5 ಶತಕ, 3 ದ್ವಿಶತಕ, 1 ತ್ರಿಶತಕ: ಬ್ಯಾಕ್ ಟು ಬ್ಯಾಕ್ ಸೆಂಚುರಿ ಬಾರಿಸಿದ ಮಾಜಿ RCB ಆಟಗಾರ..!

ರಣಜಿ ಟ್ರೋಫಿ 2022 ರಲ್ಲಿ, ಸರ್ಫರಾಜ್ ಖಾನ್ ಇದುವರೆಗೆ ಮೂರು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 164.33 ಸರಾಸರಿಯಲ್ಲಿ 493 ರನ್ ಗಳಿಸಿದ್ದಾರೆ.

ಒಡಿಶಾ ವಿರುದ್ಧದ ಪಂದ್ಯದಲ್ಲಿ ಸರ್ಫರಾಜ್ 165 ರನ್ ಗಳಿಸಿ ಅಬ್ಬರಿಸಿದರು. ಕೇವಲ 181 ಎಸೆತಗಳನ್ನು ಎದುರಿಸಿದ ಯುವ ಬ್ಯಾಟ್ಸ್​ಮನ್​ 15 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳ ನೆರವಿನಿಂದ ಈ ಸೀಸನ್​ನಲ್ಲಿನ 2ನೇ ಶತಕ ಬಾರಿಸಿದರು.

ಇದಕ್ಕೂ ಮುನ್ನ ಸರ್ಫರಾಜ್ ಖಾನ್ ಇದೇ ಸೀಸನ್​ನಲ್ಲಿ ಸೌರಾಷ್ಟ್ರ ವಿರುದ್ಧದ ಮೊದಲ ಪಂದ್ಯದಲ್ಲಿ 275 ರನ್ ಗಳಿಸಿದ್ದರು. ಇದೀಗ ಪ್ರಚಂಡ ಫಾರ್ಮ್‌ ಮುಂದುವರೆಸಿರುವ ಬಲಗೈ ಬ್ಯಾಟ್ಸ್​ಮನ್​ ಸತತ ಎರಡನೇ ಶತಕ ಸಿಡಿಸಿದರು.

ರಣಜಿ ಟ್ರೋಫಿ 2022 ರಲ್ಲಿ, ಸರ್ಫರಾಜ್ ಖಾನ್ ಇದುವರೆಗೆ ಮೂರು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ಗಳಲ್ಲಿ 164.33 ಸರಾಸರಿಯಲ್ಲಿ 493 ರನ್ ಗಳಿಸಿದ್ದಾರೆ. ಈ ವೇಳೆ ಎರಡು ಶತಕ ಮತ್ತು ಒಂದು ಅರ್ಧ ಶತಕ ಬಾರಿಸಿದ್ದಾರೆ.

ಗೋವಾ ವಿರುದ್ಧದ ಎರಡನೇ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಬಂದ 48 ರನ್‌ಗಳು ಅವರ ಕಡಿಮೆ ಸ್ಕೋರ್. ಇದಲ್ಲದೆ 275, 165, 63 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ರಣಜಿ ಸೀಸನ್​ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಇದೀಗ ಸರ್ಫರಾಜ್ ಎರಡನೇ ಸ್ಥಾನದಲ್ಲಿದ್ದಾರೆ. 578 ರನ್ ಗಳಿಸಿರುವ ಬಿಹಾರದ ಸಕಿಬುಲ್ ಘನಿ ಅಗ್ರಸ್ಥಾನದಲ್ಲಿದ್ದಾರೆ.

ರಣಜಿಯಲ್ಲಿ ಸರ್ಫರಾಜ್ ಅಬ್ಬರ:

ಸರ್ಫರಾಜ್ ಖಾನ್ ಪ್ರಥಮ ದರ್ಜೆ ಕ್ರಿಕೆಟ್​ನಲ್ಲಿ ಅದ್ಭುತ ದಾಖಲೆ ಹೊಂದಿದ್ದಾರೆ. ಇಲ್ಲಿಯವರೆಗೆ 32 ಪ್ರಥಮ ದರ್ಜೆ ಇನ್ನಿಂಗ್ಸ್‌ಗಳನ್ನು ಆಡಿರುವ ಸರ್ಫರಾಜ್ 12 ಇನಿಂಗ್ಸ್​ಗಳಲ್ಲಿ 50 ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ್ದಾರೆ.

ಈ ವೇಳೆ ಅವರ ಬ್ಯಾಟ್​ನಿಂದ ಆರು ಶತಕಗಳು ಮೂಡಿಬಂದಿವೆ. ವಿಶೇಷ ಎಂದರೆ ಅವರ ಪ್ರತಿ ಶತಕ 150 ಪ್ಲಸ್ ಸ್ಕೋರ್ ಹೊಂದಿದೆ. ಇನ್ನು ಒಂದು ಟ್ರಿಪಲ್ ಮತ್ತು ಎರಡು ದ್ವಿಶತಕಗಳನ್ನೂ ಕೂಡ ಸರ್ಫರಾಜ್ ಬಾರಿಸಿದ್ದಾರೆ.

2019 ರಿಂದ ರಣಜಿ ಟ್ರೋಫಿಯಲ್ಲಿ ಅದ್ಭುತವಾಗಿ ಬ್ಯಾಟ್ ಬೀಸಿದ್ದ ಸರ್ಫರಾಜ್ ಖಾನ್ 12 ಇನ್ನಿಂಗ್ಸ್‌ಗಳಲ್ಲಿ 176.62 ಸರಾಸರಿಯಲ್ಲಿ 1413 ರನ್ ಗಳಿಸಿದ್ದರು. ಈ ವೇಳೆ ಅಜೇಯ 71 ನಾಟೌಟ್, 36, ಅಜೇಯ 301, ಅಜೇಯ 226, 25, 78, 177, 6, 275, 63, 48 ಮತ್ತು 165 ರನ್​ ಚಚ್ಚಿದ್ದರು.

ಯುವ ದಾಂಡಿಗನ ಸಿಡಿಲಬ್ಬರ:

24 ವರ್ಷದ ಸರ್ಫರಾಜ್ ಖಾನ್ 2019-20ರ ರಣಜಿ ಸೀಸನ್​ನಿಂದ ಮುಂಬೈ ಪರ ಮತ್ತೆ ಆಡಲು ಆರಂಭಿಸಿದರು. ಈ ನಡುವೆ ಅವಕಾಶಗಳ ಹುಡುಕಾಟದಲ್ಲಿ ಯುಪಿ ಪರ ಆಡಿದ್ದರು. ಆದರೆ ಹೆಚ್ಚಿನ ಯಶಸ್ಸು ಸಿಗಲಿಲ್ಲ. ಮತ್ತೆ ಮುಂಬೈಗೆ ಮರಳಿದ ಸರ್ಫರಾಜ್ ಹಿಂತಿರುಗಿ ನೋಡಲಿಲ್ಲ.

2019 ರಿಂದ ಸರ್ಫರಾಜ್ ಅಂಕಿ ಅಂಶಗಳನ್ನು ನೋಡುವುದಾದರೆ, 3 ಅರ್ಧಶತಕ, 5 ಶತಕ, 3 ದ್ವಿಶತಕ, 1 ತ್ರಿಶತಕಗಳು ಮೂಡಿಬಂದಿವೆ. ಈ ಮೂಲಕ ಟೀಮ್ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯುವತ್ತ ಯುವ ಆಟಗಾರ ದಾಪುಗಾಲಿಡುತ್ತಿದ್ದಾರೆ. 2015 ರಲ್ಲಿ ಆರ್​ಸಿಬಿ ಪರ ಆಡಿದ್ದ ಸರ್ಫರಾಜ್ ಖಾನ್ ಈ ಬಾರಿಯ ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link