್ಯಾಂಪಸ್ ನಿರ್ಮಾಣ ಪೂರ್ಣವಾಗದಿರುವುದು ಶೈಕ್ಷಣಿಕ ಜಿಲ್ಲೆ ಎಂಬ ಅಭಿದಾನಕ್ಕೆ ಪಾತ್ರವಾಗಿರುವ ಕಲ್ಪತರು ಜಿಲ್ಲೆಗೆ ಕಪ್ಪುಚುಕ್ಕೆಯೆನಿಸಿದೆ.
ಡಾ.ಜಿ.ಪರಮೇಶ್ವರ ಉನ್ನತ ಶಿಕ್ಷಣ ಸಚಿವರಾಗಿದ್ದಾಗ 2004ರಲ್ಲಿ ರಾಜ್ಯದ ಮೊದಲ ಜಿಲ್ಲಾಮಟ್ಟದ ವಿಶ್ವವಿದ್ಯಾಲಯವಾಗಿ ತುಮಕೂರು ವಿವಿಯನ್ನು ಅಸ್ಥಿತ್ವಕ್ಕೆ ತರಲಾಯಿತು. ಆದರೆ ವಿವಿಗೆ ಪ್ರತ್ಯೇಕ ಕ್ಯಾಂಪಸ್ ನಿರ್ಮಾಣ ಮಾತ್ರ 18 ವರ್ಷ ಪೂರೈಸುತ್ತಾ ಬಂದರೂ ಪೂರ್ಣಗೊಂಡಿಲ್ಲ.
ಆರಂಭದಲ್ಲಿ ಅಂಬೇಡ್ಕರ್ ಭವನದಲ್ಲಿ ವಿವಿ ಕಾರ್ಯಾರಂಭ ಮಾಡಿದಾಗ ಕ್ಯಾಂಪಸ್ಗೆಂದು ದೇವರಾಯನದುರ್ಗ ನವೋದಯ ಶಾಲೆ ಬಳಿ 60ಕ್ಕೂ ಅಧಿಕ ಎಕರೆ ಜಾಗವನ್ನು ನೀಡಲಾಗಿತ್ತು. ಆದರೆ ಈ ಜಾಗ ಅರಣ್ಯ ವ್ಯಾಪ್ತಿಗೆ ಸೇರುತ್ತದೆಂದು ಪರಿಸರವಾದಿಗಳು ಆಕ್ಷೇಪಿಸುವ ಜೊತೆಗೆ ಅರಣ್ಯ ಇಲಾಖೆ ತಕರಾರಿನಿಂದಾಗಿ ಆಗಿನ ವಿವಿ ಆಡಳಿತಾಧಿಕಾರಿ ಎಚ್.ಭಾಸ್ಕರ್ ಹಾಗೂ ಸಂಸ್ಥಾಪಕ ಕುಲಪತಿ ಡಾ.ಓ ಅನಂತರಾಮಯ್ಯ ಶತಪ್ರಯತ್ನಪಟ್ಟರೂ ಈ ಜಾಗ ಧಕ್ಕದಾಯಿತು.
ಸಂಯೋಜಿತ ಕಾಲೇಜಲ್ಲೇ ತಾತ್ಕಾಲಿಕ ಕ್ಯಾಂಪಸ್:
ನಂತರ ಕುಲಪತಿಗಳಾಗಿ ಬಂದ ಡಾ.ಎಸ್.ಸಿ.ಶರ್ಮಾ ಅವರ ಅವಧಿಯಲ್ಲಿ ನಗರದ ಹೃದಯಭಾಗದಲ್ಲಿನ ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಜಾಗವನ್ನು ವಿವಿ ಸಂಯೋಜಿತ ಕಾಲೇಜಾಗಿ ಪರಿವರ್ತಿಸಿ ಆಡಳಿತ ಕಚೇರಿ, ತಾತ್ಕಾಲಿಕ ಕ್ಯಾಂಪಸ್ ವ್ಯವಸ್ಥೆಯನ್ನು ನಿರ್ಮಿಸಿದರು.
ಇದರ ಮಧ್ಯೆಯೇ ನಾಗವಲ್ಲಿ ಬಳಿ ಬಿದರೆಕಟ್ಟೆ ಕಾವಲ್ನಲ್ಲಿ 240.10 ಎಕರೆ ವಿವಿ ಕ್ಯಾಂಪಸ್ಗೆ ಜಾಗ ಮಂಜೂರು ಮಾಡಲಾಯಿತು. ನಂತರ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡ ಪ್ರೊ.ಎ.ಎಚ್.ರಾಜಾಸಾಬ್ ಅವರ ಅವಧಿಯಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಬಿದರೆಕಟ್ಟೆ ಕಾವಲ್ ಕ್ಯಾಂಪಸ್ ಜಾಗವನ್ನು ಗೆ ವಿವಿಯ ಸುಪರ್ದಿಗೆ ನೀಡಿ 2016ರಲ್ಲಿಕ್ಯಾಂಪಸ್ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಜೊತೆಗೆ ಬಜೆಟ್ನಲ್ಲಿ 40 ಕೋಟಿ ಅನುದಾನವನ್ನು ಘೋಷಿಸಲಾಯಿತು. ಆದರೆ ವಿಶೇಷ ಅನುದಾನ ಮಾತ್ರ ಬಿಡುಗಡೆಯಾಗಲಿಲ್ಲ. ಬದಲಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಹಾಸ್ಟೆಲ್ ನಿರ್ಮಾಣಕ್ಕೆಂದು 17 ಕೋಟಿ ಬಿಡುಗಡೆ ಮಾಡಲಾಯಿತು.
2018ರಲ್ಲಿ ವಿವಿಯ ನಾಲ್ಕನೇ ಕುಲಪತಿಗಳಾಗಿ ಪ್ರೊ.ವೈ.ಎಸ್.ಸಿದ್ದೇಗೌಡ ಅವರು ಅಧಿಕಾರವಹಿಸಿಕೊಂಡಿದ್ದ ಫೌಂಡೇಶನ್ ಹಂತಕ್ಕೆ ಬಂದಿದ್ದ ಕ್ಯಾಂಪಸ್ ಕಟ್ಟಡ ಕಾಮಗಾರಿ ವೇಗಕ್ಕೆ ಪ್ರಯತ್ನಿಸಿದರಾದರೂ ಎದುರಾದ ಎರಡು ವರ್ಷದ ಕೊರೊನಾ ಅಲೆ, ಅನುದಾನ ಕೊರತೆ ಕ್ಯಾಂಪಸ್ ಪೂರ್ಣಕ್ಕೆ ಅಡ್ಡಿಯಾಯಿತು. ಆಕಾಡೆಮಿಕ್ ಬ್ಲಾಕ್ಗೆ ಅವಶ್ಯಕವಾಗಿದ್ದ 36 ಕೋಟಿ ಅನುದಾನದಲ್ಲಿ 12 ಕೋಟಿ ಅನುದಾನ ಮಾತ್ರ ಲಭ್ಯವಾಗಿದ್ದು, ರೂಸಾದಿಂದ 5 ಕೋಟಿ 40 ಲಕ್ಷ ಅನುದಾನ ದೊರೆಯಿತು.
ಜೊತೆಗೆ ಯುಜಿಸಿಯಿಂದ 4 ಕೋಟಿ ಅನುದಾನ ತರಿಸಿ ಕಲಾಭವನ, ಕರ್ನಾಟಕ ವಿಜ್ಞಾನ, ತಂತ್ರಜ್ಞಾನ ಅಕಾಡೆಮಿಯ 4 ಕೋಟಿ ಅನುದಾನದಲ್ಲಿ ವಿಜ್ಞಾನ ಕೇಂದ್ರ, 3 ಕೋಟಿ ವೆಚ್ಚದಲ್ಲಿ ಪರೀಕ್ಷಾ ಪೂರ್ವ ತರಬೇತಿ ಕೇಂದ್ರ ನಿರ್ಮಾಣಮಾಡಲಾಗುತ್ತಿದೆ. ಪ್ರಸಕ್ತ ಸಾಲಿನ ಬಜೆಟ್ನಲ್ಲಿ 2016ರಲ್ಲಿ ಘೋಷಿಸಲಾದ 40 ಕೋಟಿಯಲ್ಲಿ 10 ಕೋಟಿ ಅನುದಾನ ಹಂಚಿಕೆಯಾಗಿದ್ದು, ಪಿಜಿ ಕೋರ್ಸ್ ಸ್ಥಳಾಂತರಕ್ಕೆ ಅಗತ್ಯ ಸಿದ್ದತೆ ಮಾಡಿಕೊಂಡು ಅಧಿಕಾರವಧಿ ಮುಗಿಯುವದರೊಳಗೆ ನೂತನ ಕ್ಯಾಂಪಸ್ನಲ್ಲಿ ತರಗತಿ ಶುರು ಮಾಡಬೇಕೆಂದುಕೊಂಡಿದ್ದ ಕುಲಪತಿಗಳ ಸಂಕಲ್ಪ ಈಡೇರದಾಗಿದೆ.
ಮತ್ತೊಂದೆಡೆ ಹೊಸ ಕ್ಯಾಂಪಸ್ ದೂರವಿರುವ ಕಾರಣಕ್ಕೆ ಅಲ್ಲಿಗೆ ತೆರಳಿ ತರಗತಿ ನಡೆಸಲು ಕೆಲವು ಪ್ರಾಧ್ಯಾಪಕರೇ ಸಿದ್ದರಿಲ್ಲ. ಸಿಂಡಿಕೇಟ್, ಆಕಾಡೆಮಿಕ್ ಕೌನ್ಸಿಲ್ ಸದಸ್ಯರಲ್ಲೂ ಸಹಮತವಿಲ್ಲ. ಇದು ಸಹ ಕ್ಯಾಂಪಸ್ ಆರಂಭಕ್ಕೆ ಹಿನ್ನಡೆಯಾಗುತ್ತದೆ ಎಂಬ ಮಾತುಗಳು ವಿವಿ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಈ ಗೊಂದಲಗಳೇನೇ ಇರಲಿ ಕೋಟಿಗಟ್ಟಲೇ ವೆಚ್ಚ ಮಾಡಿ ಕಾಮಗಾರಿ ಕೈಗೊಂಡಿರುವ ತುಮಕೂರು ವಿವಿ ಕ್ಯಾಂಪಸ್ ಆದಷ್ಟು ಶೀಘ್ರ ಲೋರ್ಕಾಪಣೆಗೊಂಡು ತರಗತಿಗಳು ನಡೆಯಬೇಕಿದೆ ಎಂಬುದು ಪ್ರಜ್ಞಾವಂತರ ಒತ್ತಾಯವಾಗಿದೆ.
ಪ್ರಭಾವಿ ಸಚಿವರುಗಳು, ಶಾಸಕರಿದ್ದರೂ ವಿಳಂಬವೇಕೆ?
ಮಾ.26ಕ್ಕೆ ಹಾಲಿ ಕುಲಪತಿ ಪ್ರೊ.ವೈಎಸ್.ಸಿದ್ದೇಗೌಡ ಅಧಿಕಾರವಧಿ ಕೊನೆಗೊಳ್ಳಲಿದ್ದು, ಹೊಸ ಕುಲಪತಿ ನೇಮಕವಾಗುವವರೆಗೂ ತುಮಕೂರು ವಿವಿ ಕ್ಯಾಂಪಸ್ ನಿರ್ಮಾಣಗೊಳ್ಳುವ ಕಾರ್ಯ ಮತ್ತಷ್ಟು ವಿಳಂಬವಾಗುವುದು ನಿಶ್ಚಿತವೆನಿಸಿದೆ. ಜಿಲ್ಲೆಯವರೆ ಶಿಕ್ಷಣ ಸಚಿವರು, ಇಬ್ಬರು ಮಾಜಿ ಉನ್ನತಶಿಕ್ಷಣ ಸಚಿವರು, ಕಾನೂನು ಸಚಿವರು ಪ್ರಭಾವಿ ಸಂಸದರು, ಕೇಂದ್ರ ಸಚಿವರು. ಘಟಾನುಘಟಿ ರಾಜಕೀಯನೇತಾರರು ಜಿಲ್ಲೆಯನ್ನು ಪ್ರತಿನಿಧಿಸುತ್ತಿದ್ದರೂ ಹೊಸ ಕ್ಯಾಂಪಸ್ ನಿರ್ಮಾಣ ಪೂರ್ಣಗೊಳ್ಳದಿರುವುದು ಜಿಲ್ಲೆಯ ಶೈಕ್ಷಣಿಕ ವಲಯದಲ್ಲಿ ಬೇಸರಕ್ಕೆ ಕಾರಣವಾಗಿದೆ.
ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಶಂಕುಸ್ಥಾಪನೆಯಾಗಿದ್ದ ಕ್ಯಾಂಪಸ್ ಪೂರ್ಣಗೊಳಿಸಲು ಶತಪ್ರಯತ್ನ ಹಾಕಿದ್ದೇನೆ. ಸರಕಾರದಿಂದ 2016ರಲ್ಲಿ ಮಂಜೂರಾಗಿದ್ದ 40 ಕೋಟಿ ಅನುದಾನದಲ್ಲಿ ಮೊದಲ ಕಂತಾಗಿ 10 ಕೋಟಿ ಮಾ.4ರಂದು ಮಂಡಿಸಿದ ಬಜೆಟ್ನಲ್ಲಿ ಅಲೋಕೇಟ್ ಆಗಿದೆ. ಸಮಾಜ ಕಲ್ಯಾಣ ಇಲಾಖೆ ಅನುದಾನ ಹಾಸ್ಟಲ್ ಕಟ್ಟಡ. ಪರೀಕ್ಷಾಪೂರ್ವ ತರಬೇತಿ ಕೇಂದ್ರ, ಅಕಾಡೆಮಿಕ್ 1 ಬ್ಲಾಕ್ ಸಹ ಪೂರ್ಣಗೊಂಡಿದ್ದು ಈಗಾಗಲೇ ನಾಲ್ಕು ಪಿಜಿ ಕೋರ್ಸ್ಗಳನ್ನು ಹೊಸ ಕ್ಯಾಂಪಸ್ನಲ್ಲಿ ಸ್ಥಳಾಂತರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿತ್ತು. ಆದರೆ ಅದು ಸಾಕಾರಗೊಳ್ಳಲಿಲ್ಲವೆಂಬ ಬೇಸರವಿದೆ. ಆದರೆ ಎನ್ಇಪಿ ಅನುಷ್ಠಾನದಲ್ಲಿ ತುಮಕೂರು ವಿವಿ ರಾಜ್ಯಕ್ಕೆ ಮೊದಲ ಸ್ಥಾನಕ್ಕೆ ತಂದ ಸಮಾಧಾನವಿದೆ. ಶಿರಾದಲ್ಲಿಸ್ನಾತಕೋತ್ತರ ಕೇಂದ್ರ ಕಟ್ಟಡ ಉದ್ಘಾಟಿಸಲಾಗಿದೆ.
–ಪ್ರೊ.ವೈ.ಎಸ್.ಸಿದ್ದೇಗೌಡ, ಕುಲಪತಿ ತುಮಕೂರು ವಿವಿ
– ಎಸ್.ಹರೀಶ್ ಆಚಾರ್ಯ ತುಮಕೂರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ