ಬಿಜೆಪಿ ಸರ್ಕಾರದ 40% ಕಮಿಷನ್ ಆರೋಪ: SIT ರಚಿಸಲು ಸಂಪುಟ ತೀರ್ಮಾನ

ಬೆಂಗಳೂರು

     ಬಿಜೆಪಿ ಸರ್ಕಾರದ  ವಿರುದ್ಧ ಕೇಳಿಬಂದಿದ್ದ 40% ಕಮಿಷನ್ ಆರೋಪಕ್ಕೆ  ಸಂಬಂಧಿಸಿದ ತನಿಖೆಗೆ ಎಸ್​ಐಟಿ   ರಚಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ  ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಹೆಚ್​. ಕೆ. ಪಾಟೀಲ್   ಅವರು ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಆರೋಪ ಬಗ್ಗೆ ನಾಗಮೋಹನ್ ದಾಸ್​ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿತ್ತು. ನಾಗಮೋಹನ್​ ದಾಸ್ ಅವರು ವಿಚಾರಣಾ ವರದಿ ಸಲ್ಲಿಸಿದ ಬಳಿಕ ಸಂಪುಟದಲ್ಲಿ ಮಂಡಿಸಲಾಗಿದೆ. ಕೆಲವು ವಿವರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಇನ್ನಷ್ಟು ವಿವರವಾಗಿ ಚರ್ಚೆಯ ಅಗತ್ಯವಿದೆ ಎಂದು ಹೇಳಿದರು.

   ನೈಸ್ ರಸ್ತೆ ಯೋಜನೆ ಬಗ್ಗೆ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪವಾಗಿದೆ. ನೈಸ್ ರಸ್ತೆ ವಿಚಾರಕ್ಕೆ ಸುಪ್ರೀಂ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ನೈಸ್‌ ರಸ್ತೆ ನಿರ್ಮಾಣ ಮುಂದೆ ಆಗಬೇಕಾ?, ಬೇಡ್ವಾ ಎಂಬ ಬಗ್ಗೆ ಸಂಪೂರ್ಣವಾಗಿ ಚರ್ಚೆ ಮಾಡುವುದು ಒಂದು ಸಭೆಯಲ್ಲಿ ಸಾಧ್ಯವಿಲ್ಲ. ಕಾನೂನಾತ್ಮಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಸಂಪುಟ ಉಪ ಸಮಿತಿ ನೇಮಕ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. 1699 ಎಕರೆಯನ್ನು ನೈಸ್ ಸಂಸ್ಥೆಯವರು ಬೇರೆಯವರಿಗೆ ಶುದ್ಧ ಕ್ರಯ ಮಾಡಿಕೊಡಲು‌ ಮುಂದಾಗಿದ್ದಾರೆ. ಈ ಬಗ್ಗೆಯೂ ಕ್ಯಾಬಿನೆಟ್ ಸಬ್ ಕಮಿಟಿ ತೀರ್ಮಾನ ಕೈಗೊಳ್ಳುತ್ತೆ. ಕ್ಯಾಬಿನೆಟ್ ಸಬ್ ಕಮಿಟಿ ರಚನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ ಎಂದು ತಿಳಿಸಿದರು.