ರಾಯಚೂರು:
ಮಟನ್ ಊಟ ಮಾಡಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ರಾಯಚೂರಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ವಿಷಾಹಾರ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಗಂಡ ಹೆಂಡತಿ ಮತ್ತು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಭೀಮಣ್ಣ( 60), ಈರಮ್ಮ ( 57) ಮಲ್ಲೇಶ (21), ಪಾರ್ವತಿ ( 19) ಮೃತರು. ಮತ್ತೋರ್ವ ಮಗಳು ಮಲ್ಲಮ್ಮ (23) ಸ್ಥಿತಿ ಗಂಭೀರವಾಗಿದೆ.
ಮಾಂಸಾಹಾರ ಸೇವನೆ ಮಾಡಿದ್ದು, ಫುಡ್ ಪಾಯಿಸನ್ ನಿಂದ ಸಾವು ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಬುಧವಾರ ಮಧ್ಯಾಹ್ನ ಊಟ ಮಾಡಿ ಜಮೀನಿಗೆ ತೆರಳಿದ್ದರು. ಜಮೀನಿನಲ್ಲಿ ಕೆಲಸ ಮಾಡುವಾಗ ಹೊಟ್ಟೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗುತ್ತಿದೆ. ಸಾವಿನ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ವರದಿ ಪ್ರಕಾರ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ 5 ಜನ ಸದಸ್ಯರಿರುವ ಭೀಮಣ್ಣ ಎಂಬುವವರ ಕುಟುಂಬ 2 ದಿನದ ಹಿಂದೆ (ಬುಧವಾರ) ಜೊತೆಯಾಗಿ ಮಾಂಸದ ಜೊತೆ, ಚಪಾತಿ, ತರಕಾರಿ ಪಲ್ಯ ಸೇವಿಸಿದ್ದರು. ಅದಾಗಿ ಮಾರನೆಯ ದಿನ ಎಲ್ಲರಿಗೂ ವಾಂತಿ ಶುರುವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದ್ದರಿಂದ ಕುಟುಂಬದ ಹಿರಿಯ ಭೀಮಣ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದಾದ ಬಳಿಕ ಉಳಿದ 4 ಜನ ಭೀಮಣ್ಣ ಪತ್ನಿ, ಇಬ್ಬರು ಹೆಣ್ಣುಮಕ್ಕಳು, ಓರ್ವ ಮಗನನ್ನು ತಕ್ಷಣ ರಿಮ್ಸ್ ಆಸ್ಪತ್ರೆಗೆ ನಿನ್ನೆ ಸಂಜೆ 5 ಗಂಟೆಗೆ ದಾಖಲಿಸಲಾಗಿತ್ತು. ಬಹು ಅಂಗಾಗ ವೈಫಲ್ಯವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಓರ್ವ ಮಗಳನ್ನು ಬಿಟ್ಟು ಮೂವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ ಎಂದು ರಾಯಚೂರು ಜಿಲ್ಲಾಧಿಕಾರಿ ಕೆ.ನಿತೀಶ್ ಮಾಹಿತಿ ನೀಡಿದ್ದಾರೆ.
ಕೋಮಾದಲ್ಲಿರುವ ಮಲ್ಲಮ್ಮ ಸ್ಥಿತಿ ಗಂಭೀರವಾಗಿದ್ದು ಅವರನ್ನು ವೆಂಟಿಲೇಟರ್ ನಲ್ಲಿರಿಸಿದ್ದು, ಆದಷ್ಟು ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಲಾಗುತ್ತಿದೆ. ಇನ್ನು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಿದ್ದೇವೆ ಎಂದಿದ್ದಾರೆ.