ಬೆಂಗಳೂರು:
ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ತಲಾ 40 ಸಾವಿರ ಕೋಟಿ ರೂ. ಅಭಿವೃದ್ಧಿ (ಸರಳ) ಸಾಲ ಪಡೆಯಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ರಾಜ್ಯ ಸರಕಾರ ಅನುಮತಿ ಪಡೆದುಕೊಂಡಿದೆ. ಇದರೊಂದಿಗೆ ರಾಜ್ಯದ ಒಟ್ಟಾರೆ ಸಾಲದ ಮೊತ್ತ 5.53 ಲಕ್ಷ ಕೋಟಿ ರೂ.ಗೆ ತಲುಪಲಿದೆ.
ಪ್ರಸಕ್ತ ಬಜೆಟ್‌ನಲ್ಲಿ ಕೇಂದ್ರ ಸರಕಾರದಿಂದ 6,855 ಕೋಟಿ ರೂ. ಹಾಗೂ ಮುಕ್ತ ಮಾರುಕಟ್ಟೆಯಿಂದ 96,840 ಕೋ.ರೂ. ಸೇರಿ ಒಟ್ಟು 1.05 ಲಕ್ಷ ಕೋ.ರೂ.ಸಾಲ ಪಡೆಯುವ ಅಂದಾಜು ಮಾಡಿದ್ದ ಸರಕಾರ, ಸೆಪ್ಟಂಬರ್ ವರೆಗೆ 4 ಸಾವಿರ ಕೋ.ರೂ. ಸಾರ್ವಜನಿಕ ಸಾಲ ಮಾಡಿದೆ. ಜೊತೆಗೆ ಮುಕ್ತ ಮಾರುಕಟ್ಟೆಯಿಂದ 3 ಸಾವಿರ ಕೋಟಿ ರೂ. ಸಾಲ ಪಡೆದಿತ್ತು.
ಅಕ್ಟೋಬರ್‌ನಲ್ಲಿ ಮುಕ್ತ ಮಾರುಕಟ್ಟೆಯಿಂದ 20 ಸಾವಿರ ಕೋಟಿ ರೂ. ಅಭಿವೃದ್ಧಿ ಸಾಲ ಪಡೆಯಲು ಆರ್‌ಬಿಐನಿಂದ ಅನುಮತಿ ಪಡೆದಿದ್ದ ಸರಕಾರ, ಇದೀಗ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ತಲಾ 20 ಸಾವಿರ ಕೋಟಿ ರೂ.ಗಳಂತೆ ಇನ್ನೂ 40 ಸಾವಿರ ಕೋಟಿ ರೂಪಾಯಿ ಅಭಿವೃದ್ಧಿ ಸಾಲಕ್ಕೆ ಅನುಮತಿ ಪಡೆದುಕೊಂಡಿದೆ. ಇದೂ ಸೇರಿದಂತೆ ಡಿಸೆಂಬರ್ ಅಂತ್ಯಕ್ಕೆ 67 ಸಾವಿರ ಕೋಟಿ ರೂ. ಸಾಲ ಪಡೆದಂತಾಗಲಿದೆ.
ಈಗಾಗಲೇ ವಾರ್ಷಿಕ ಬಡ್ಡಿ ರೂಪದಲ್ಲಿ 40 ಸಾವಿರ ಕೋಟಿ ರೂ.ಗೂ ಹೆಚ್ಚು ಮೊತ್ತ ಪಾವತಿಸುತ್ತಿರುವ ಸರಕಾರ, ನೌಕರರ ವೇತನ ಪರಿಷ್ಕರಣೆ, ಗ್ಯಾರಂಟಿ ಯೋಜನೆ ಸೇರಿದಂತೆ ಹಲವು ಬದ್ಧತಾ ವೆಚ್ಚಗಳ ಭಾರವನ್ನೂ ಹೊತ್ತಿದೆ.
ವಿತ್ತೀಯ ಹೊಣೆಗಾರಿಕೆ ಅಧಿನಿಯಮ 2002ರ ಅನ್ವಯ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ. 3ರೊಳಗೆ ಇರಬೇಕು. ಅಂತೆಯೇ ಸಾಲದ ಪ್ರಮಾಣವು ಶೇ. 25ರೊಳಗೆ ಇರಬೇಕು. ಪ್ರಸ್ತುತ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ. 2.95ರಷ್ಟಿದ್ದು, ಸಾಲದ ಪ್ರಮಾಣವು ಶೇ. 23.68ಕ್ಕೆ ತಲುಪಿದೆ. ಬದ್ಧತಾ ವೆಚ್ಚದ ಜತೆಗೆ ಸಾಲ ಮರುಪಾವತಿಯತ್ತಲೂ ಸರಕಾರ ಗಮನ ಹರಿಸದಿದ್ದರೆ, ಸಾರ್ವಜನಿಕ ಆಸ್ತಿ ನಗದೀಕರಣ, ಸಬ್ಸಿಡಿಗಳ ಕಡಿತದಂತಹ ಕ್ರಮಗಳನ್ನು ತೆಗೆದುಕೊಳ್ಳಲೇಬೇಕಾದ ಅನಿವಾರ್ಯ ಸಹ ಎದುರಾಗಬಹುದು ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ಸಹ ಎಚ್ಚರಿಸಿತ್ತು.
