ನವದೆಹಲಿ:
ಇಡೀ ದೇಶದಾದ್ಯಂತ ಕಳೆದ ಮೂರು ವರ್ಷಗಳಲ್ಲಿ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು 9,703 ಕಿಮೀ ಉದ್ದದ 237 ಯೋಜನೆಳಿಗೆ ಅನುಮೋದನೆ ನೀಡಲಾಗಿದೆ. ಇದಕ್ಕೆ ಸುಮಾರು 1,90,333 ಕೋಟಿ ರೂ. ವೆಚ್ಚವಾಗಿದೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಸಂಸತ್ತಿಗೆ ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, 2022-23, 2023-24, 2024-25 ಹಾಗೂ ಪ್ರಸ್ತುತ ಹಣವಾಸು ವರ್ಷದಲ್ಲಿ, ಒಟ್ಟು 61,462 ಕಿಮೀ ಉದ್ದದ 892 ಯೋಜನೆಗಳನ್ನು (Railway Projects) (267 ಹೊಸ ಮಾರ್ಗಗಳು, 11 ಗೇಜ್ ಪರಿವರ್ತನೆ ಮತ್ತು 614 ದ್ವಿಗುಣಗೊಳಿಸುವಿಕೆ) ಮಂಜೂರು ಮಾಡಲಾಗಿದೆ ಎಂದು ಲಿಖಿತ ಉತ್ತರದಲ್ಲಿ ತಿಳಿಸಿದರು.
2009-2014ರ ಅವಧಿಯಲ್ಲಿ ಒಟ್ಟು 7,599 ಕಿಮೀ (ದಿನಕ್ಕೆ 4.2 ಕಿಮೀ) ಹಳಿಗಳನ್ನು ಮಾತ್ರವೇ ನಿಯೋಜಿಸಲಾಗಿತ್ತು. ಆದ್ರೆ 2014-2025ರ ಅವಧಿಯಲ್ಲಿ ಒಟ್ಟು 34,428 ಕಿಮೀ ಹಳಿಗಳನ್ನು (ದಿನಕ್ಕೆ 8.57 ಕಿಮೀ) ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಹೊಸ ರೈಲ್ವೆ ಯೋಜನೆಗಳ ವೇಗವೂ ಹೆಚ್ಚಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
ಅಲ್ಲದೇ ಪ್ರಯಾಣಿಕರಿಗೆ ವಿಶ್ವ ದರ್ಜೆಯ ಸೌಲಭ್ಯ ಒದಗಿಸುವ ಮತ್ತು ರೈಲು ಕಾರ್ಯಾಚರಣೆಯಲ್ಲಿ ದಕ್ಷತೆ ಸುಧಾರಿಸುವ ಗುರಿಯನ್ನು ಹೊಂದಿರುವ ಅಮೃತ್ ಭಾರತ್ ನಿಲ್ದಾಣ ಯೋಜನೆಯನ್ನು ಭಾರತೀಯ ರೈಲ್ವೆ ಪ್ರಾರಂಭಿಸಿದೆ. ಇಲ್ಲಿಯವರೆಗೆ, ಅಮೃತ್ ಭಾರತ್ ನಿಲ್ದಾಣ ಯೋಜನೆಯಲ್ಲಿ 1,337 ನಿಲ್ದಾಣಗಳನ್ನು ಪುನರಾಭಿವೃದ್ಧಿಗಾಗಿ ಕೈಗೆತ್ತಿಕೊಳ್ಳಲಾಗಿದೆ. ಜೊತೆಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ಸ್ಥಿತಿ ಕಲ್ಪಿಸಲು ಅತ್ಯಾಧುನಿಕ ವಂದೇ ಭಾರತ್ ರೈಲುಗಳು, ಅಮೃತ ಭಾರತ್ ರೈಲುಗಳು ಮತ್ತು ಆಧುನಿಕ ವೈಶಿಷ್ಟ್ಯಗಳೊಂದಿಗೆ ನಮೋ ಭಾರತ್ ಹೈಸ್ಪೀಡ್ ರೈಲುಗಳನ್ನೂ ಪರಿಚಯಿಸಲಾಗಿದೆ ಎಂದು ವಿವರಿಸಿದರು
