BSF ಯೋಧರಿಗೆ ಕೊಳಕು ಬೋಗಿಗಳಿರುವ ರೈಲು ವ್ಯವಸ್ಥೆ: 4 ರೈಲ್ವೇ ಅಧಿಕಾರಿಗಳ ಅಮಾನತು

ನವದೆಹಲಿ:

    ಹಿಂದೂಗಳ ಪವಿತ್ರ ಯಾತ್ರಾ ತಾಣ ಅಮರನಾಥ ಕ್ಷೇತ್ರಕ್ಕೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ನಿಯೋಜನೆಗೊಂಡಿದ್ದ ಬಿಎಸ್ಎಫ್ ಯೋಧನ ಪ್ರಯಾಣಕ್ಕೆ ಕೊಳಕು ಬೋಗಿಗಳಿರುವ ರೈಲು ವ್ಯವಸ್ಥೆ ಒದಗಿಸಿದ್ದು ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ, ವಿಚಾರಣೆಗೆ ಆದೇಶಿಸಿದ್ದಾರೆ.

    ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೇ ಸಚಿವಾಲಯವರು ಹೇಳಿಕೆ ಬಿಡುಗಡೆ ಮಾಡಿದ್ದು, ಭದ್ರತಾ ಪಡೆಗಳ ಘನತೆ ಅತ್ಯುನ್ನತವಾಗಿದೆ ಮತ್ತು ಯಾವುದೇ ಮಟ್ಟದಲ್ಲಿ ಇಂತಹ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಹೇಳಿದೆ.

   ಅಮರನಾಥ ಯಾತ್ರೆಗೆ ಭದ್ರತೆಗಾಗಿ ನಿಯೋಜಿಸಲಾದ ಸುಮಾರು 1200 ಬಿಎಸ್‌ಎಫ್ ಯೋಧರು ಸೋಮವಾರ ಉದಯಪುರದಿಂದ ಜಮ್ಮುವಿಗೆ ಪ್ರಯಾಣ ಬೆಳೆಸಿದ್ದರು. ಆದರೆ, ಯೋಧರ ಪ್ರಯಾಣಕ್ಕೆ ಅತ್ಯಂತ ಕಳಪೆ ಸ್ಥಿತಿಯಲ್ಲಿದ್ದ ಬೋಗಿಗಳ ವ್ಯವಸ್ಥೆ ಮಾಡಲಾಗಿತ್ತು. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ನೆಟ್ಟಿಗರು ಸರ್ಕಾರದ ವಿರುದ್ಧ ಟೀಕೆಗಳನ್ನು ಮಾಡಿದ್ದರು.

   ವೈರಲ್ ಆದ ವಿಡಿಯೋದಲ್ಲಿ ರೈಲಿನ ಕಿಟಕಿಗಳು ಮುರಿದಿರುವುದು, ರೈಲಿನ ಒಳಗಿನ ಸೀಟುಗಳ ಕುಶನ್ ಗಳು ಹರಿದಿರುವುದು ರೈಲಿನ ಮೇಲ್ಚಾವಣಿ ಮುರಿದು ಮಳೆ ಬಂದರೆ ಮಳೆ ನೀರು ರೈಲಿನ ಬೋಗಿಯೊಳಗೇ ನುಗ್ಗುವಂತೆ ಹಾಗೂ ಶೌಚಾಲಯಗಳ ಸ್ಥಿತಿ ವಾಕರಿಕೆ ಬರುವಂತಹ ಸ್ಥಿತಿಯಲ್ಲಿರುವುದು, ಪ್ರಯಾಣಕ್ಕೆ ಯೋಗ್ಯವಲ್ಲದ ರೀತಿಯಲ್ಲಿರುವುದು ಕಂಡು ಬಂದಿತ್ತು.

   ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರೈಲ್ವೇ ಸಚಿವಾಲಯ ಇದೀಗ ಈಶಾನ್ಯ ಗಡಿನಾಡು ರೈಲ್ವೆ (ಎನ್‌ಎಫ್‌ಆರ್) ಅಡಿಯಲ್ಲಿ ಅಲಿಪುರ್ದಾರ್ ವಿಭಾಗದ ಕೋಚಿಂಗ್ ಡಿಪೋ ಅಧಿಕಾರಿ ಮತ್ತು ಮೂವರು ಎಂಜಿನಿಯರ್‌ಗಳನ್ನು ಅಮಾನತು ಮಾಡಿದೆ. ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ತನಿಖೆಗೂ ಆದೇಶಿಸಲಾಗಿದೆ. ಎಂದು ಸಚಿವರು ತಿಳಿಸಿದ್ದಾರೆ.

   ಇನ್ನು ಘಟನೆ ಸಂಬಂಧ ಹೇಳಿಕೆ ನೀಡಿದ್ದ ರೈಲ್ವೇ ಇಲಾಖೆ, ಆರೋಪಗಳನ್ನು ನಿರಾಕರಿಸಿತ್ತು. ಯೋಧರಿಗೆ ಗುಜರಿ ಬೋಗಿಗಳನ್ನು ನೀಡಲಾಗಿದೆ ಎಂಬ ಆರೋಪ ತಪ್ಪಾಗಿದೆ. ಅಗತ್ಯ ನಿರ್ವಹಣೆ, ದುರಸ್ತಿ ಹಾಗೂ ಶುಚಿಗೊಳಿಸಿದ ನಂತರವೇ ಯಾವುದೇ ಬೋಗಿಗಳನ್ನು ಪ್ರಯಾಣಕ್ಕೆ ಒದಗಿಸಲಾಗುತ್ತದೆ ಎಂದು ಹೇಳಿತ್ತು.ರೈಲ್ವೇ ಇಲಾಖೆಯ ಈ ವರ್ತನೆಗೆ ಕಾಂಗ್ರೆಸ್ ಕೂಡ ಕಿಡಿಕಾರಿತ್ತು. ಕಾಂಗ್ರೆಸ್ ವಕ್ತಾರೆ ಶಮಾ ಮುಹಮ್ಮದ್ ಅವರು ಮೋದಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದರು.

   ಸರಕಾರದ ಸಂಪೂರ್ಣ ಗಮನವು ಕೆಲವು ಆಕರ್ಷಕ ರೈಲುಗಳ ಬಗ್ಗೆ ಪ್ರಚಾರವನ್ನು ಪಡೆದುಕೊಳ್ಳುವಲ್ಲೇ ಕೇಂದ್ರೀಕೃತಗೊಂಡಾಗ ಜನರು ಹೀಗೆ ಪ್ರಾಣಿಗಳಂತೆ ಪ್ರಯಾಣಿಸುವುದು ಅನಿವಾರ್ಯವಾಗುತ್ತದೆ. ದೇಶ ಕಾಯುವ ಯೋಧರಿಗೆ ಇಂತಹ ಕೊಳಕು ವ್ಯವಸ್ಧೆ ಒದಗಿಸಿದ ಪ್ರಧಾನಿ ಮೋದಿ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ನಾಚಿಕೆಯಾಗಬೇಕೆಂದು ವಾಗ್ದಾಳಿ ನಡೆಸಿದ್ದರು.

Recent Articles

spot_img

Related Stories

Share via
Copy link