ಬೆಂಗಳೂರು:
ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 40ಕ್ಕೂ ಹೆಚ್ಚು ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೆರವಣಿಗೆ ವೇಳೆ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಪೊಲೀಸರು, ಮನೆಗಳ ಮೇಲೆ ಕಲ್ಲು ತೂರಿದ್ದವರನ್ನು ಬಂಧಿಸಲಾಗಿದೆ ಎಂದರು.
ಶಾಂತಿ ಕದಡುವ ಕೆಲಸವನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ, ಅಂತಹ ಕೃತ್ಯಗಳಿಗೆ ಪ್ರೋತ್ಸಾಹವನ್ನೂ ನೀಡುವುದಿಲ್ಲ. ಯಾರೇ ಆಗಿದ್ದರೂ ಪೊಲೀಸರು ಹೆಡೆಮುರಿ ಕಟ್ಟಲಿದ್ದಾರೆ. ದೇವರು, ಧರ್ಮದ ಹೆಸರಲ್ಲಿ ಇಂಥಾ ಕೃತ್ಯ ಮಾಡಿದರೆ ಸಮ್ಮನೆ ಬಿಡಲ್ಲ ಎಂದು ಶಿವಮೊಗ್ಗ ಕಿಡಿಗೇಡಿಗಳಿಗೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ನಿನ್ನೆ ಈದ್ ಮಿಲಾದ್ ಮೆರವಣಿಗೆ ನಡೆಯುತ್ತಿತ್ತು, ಮೆರವಣಿಗೆ ವೇಳೆ ಕೆಲ ದುಷ್ಕರ್ಮಿಗಳು ಕಲ್ಲು ಹೊಡೆದಿದ್ದಾರೆ. ರಾಗಿ ಗುಡ್ಡದಲ್ಲಿ ಮೆರವಣಿಗೆ ಹೋಗ್ತಿದ್ದಾಗ ಕಲ್ಲು ಎಸೆದಿದ್ದು, ಪೊಲೀಸರ ಮೇಲೂ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ಶಿವಮೊಗ್ಗದ ಪರಿಸ್ಥಿತಿ ಈಗ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.
ಶಿವಮೊಗ್ಗ ಕಲ್ಲು ತೂರಾಟ, ಗಲಭೆ ಪ್ರಕರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಅಧಿಕಾರಿಗಳ ಬಳಿ ವರದಿ ಕೇಳಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಗೃಹ ಇಲಾಖೆ ಹೆಚ್ಚುವರಿ ಕಾರ್ಯದರ್ಶಿ ರಜನೀಶ್ ಗೋಯಲ್ಗೆ ಸೂಚನೆ ನೀಡಿದ್ದಾರೆ. ಗಲಭೆ ಹೇಗಾಯ್ತು, ಯಾರು ಕಾರಣ, ಈಗ ಪರಿಸ್ಥಿತಿ ಹೇಗಿದೆ ಈ ಎಲ್ಲಾ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.