ಬೆಂಗಳೂರು
ಬುದ್ಧ ಗಯಾ ಆಡಳಿತ ಮಂಡಳಿ ವಿವಾದದ ಬಗ್ಗೆ ಜಾಗೃತಿ ಮೂಡಿಸಲು, ರಾಜ್ಯದ ನಾಲ್ಕು ವಿಭಾಗಗಳಲ್ಲಿ ಸಭೆ ಮತ್ತು ಜಾಗೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ಉಪಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ತಿಳಿಸಿದ್ದಾರೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಆಯೋಜಿಸಿದ್ದ ಬುದ್ಧ ಗಯಾ ಆಡಳಿತ ಮಂಡಳಿ ವಿವಾದ-ಇಂದಿನ ನಡೆ ಬೌದ್ಧರ ಕಡೆ ‘ಒಂದು ಸಂವಾದ’ದಲ್ಲಿ ಅವರು ಮಾತನಾಡಿದರು.
ಬುದ್ಧ ಗಯಾ ಮಹಾಬೋಧಿ ಮಹಾವಿಹಾರ ಮುಕ್ತಿ ಆಂದೋಲನ ಸಮಿತಿ ರಚನೆಯಾಗಿದ್ದು, ಜು.೬ರಂದು ಬೆಳಗ್ಗೆ ೧೧:೩೦ಕ್ಕೆ ಮೈಸೂರಿನ ಅಶೋಕ ವೃತ್ತದಲ್ಲಿರುವ ಬುದ್ಧ ವಿಹಾರ ಸಭಾಂಗಣದಲ್ಲಿ ಹಿರಿಯ ಬಿಕ್ಕು ಮನೋರಖ್ಖಿತ ಅವರ ನೇತೃತ್ವದಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಹೇಳಿದರು.
ಜು.೧೪ರಂದು ಬೆಳಗ್ಗೆ ೧೧:೩೦ಕ್ಕೆ ಕಲಬುರ್ಗಿಯ ಸುವರ್ಣ ಕನ್ನಡ ಭವನದಲ್ಲಿ ಬಿಕ್ಕು ವರಜ್ಯೋತಿ ಅವರ ಸಾನಿಧ್ಯದಲ್ಲಿ ಹಾಗೂ ಜು.೨೦ರಂದು ಬೆಳಗ್ಗೆ ೧೧:೩೦ಕ್ಕೆ ಬೆಳಗಾವಿ ಸದಾಶಿವ ನಗರದಲ್ಲಿರುವ ಬುದ್ಧವಿಹಾರದಲ್ಲಿ ದೀಪಕ್ ಕಾಂಬ್ಲೆ ನೇತೃತ್ವದಲ್ಲಿ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.
ಜು.೨೫ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಿಕ್ಕು ಬೋಧಿದತ್ತ ಅವರ ನೇತೃತ್ವದಲ್ಲಿ ಬೃಹತ್ ಸಭೆ ನಡೆಸಲಾಗುತ್ತಿದ್ದು, ಎಐಬಿಎಫ್‌ನ ಕಾರ್ಯದರ್ಶಿ ಡಾ.ಅಶೋಕ್ ಲಾಮಾ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜತೆಗೆ ಬಿಎಸ್‌ಎಫ್‌ಐ ಅಧ್ಯಕ್ಷ ಡಾ.ಚಂದ್ರಬೋಧಿ ಪಾಟೀಲ್ ಸಭೆಯ ಅಧ್ಯಕ್ಷತೆ ವಹಿಸಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಪ್ರಕಟಿಸಲಿದ್ದಾರೆ ಎಂದು ಡಾ.ಎಂ.ವೆಂಕಟಸ್ವಾಮಿ ತಿಳಿಸಿದರು.
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮಾತನಾಡಿ, ಹಿಂದೆ ಇಡೀ ಜಗತ್ತೇ ಬುದ್ಧಮಯವಾಗಿತ್ತು. ಇತಿಹಾಸ ಮತ್ತು ಸಾಹಿತ್ಯ ಎಲ್ಲವನ್ನೂ ತಿರುಚಿ ಚರಿತ್ರೆಯನ್ನೇ ಬದಲಾಯಿಸುವ ಕೆಲಸ ನಡೆದಿದೆ. ಬುದ್ಧರ ತತ್ವವನ್ನು ಜನರಿಗೆ ತಿಳುಸುವ ಕೆಲಸವಾಗಬೇಕಿದೆ. ಬುದ್ಧ ನಮ್ಮೆಲ್ಲರ ಜ್ಞಾನದ ಬೆಳಕು ಎಂದರು.
ನಾವೆಲ್ಲರೂ ಬುದ್ಧರ ಅಂಶವನ್ನು ಒಳಗೊಂಡಿದ್ದಕ್ಕೆ ನಮ್ಮಲ್ಲಿ ಮಾನವೀಯತೆಯಿದೆ. ಬುದ್ಧರನ್ನು ಹೆಚ್ಚು ಅನುಕರಣೆ ಮಾಡಬೇಕು. ಎಲ್ಲ ದೇವರ ಕೈಯಲ್ಲಿ ಆಯುಧಗಳಿವೆ. ಆದರೆ ಬುದ್ಧರ ಕೈಯಲ್ಲಿ ಯಾವುದೇ ಆಯುಧ ಇಲ್ಲ. ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಆಯುಧ ಇಟ್ಟುಕೊಂಡಿದ್ದರೆ ಅವು ದೇವರುಗಳಲ್ಲ ಎಂದರು.
ಇನ್ನೊಬ್ಬರನ್ನು ಹಿಂಸಿಸಲು ಆಯುಧ ಇಟ್ಟುಕೊಂಡಿದ್ದರೆ ಅವು ಕೂಡ ದೇವರುಗಳಲ್ಲ. ದೇವರು ಯಾರನ್ನೂ ಹೊಡೆಯುವುದಿಲ್ಲ. ಹೊಡೆಸಿಕೊಳ್ಳುವುದೂ ಇಲ್ಲ. ದೇವರು ಎಂದರೆ ಎಲ್ಲರನ್ನೂ ಕಾಪಾಡಲು ಇರುವ ಶಕ್ತಿ. ಆ ಶಕ್ತಿಯೇ ಜ್ಞಾನ ಅದೇ ಬುದ್ಧ ಎಂದು ತಿಳಿಸಿದರು.
ಸಂವಾದದಲ್ಲಿ ಬಿಕ್ಕುಣಿ ಬುದ್ಧಮ್ಮ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಎನ್.ಮೂರ್ತಿ, ಆರ್.ಮೋಹನ್‌ರಾಜ್, ಮುನಿರಾಜ, ಜಯಕಾಂತ್ ಚಾಲುಕ್ಯ, ಬಾಲಕೃಷ್ಣ, ಮಂಗಳ ದೊಡ್ಡಮನಿ, ಮತ್ತಿತರರ ಉಪಸ್ಥಿತರಿದ್ದರು.
