ನಿಲ್ಲದ ಮೀಸಲಾತಿ ವಿರೋಧಿ ಹಿಂಸಾಚಾರ; ಮತ್ತೆ 43 ಮಂದಿ ಸಾವು

ಢಾಕಾ:

    ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಈ ವರೆಗೂ ಸುಮಾರು 105 ಮಂದಿ ಸಾವಿಗಿಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.

   ಮತ್ತಷ್ಟು ಹಿಂಸಾಚಾರವನ್ನು ತಡೆಯಲು ಪೊಲೀಸರು ಬಾಂಗ್ಲಾದೇಶದಾದ್ಯಂತ ಕಟ್ಟುನಿಟ್ಟಾದ ಕರ್ಫ್ಯೂ ಜಾರಿಗೊಳಿಸಿದ್ದಾರೆ ಮತ್ತು ಮಿಲಿಟರಿ ಪಡೆಗಳು ಶನಿವಾರ ರಾಜಧಾನಿಯ ಕೆಲವು ಭಾಗಗಳಲ್ಲಿ ಗಸ್ತು ತಿರುಗುತ್ತಿವೆ. ಅಲ್ಲದೆ ಸಾರ್ವಜನಿಕ ಸಭೆಗಳ ಮೇಲೆ ನಿಷೇಧ ಹೇರಲಾಗಿದೆ. ಕಟ್ಟು ನಿಟ್ಟಿನ ಕ್ರಮಗಳ ಹೊರತಾಗಿಯೂ ಹಿಂಸಾಚಾರದಲ್ಲಿ ಶುಕ್ರವಾರ 43 ಜನ ಸಾವನ್ನಪ್ಪಿದ್ದಾರೆ ಎಂದು ಸೊಮೊಯ್ ಟಿವಿ ವರದಿ ಮಾಡಿದೆ.

   ಅಸೋಸಿಯೇಟೆಡ್ ಪ್ರೆಸ್ ವರದಿಗಾರರು ಢಾಕಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 23 ಶವಗಳನ್ನು ನೋಡಿದ್ದಾರೆ. ಆದರೆ ಅವರೆಲ್ಲರೂ ಶುಕ್ರವಾರವೇ ಸಾವನ್ನಪ್ಪಿದ್ದಾರೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ದೇಶವನ್ನು ಸಂಪೂರ್ಣ ಬಂದ್ ಮಾಡಲು ಪ್ರಯತ್ನಿಸುತ್ತಿದ್ದು, ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಗುರುವಾರ 22 ಜನರು ಸಾವನ್ನಪ್ಪಿದ್ದಾರೆ. ಮಂಗಳವಾರ ಮತ್ತು ಬುಧವಾರವೂ ಹಲವಾರು ಮಂದಿ ಸಾವನ್ನಪ್ಪಿದ್ದಾರೆ.

   ವಾರದ ಹಿಂದೆ ಆರಂಭಗೊಂಡಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಗುರುವಾರದವರೆಗೆ ದೇಶದ ವಿವಿಧೆಡೆ 75 ಮಂದಿ ಮೃತಪಟ್ಟಿದ್ದರು. ಶುಕ್ರವಾರ ಢಾಕಾದ ಮೂರು ಆಸ್ಪತ್ರೆಗಳಲ್ಲಿ 24 ಮಂದಿ ಹಾಗೂ ರಂಗ್‌ಪುರದಲ್ಲಿ ಆರು ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.

   ಕೆಲವೆಡೆ ಇಂಟರ್ನೆಟ್‌ ಹಾಗೂ ಮೊಬೈಲ್‌ ಸೇವೆ ಕಡಿತಗೊಳಿಸಲಾಗಿದ್ದು ಪ್ರತಿಭಟನಕಾರರ ಮೇಲೆ ಪೊಲೀಸರು, ಭದ್ರತಾ ಪಡೆಗಳು ಗುಂಡಿನ ದಾಳಿ, ಅಶ್ರುವಾಯು ಪ್ರಯೋಗಿಸಿದ್ದಾರೆ. ಕಳೆದೊಂದು ವಾರದಲ್ಲಿ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ. ಶುಕ್ರವಾರ ಬೆಳಿಗ್ಗೆ ರಾಜಧಾನಿ ಢಾಕಾದಲ್ಲಿ ಇಂಟರ್‌ನೆಟ್‌ ಸೇವೆ ಆರಂಭಗೊಂಡರೂ, ನಿಧಾನಗತಿಯಿಂದ ಸಾಮಾಜಿಕ ಜಾಲತಾಣ ಗಳಾದ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಪುಟಗಳು ತೆರೆಯುತ್ತಿರಲಿಲ್ಲ. 

   ‘ಗುರುವಾರ ಪ್ರತಿಭಟನಕಾರರು ಡೇಟಾ ಕೇಂದ್ರಗಳು, ಕೆಲ ಮಾಧ್ಯಮ ಮತ್ತು ಪತ್ರಿಕಾ ಕಚೇರಿಗಳ ಮೇಲೂ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದ ಕೆಲವು ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ ಸಾಕಷ್ಟು ತಾಂತ್ರಿಕ ಉಪಕರಣಗಳು ಹಾನಿಗೊಳಗಾಗಿದ್ದು, ಇದರಿಂದ ಹಿಂದಿನಂತೆ ಮತ್ತೆ ಇಂಟರ್‌ನೆಟ್‌ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬಾಂಗ್ಲಾದೇಶ ದೂರಸಂಪರ್ಕ ನಿಯಂತ್ರಣ ಆಯೋಗವು ಶುಕ್ರವಾರ ಹೇಳಿಕೆ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap