ತುಮಕೂರು
ಅಕ್ರಮವಾಗಿ ಬೇರೊಬ್ಬರಿಗೆ ಜಮೀನಿನ ಖಾತೆ ಬದಲಾವಣೆ ಮಾಡಿಕೊಟ್ಟಿದ್ದ ಪ್ರಕರಣದಲ್ಲಿ ಇದನ್ನು ಸರಿಪಡಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣವೊಂದರಲ್ಲಿ ತುಮಕೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯವು ಉಪ ವಿಭಾಗಾಧಿಕಾರಿಗಳಗಿದ್ದ ತಬಸುಮ್ ಜಹೇರಾ ಅವರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ, 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕುಣಿಗಲ್ ತಾಲ್ಲೂಕು ಯಡಿಯೂರು ಹೋಬಳಿ ಅವರಗೆರೆ ಗ್ರಾಮಕ್ಕೆ ಹೊಂದಿಕೊAಡಿರುವ ಸಿದ್ದಾಪುರ ಗ್ರಾಮದ ಸ.ನಂ.45/2 ರಲ್ಲಿ 1 ಎಕರೆ 7 ಗುಂಟೆ ಜಮೀನನ್ನು ವೆಂಕಟಪ್ಪ ಎಂಬುವರು 1961 ರಲ್ಲಿ ಕಸ್ತೂರಯ್ಯ ಎಂಬುವರಿAದ ಖರೀದಿಸಿದ್ದರು. ವೆಂಕಟಪ್ಪನಿಗೆ ಇಬ್ಬರು ಪತ್ನಿಯರಿದ್ದು, ಬರಗಾಲದ ಕಾರಣಕ್ಕಾಗಿ 1976 ರಲ್ಲಿ ಭದ್ರಾವತಿಗೆ ವಲಸೆ ಹೋಗಿದ್ದರು. 1984 ರಲ್ಲಿ ವೆಂಕಟಪ್ಪ ನಿಧನರಾಗಿದ್ದರು.
2013 ರಲ್ಲಿ ವೆಂಕಟಪ್ಪ ಅವರ ಮಗ ಜಯರಾಂ ಎಂಬುವರು ತನ್ನ ತಂದೆಯ ಜಮೀನಿನಲ್ಲಿ ಅಡಿಕೆ ತೋಟ ಮಾಡಲು ದಾಖಲಾತಿಗಳನ್ನು ತನ್ನ ಹೆಸರಿಗೆ ಮಾಡಿಸಿಕೊಡಲು ಮುಂದಾದರು. ತಹಸೀಲ್ದಾರ್ ಕಚೇರಿಗೆ ತೆರಳಿ ಪರಿಶೀಲಿಸಿದಾಗ ಅಚ್ಚರಿ ಕಾದಿತ್ತು. ಸದರಿ ಜಮೀನನ್ನು ಸಿದ್ದಾಪುರದ ವಾಸಿ ಹಾಗೂ ಬೆಂಗಳೂರಿನಲ್ಲಿ ವಾಸವಾಗಿರುವ ಚಂದ್ರಶೇಖರ್ ಮತ್ತು ಅವರ ಅಣ್ಣತಮ್ಮಂದಿರ ಹೆಸರಿಗೆ ಆರ್.ಟಿ.ಸಿ. ಖಾತೆಯಾಗಿತ್ತು.
ಇದರ ಪರಿಶೀಲನೆ ನಡೆಸಿದಾಗ ಸದರಿ ಜಮೀನನ್ನು ಎಕರೆ 7 ಗುಂಟೆ ಬದಲಿಗೆ 1 ಎಕರೆ 34 ಗುಂಟೆ ಎಂದು ಬದಲಿಸಿ ಅದನ್ನು ಜ್ಯೋತಿಪ್ರಕಾಶ್ ಅವರಿಂದ ಖರೀದಿ ಮಾಡಿರುವುದಾಗಿ ದಾಖಲೆಗಳು ಸೃಷ್ಟಿಯಾಗಿದ್ದವು.
ಹೀಗೆ ಅಕ್ರಮವಾಗಿ ಜಮೀನಿನ ಖಾತೆ ಬದಲಾವಣೆಯಾಗಿರುವ ಬಗ್ಗೆ ತಿಳಿಸಿ ಅದನ್ನು ಸರಿಪಡಿಸಲು ತುಮಕೂರು ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ದಾವಾ ಅರ್ಜಿ ಸಲ್ಲಿಸಿದ್ದರು.
ಎಲ್ಲ ದಾಖಲಾತಿಗಳನ್ನೂ ಸಲ್ಲಿಸಿ ಕ್ರಮಬದ್ಧವಾಗಿ ತನ್ನ ಹೆಸರಿಗೆ ಜಮೀನಿನ ಖಾತೆ ಮಾಡಿಕೊಡುವಂತೆ ಉಪ ವಿಭಾಗಾಧಿಕಾರಿ ತಬಸುಮ್ ಜಹೇರಾ ಅವರನ್ನು ಕೇಳಿಕೊಂಡಾಗ ಈ ಬಗ್ಗೆ ಕಚೇರಿಯಲ್ಲಿರುವ ಶಬ್ಬೀರ್ ಅವರನ್ನು ಭೇಟಿ ಮಾಡುವಂತೆ ತಿಳಿಸಿದ್ದರು. ಶಬ್ಬೀರ್ ಭೇಟಿ ಮಾಡಿದಾಗ ಇದಕ್ಕೆಲ್ಲ ಹಣ ಖರ್ಚಾಗುತ್ತದೆ ಎಂದು 35 ಸಾವಿರ ರೂ.ಗಳ ಬೇಡಿಕೆ ಇಟ್ಟಿದ್ದರು. ಅವರು ಹೇಳಿದ ಹಾಗೆ ಹಣವನ್ನು ನೀಡಿದ್ದರು.
ಆದರೆ 1 ತಿಂಗಳಾದರೂ ಏನೂ ಕ್ರಮ ಜರುಗಿಸಲಿಲ್ಲ. ಎ.ಸಿ. ಕಚೇರಿಗೆ ತಿರುಗುವುದೇ ಕೆಲಸವಾಗಿತ್ತು. ಕೊನೆಗೊಂದು ದಿನ ಎ.ಸಿ.ಯವರನ್ನು ಭೇಟಿ ಮಾಡಿದಾಗ ನಿಮ್ಮ ಕೇಸು ಸ್ವಲ್ಪ ಕಷ್ಟ ಇದೆ ಎಂದರು. ಆನಂತರ ಶಬ್ಬೀರ್ ಅವರನ್ನು ಭೇಟಿ ಮಾಡಲಾಗಿ ಇನ್ನಷ್ಟು ಹಣಕ್ಕೆ ಬೇಡಿಕೆ ಇಟ್ಟರು.
ನಾಲ್ಕು ತಿಂಗಳ ಹಿಂದೆಯೇ 35 ಸಾವಿರ ರೂ. ಲಂಚ ಪಡೆದು, ಇದಾದ ನಂತರ ಇನ್ನೂ ಹೆಚ್ಚಿನ 35 ಸಾವಿರ ರೂ.ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟ ಕಾರಣ ಅಸಮಾಧಾನಗೊಂಡ ಜಯರಾಂ ತುಮಕೂರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. 23.5.2017ರಂದು ದೂರು ದಾಖಲಿಸಿಕೊಂಡ ಎಸಿಬಿ ಪೊಲೀಸರು ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದರು.
ಪ್ರಕರಣದ ವಿಚಾರಣೆಯು ತುಮಕೂರು ಲೋಕಾಯುಕ್ತ ವಿಶೇಷ ನ್ಯಾಯಾಲಯವೂ ಆಗಿರುವ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಟಿ.ಪಿ.ರಾಮಲಿಂಗೇಗೌಡ ಅವರು ತಬಸುಮ್ ಜಹೇರಾ ಹಾಗೂ ಶಬ್ಬೀರ್ ಅವರುಗಳಿಗೆ ತಲಾ ನಾಲ್ಕು ವರ್ಷ ಜೈಲು ಶಿಕ್ಷೆ, 20 ಸಾವಿರ ರೂ.ಗಳ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಲೋಕಾಯುಕ್ತ ವಿಶೇಷ ಅಭಿಯೋಜಕ ಆರ್.ಪಿ.ಪ್ರಕಾಶ್ ವಾದಿಸಿದ್ದರು.ತಬಸುಮ್ ಜಹೇರಾ ಅವರು ಪ್ರಸ್ತುತ ಕೆಎಐಡಿಬಿಯಲ್ಲಿ ಎಸ್.ಎಲ್.ಎ.ಓ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ