ಭುವನೇಶ್ವರ:
ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಮತ್ತು ಅವರ ಸಚಿವ ಸಂಪುಟದ ಸಮ್ಮುಖದಲ್ಲಿ ಪುರಿಯ ಜಗನ್ನಾಥ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ಭಕ್ತರಿಗಾಗಿ ಗುರುವಾರ ಬೆಳಗ್ಗೆ ತೆರೆಯಲಾಯಿತು.
ಕೋವಿಡ್-19 ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಮುಚ್ಚಲಾಗಿದ್ದ 12 ನೇ ಶತಮಾನದ ದೇಗುಲದ ಮೂರು ದ್ವಾರಗಳನ್ನು ಭಗವಾನ್ ಜಗನ್ನಾಥನ ‘ಮಂಗಲ ಆರತಿ’ ಆಚರಣೆಯ ನಂತರ ಮತ್ತೆ ತೆರೆಯಲಾಯಿತು. ಮುಖ್ಯಮಂತ್ರಿ, ಇಬ್ಬರು ಉಪ ಮುಖ್ಯಮಂತ್ರಿಗಳು, ಸಚಿವರು, ಹಲವು ಬಿಜೆಪಿ ಸಂಸದರು ಮತ್ತು ಪಕ್ಷದ ಮುಖಂಡರು ದೇವಾಲಯಕ್ಕೆ ಭೇಟಿ ನೀಡಿ ಜಗನ್ನಾಥ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿದರು. ಅವರು ದೇವಾಲಯದ ಸಂಕೀರ್ಣದ ಸುತ್ತಲೂ ‘ಪರಿಕ್ರಮ’ವನ್ನೂ ನಡೆಸಿದರು.
ಪ್ರಮಾಣವಚನ ಸ್ವೀಕಾರ ಸಮಾರಂಭದ ನಂತರ, ಬಿಜೆಪಿ ಸರ್ಕಾರವು ನಿನ್ನೆ ಬುಧವಾರ ಸಂಜೆ ದೇವಾಲಯದ ಎಲ್ಲಾ ನಾಲ್ಕು ದ್ವಾರಗಳನ್ನು ತೆರೆಯಲು ತನ್ನ ಮೊದಲ ನಿರ್ಧಾರವನ್ನು ತೆಗೆದುಕೊಂಡಿದೆ. ಇಂದು, ‘ಮಂಗಳ ಆರತಿ’ ಆಚರಣೆಯ ನಂತರ ಬೆಳಗ್ಗೆ 6.30 ಕ್ಕೆ ಗೇಟ್‌ಗಳನ್ನು ಮತ್ತೆ ತೆರೆಯಲಾಯಿತು ಎಂದು ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಪುರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.