ವಾಷಿಂಗ್ಟನ್:
ತರಗತಿ ಮುಗಿದ ಬಳಿಕ ತನ್ನ ಗ್ರೇಡ್ ಕೇಳುವ ನೆಪದಲ್ಲಿ ತರಗತಿಯಲ್ಲೇ ಶಿಕ್ಷಕಿಯ ಕತ್ತುಹಿಸುಕಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದಲ್ಲಿ ಹದಿಹರೆಯದ ವಿದ್ಯಾರ್ಥಿಯೊಬ್ಬನಿಗೆ ಕ್ಲರ್ಕ್ ಕೌಂಟಿ ಜಿಲ್ಲಾ ನ್ಯಾಯಾಧೀಶೆ ಕೆಥಲೀನ್ ಡೆಲಾನೆ 16 ರಿಂದ 40 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿರುವ ಬಗ್ಗೆ ವರದಿಯಾಗಿದೆ.
“ಇದು ಸಂಭವಿಸಬಹುದಾದ ಅತ್ಯಂತ ಘೋರ ಅಪರಾಧ” ಎಂದು ನ್ಯಾಯಾಧೀಶೆ ಆರೋಪಿಗೆ ತಿಳಿಸಿದ್ದಾಗಿ ಮಾಧ್ಯಮ ವರದಿಗಳು ತಿಳಿಸಿವೆ.
ಜೋನಾಥನ್ ಎಲುಟೆರಿಯೊ ಮಾರ್ಟಿನೆಝ್ ಗ್ಯಾರ್ಸಿಯಾ (17) ವಿರುದ್ಧ ಕೊಲೆ ಯತ್ನ, ಲೈಂಗಿಕ ಕಿರುಕುಳ ಪ್ರಯತ್ನ, ಮಾರಕಾಸ್ತ್ರದಿಂದ ಹಲ್ಲೆ ಅಪರಾಧ, ಗಂಭೀರ ದೈಹಿಕ ಹಾನಿ ಮುಂತಾದ ಪ್ರಕರಣಗಳು ದಾಖಲಾಗಿವೆ.
ಶಿಕ್ಷಕಿಯ ಮೇಲೆ ಹಲವು ಬಗೆಯ ದಾಳಿ ಮಾಡಿರುವ ಆರೋಪ ಎದುರಿಸುತ್ತಿರುವ ಗಾರ್ಸಿಯಾ “ನಾನು ಮಾಡಿರುವುದಕ್ಕೆ ಪಶ್ಚಾತ್ತಾಪವಾಗುತ್ತಿದೆ” ಎಂದು ಕಳೆದ ಬುಧವಾರ ನ್ಯಾಯಾಲಯದಲ್ಲಿ ಕ್ಷಮೆ ಯಾಚಿಸಿದ್ದ. ನನಗೆ ಶಿಕ್ಷಕಿಯನ್ನು ಇಷ್ಟವಿಲ್ಲ. ಆದ್ದರಿಂದ ಆಕೆಯ ಮೇಲೆ ಪ್ರತೀಕಾರ ತೀರಿಸಿದ್ದೇನೆ ಎಂದು ಹೇಳಿದ್ದ.
ಆಸ್ತಮಾ ಚಿಕಿತ್ಸೆಯ ತೀವ್ರ ಅಡ್ಡ ಪರಿಣಾಮದಿಂದಾಗಿ ಕಕ್ಷಿದಾರನ ನಡತೆ, ಮನೋಪ್ರವೃತ್ತಿ ಬದಲಾವಣೆ, ರಾತ್ರಿಯ ಭೀತಿ ಉಂಟಾಗಿದೆ ಎಂದು ವಕೀಲರು ವಾದ ಮಂಡಿಸಿದ್ದರು.
2022ರಲ್ಲಿ ವಿದ್ಯಾರ್ಥಿ ಕೊಠಡಿಯಲ್ಲೇ ಶಿಕ್ಷಕಿ ಮೇಲೆ ದಾಳಿ ನಡೆಸಿದ್ದ ಈತ ದಾರದಿಂದ ಉಸಿರುಗಟ್ಟಿಸಿ, ಮೇಜಿಗೆ ತಲೆಯನ್ನು ಜಜ್ಜಿದ ಪರಿಣಾಮ ಶಿಕ್ಷಕಿ ಪ್ರಜ್ಞೆ ಕಳೆದುಕೊಂಡಿದ್ದರು. ಎಚ್ಚರವಾದಾಗ ಶಿಕ್ಷಕಿ ಅರೆ ನಗ್ನಾವಸ್ಥೆಯಲ್ಲಿದ್ದರು ಎನ್ನಲಾಗಿದೆ.