45 ಲಕ್ಷ ಕಾರ್ಮಿಕರನ್ನು ಭದ್ರತೆ ಒದಗಿಸುವುದು ನಮ್ಮ ಗುರಿ : ಸಂತೋಷ್ ಲಾಡ್

ಬೆಂಗಳೂರು

     ರಾಜ್ಯಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 45 ಲಕ್ಷಕ್ಕೂ ಅಧಿಕ ಕಾರ್ಮಿಕರನ್ನು ಅಸಂಘಟಿತ ವಲಯಕ್ಕೆ ಸೇರಿಸಲು ಮುಂದಾಗಿರುವ ಸರ್ಕಾರ ಆ ಮೂಲಕ ಅವರಿಗೆ ಆರೋಗ್ಯ,ಶಿಕ್ಷಣ ಸೇರಿದಂತೆ ಹಲವು ಭದ್ರತೆಗಳನ್ನು ನೀಡಲು ತೀರ್ಮಾನಿಸಿದೆ. ವಿಧಾನಸೌಧದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ವಿಷಯ ತಿಳಿಸಿದರು.

    ಡ್ರೈವರ್,ಕಂಡಕ್ಟರ್,ಕ್ಲೀನರ್,ಮೆಕ್ಯಾನಿಕ್ ಸೇರಿದಂತೆ ಸುಮಾರು ನಲವತ್ತು ಲಕ್ಷ ಮಂದಿ ಸಾರಿಗೆ ಕಾರ್ಮಿಕರಾಗಿ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದು ಇವರಿಗೆ ಯಾವುದೇ ಭದ್ರತೆಯಿಲ್ಲ ಎಂದು ಅವರು ವಿವರಿಸಿದರು. ಓಲಾ,ಉಬರ್ ಸೇವೆ ಸಲ್ಲಿಸುತ್ತಿರುವವರೂ ಈ ವಲಯಕ್ಕೇ ಸೇರಿದವರಾಗಿದ್ದು ಒಟ್ಟಿನಲ್ಲಿ ನಲವತ್ತು ಲಕ್ಷ ಮಂದಿ ಖಾಸಗಿ ವಲಯದಲ್ಲಿ ಸಾರಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದಾರೆ.

    ಅವರಿಗೆ ಆರೋಗ್ಯ,ಶಿಕ್ಷಣ,ವಿಮೆ ಸೇರಿದಂತೆ ಹಲವು ಸವಲತ್ತುಗಳನ್ನುಒದಗಿಸಬೇಕಾದ ಅಗತ್ಯವನ್ನು ಮನಗಂಡು ಸಾರಿಗೆ ಇಲಾಖೆಯಿಂದ ಶೇಕಡಾ ಐದರಷ್ಟು ಸೆಸ್ ಪಡೆಯಲು ನಿರ್ಧರಿಸಲಾಗಿದೆ. ಹೊಸತಾಗಿ ಮೋಟಾರು ವಾಹನ ಖರೀದಿ ಮಾಡುವವರಿಗೆ ಶೇಕಡಾ ಐದರಷ್ಟು ಸೆಸ್ ವಿಧಿಸಲಾಗುತ್ತಿದ್ದು ಈ ಸೆಸ್ ಅನ್ನು ಕಾರ್ಮಿಕ ಇಲಾಖೆಗೆ ಪಡೆದು ಖಾಸಗಿ ವಲಯದಲ್ಲಿ ಕೆಲಸ ಮಾಡುವ ನಲವತ್ತು ಲಕ್ಷ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವುದು ನಮ್ಮ ಉದ್ದೇಶ ಎಂದರು.

    ಇದೇ ರೀತಿ ಆನ್ ಲೈನ್ ಮೂಲಕ ಸೇವೆ ಸಲ್ಲಿಸುತ್ತಿರುವ ಸುಮಾರು ನಾಲ್ಕು ಲಕ್ಷ ಮಂದಿ ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿದ್ದು,ಅವರಿಗೂ ಸಾಮಾಜಿಕ ಭದ್ರತೆಯಿಲ್ಲ ಎಂಬುದನ್ನು ಮನಗಂಡು ಸರ್ಕಾರ ಅನುಕೂಲ ಕಲ್ಪಿಸಲು ನಿರ್ಧರಿಸಿದೆ. ಸ್ವಿಗ್ಗಿ,ಜೊಮ್ಯಾಟೋ ಸೇರಿದಂತೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವವರು ಸೇರಿದಂತೆ ಆನ್ ಲೈನ್ ಸೇವೆ ಸಲ್ಲಿಸುತ್ತಿರುವ ನಾಲ್ಕು ಲಕ್ಷ ಮಂದಿ ಕೆಲಸ ಮಾಡುತ್ತಿದ್ದು ಅವರಿಗೂ ಹಲವು ಸವಲತ್ತುಗಳನ್ನು ನೀಡಲು ಸರ್ಕಾರ ಬಯಸಿದೆ.

     ಈ ವಲಯದಲ್ಲಿ ಕೆಲಸ ಮಾಡುತ್ತಿರುವವರ ಹಿತರಕ್ಷಣೆಗೆ ಅವರು ಕೆಲಸ ಮಾಡುತ್ತಿರುವ ಕಂಪನಿಗಳಿAದ ನಿರ್ದಿಷ್ಟ ಪ್ರಮಾಣದ ಸೆಸ್ ಪಡೆದು ಭವಿಷ್ಯ ನಿಧಿಯನ್ನು ರೂಪಿಸಲಾಗುವುದು ಎಂದರು. ಹೀಗೆ ಸೆಸ್ ಮೂಲಕ ಸಂಗ್ರಹವಾಗುವ ಹಣಕ್ಕೆ ಸರ್ಕಾರದ ಪಾಲನ್ನು ಸೇರಿಸಿ ಭವಿಷ್ಯ ನಿಧಿಯ ಪ್ರಮಾಣವನ್ನು ಹೆಚ್ಚಿಸಲಾಗುವುದು ಮತ್ತು ಆ ಮೂಲಕ ಲಭ್ಯವಾಗುವ ಸಂಪನ್ಮೂಲವನ್ನು ಬಳಸಿ ಈ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

    ಇದೇ ರೀತಿ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಿರುವ ಸುಮಾರು ಇಪ್ಪತ್ತು ಸಾವಿರ ಕಾರ್ಮಿಕರಿಗೆ ಯಾವ ಭದ್ರತೆಯೂ ಇಲ್ಲದಂತಾಗಿದ್ದು ಅವರಿಗೂ ಅನುಕೂಲಗಳನ್ನು ಕಲ್ಪಿಸಿಕೊಡಲು ಸರ್ಕಾರ ಚಿಂತನೆ ನಡೆಸಿದೆ. ಇನ್ನು ಮುಂದೆ ಸಿನಿಮಾ ಟಿಕೆಟ್ಟಿನ ಶೇಕಡಾ ಒಂದರಷ್ಟು ಪ್ರಮಾಣದ ಹಣವನ್ನು ಸೆಸ್ ರೂಪದಲ್ಲಿ ಸಂಗ್ರಹಿಸಲು ಯೋಚಿಸಲಾಗಿದ್ದು ಪ್ರತಿ ವರ್ಷ ಐದು ಕೋಟಿ ಸಿನಿಮಾ ಟಿಕೆಟ್ ಗಳು ಬಿಕರಿಯಾಗುತ್ತವೆ ಎಂಬುದು ಸರ್ಕಾರದ ಅಂದಾಜು.

     ಟಿಕೆಟ್ ಬೆಲೆಯ ಶೇಕಡಾ ಒಂದರಷ್ಟು ಹಣವನ್ನು ಸೆಸ್ ಮೂಲಕ ಸಂಗ್ರಹಿಸಿದರೆ ಪ್ರತಿ ವರ್ಷ ಹತ್ತು ಕೋಟಿ ರೂಪಾಯಿ ಸೆಸ್ ಸಂಗ್ರಹವಾಗುವ ನಿರೀಕ್ಷೆ ಇದೆ. ಹೀಗೆ ಸಂಗ್ರಹವಾಗುವ ಹತ್ತು ಕೋಟಿ ರೂಪಾಯಿಗಳಿಗೆ ಸರ್ಕಾರ ಹತ್ತು ಕೋಟಿ ರೂಪಾಯಿ ಸೇರಿಸಿ ಭವಿಷ್ಯ ನಿಧಿಯನ್ನು ಇಡಲಿದೆ.ಆ ಮೂಲಕ ಲಭ್ಯವಾಗುವ ಸಂಪನ್ಮೂಲವನ್ನು ಬಳಸಿಕೊಂಡು ಸಿನಿಮಾ ಕಾರ್ಮಿಕರಿಗೆ ಹಲವು ಸವಲತ್ತುಗಳನ್ನು ನೀಡಲಿದೆ ಎಂದರು. 

     ಈ  ಮಧ್ಯೆ ರಾಜ್ಯದ ವಿವಿಧ ಭಾಗಗಳಲ್ಲಿ ಐವತ್ತು ಹಾಸಿಗೆಗಗಳ ಸಾಮರ್ಥ್ಯದ ಹೈಟೆಕ್ ಆಸ್ಪತ್ರೆಯನ್ನು ಕಾರ್ಮಿಕರಿಗಾಗಿ ಕಟ್ಟುವ ಪ್ರಸ್ತಾಪವಿದ್ದು,ಈ ಸಂಬAಧ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದು ನುಡಿದರು. ಇ.ಎಸ್.ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾದ ಬಹುತೇಕ ಕಾರ್ಮಿಕರು ಆ ಆಸ್ಪತ್ರೆಗಳಿಂದ ಖಾಸಗಿ ಆಸ್ಪತ್ರೆಗೆ ಶಿಫಾರಸು ಪಡೆದು ಹೋಗುತ್ತಿದ್ದಾರೆ.ಹೀಗಾಗಿ ನಾವೇ ಅಂತಾರಾಷ್ಟಿಯ ಗುಣಮಟ್ಟದ ಆಸ್ಪತ್ರೆಗಳನ್ನು ಕಟ್ಟಿಸಿದರೆ ಪರಿಸ್ಥಿತಿ ಉತ್ತಮವಾಗಬಹುದು ಎಂದರು.

     ರಾಜ್ಯಾದ್ಯಂತ ಕಾರ್ಮಿಕ ಕಾರ್ಡುಗಳನ್ನು ಪಡೆದವರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದ ಅವರು,ಹಲವು ಸವಲತ್ತುಗಳನ್ನು ನೀಡುವ ಕಾರ್ಮಿಕ ಕಾರ್ಡುಗಳನ್ನು ಈಗಾಗಲೇ 44 ಲಕ್ಷ ಮಂದಿ ಪಡೆದಿದ್ದು,ಹೊಸತಾಗಿ 12 ಲಕ್ಷ ಮಂದಿ ಇದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ನುಡಿದರು.

     ಈ ಕಾರ್ಡುಗಳನ್ನು ಪಡೆಯಲು ನಿರ್ದಿಷ್ಟ ದಾಖಲೆಗಳನ್ನು ನೀಡಬೇಕಿದ್ದರೂ ಹಲವು ಮಂದಿ ಸುಮ್ಮನೆ ಕಾರ್ಡು ಪಡೆದಿದ್ದು ಇಷ್ಟು ಪ್ರಮಾಣದ ಕಾರ್ಡುದಾರರಿಗೆ ಸೌಲಭ್ಯಗಳನ್ನು ನೀಡಲು ಹೋದರೆ ಕೆಲವೇ ಕಾಲದಲ್ಲಿ ಕಾರ್ಮಿಕ ಮಂಡಳಿಯಲ್ಲಿ ಹಣವೇ ಇಲ್ಲದಂತಾಗುತ್ತದೆ ಎಂದರು.

     ಈ ಹಿಂದೆ ಕಾಂಗ್ರೆಸ್ ಸರ್ಕಾರವಿದ್ದಾಗ ಹದಿಮೂರು ಲಕ್ಷದಷ್ಟಿದ್ದು ಕಾರ್ಮಿಕ ಕಾರ್ಡುಗಳು ಬಿಜೆಪಿ ಅವಧಿಯಲ್ಲಿ ನಲವತ್ನಾಲ್ಕು ಲಕ್ಷಕ್ಕೆ ಏರಿತು ಎಂದು ವಿವರಿಸಿದ ಅವರು,ಈಗ ಈ ಕಾರ್ಡುದಾರರಲ್ಲಿ ಅರ್ಹರು ಎಷ್ಟು ಎಂಬುದನ್ನು ಪರಿಶೀಲಿಸಿ ಮುಂದಿನ ಹೆಜ್ಜೆ ಇಡಬೇಕಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap