ಸುರೇಂದ್ರನಗರ:
ಗುಜರಾತಿನ ಸುರೇಂದ್ರನಗರ ಜಿಲ್ಲೆಯಲ್ಲಿ ಪಿಕಪ್ ವ್ಯಾನ್ ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಭೀಕರ ಅಪಘಾತದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ ಮತ್ತು 16 ಮಂದಿ ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ 10:30ರ ಸುಮಾರಿಗೆ ಚೋಟಿಲಾ ಬಳಿ ಈ ಅಪಘಾತ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಐ ಬಿ ವಾಲ್ವಿ ಅವರು ತಿಳಿಸಿದ್ದಾರೆ.
ಜಿಲ್ಲೆಯ ಲಿಂಬ್ಡಿ ತಾಲೂಕಿನ ಶಿಯಾನಿ ಗ್ರಾಮದಿಂದ ಸೋಮನಾಥಕ್ಕೆ ತೆರಳುತ್ತಿದ್ದ ವ್ಯಾನ್‌ನಲ್ಲಿ 20 ಪ್ರಯಾಣಿಕರಿದ್ದರು. ಡಿಕ್ಕಿಯ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.
ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ರಸ್ತೆ ಬದಿಯ ಹೋಟೆಲ್‌ನಲ್ಲಿ ನಿಲ್ಲಿಸಲು ಬಲಕ್ಕೆ ತಿರುಗಿದೆ. ಈ ವೇಳೆ ಎದುರಗಡೆಯಿಂದ ಬರುತ್ತಿದ್ದ ವ್ಯಾನ್ ಟ್ರಕ್ ಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಗಾಯಗೊಂಡಿರುವ 16 ಮಂದಿಯನ್ನು ರಾಜ್‌ಕೋಟ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಮೃತರನ್ನು ಮಗ್ಜಿಬೆನ್ ರೆತಾರಿಯಾ(72), ಗಲಾಲ್ಬೆನ್ ರೆತಾರಿಯಾ(60), ಮಂಜುಬೆನ್ ರೆತಾರಿಯಾ(65) ಮತ್ತು ಗೌರಿಬೆನ್ ರೆತಾರಿಯಾ(68) ಎಂದು ಗುರುತಿಸಲಾಗಿದೆ.