ನವದೆಹಲಿ:
ಈ ವರ್ಷದ ಆರಂಭದಲ್ಲಿ ನಿಷೇಧಿತ ಉದ್ದೀಪನ ಮದ್ದು ಸೇವಿಸಿರುವುದು ಕಂಡುಬಂದ ನಂತರ, ಏಷ್ಯನ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ, ಹ್ಯಾಮರ್ ಎಸೆತಗಾರ್ತಿ ಮಂಜು ಬಾಲಾ ಅವರನ್ನು ರಾಷ್ಟ್ರೀಯ ಡೋಪಿಂಗ್ ವಿರೋಧಿ ಸಂಸ್ಥೆ ಯ ಡೋಪಿಂಗ್ ವಿರೋಧಿ ಶಿಸ್ತು ಸಮಿತಿ (ಎಡಿಡಿಪಿ) ಐದು ವರ್ಷಗಳ ಅಮಾನತುಗೊಳಿಸಿದೆ. ಭಾರತದ ಕ್ರೀಡಾ ಇತಿಹಾಸದಲ್ಲಿ ಉದ್ದೀಪನ ಮದ್ದು ಸೇವನೆಗಾಗಿ ಪ್ರಕಟಿಸಲಾದ ದೀರ್ಘ ಅವಧಿಯ ಶಿಕ್ಷೆ ಪ್ರಕರಣಗಳಲ್ಲಿ ಇದೂ ಒಂದಾಗಿದೆ.
2014 ರ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗೆದಿದ್ದ ಮಂಜು ಬಾಲಾ, ಡಿಹೈಡ್ರೋಕ್ಲೋರೋಮೀಥೈಲ್-ಟೆಸ್ಟೋಸ್ಟೆರಾನ್ (ಸ್ಟೆರಾಯ್ಡ್) ಮತ್ತು SARMS LGD-4033 (ಲಿಗಂಡ್ರೋಲ್) ಸೇವಿಸಿರುವುದು ದೃಢಪಟ್ಟಿದ್ದು ಇವೆರಡನ್ನೂ ಕಾರ್ಯಕ್ಷಮತೆ ಹೆಚ್ಚಿಸುವ ಔಷಧಿಗಳೆಂದು ವರ್ಗೀಕರಿಸಲಾಗಿದೆ. ಅವರ ಧನಾತ್ಮಕ ಪರೀಕ್ಷೆಯನ್ನು ಮೊದಲು NADA ಸೆಪ್ಟೆಂಬರ್ 2024 ರಲ್ಲಿ ಬಹಿರಂಗಪಡಿಸಿತು ಮತ್ತು ADDP ಯ ಔಪಚಾರಿಕ ನಿರ್ಧಾರವನ್ನು ಅಕ್ಟೋಬರ್ 15 ರಂದು ನೀಡಲಾಯಿತು. ಅವರ ತಾತ್ಕಾಲಿಕ ಅಮಾನತು ದಿನಾಂಕವಾದ ಜುಲೈ 10, 2024 ರಿಂದ ಅವರ ಅಮಾನತು ಜಾರಿಯಲ್ಲಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಡೋಪಿಂಗ್ ವಿರೋಧಿ ಸಂಸ್ಥೆಯು ವಿಧಿಸಿರುವ ಕಠಿಣ ನಿರ್ಬಂಧಗಳಲ್ಲಿ ಐದು ವರ್ಷಗಳ ನಿಷೇಧವೂ ಒಂದು, ಇದು ಭಾರತೀಯ ಕ್ರೀಡೆಯಲ್ಲಿ ಡೋಪಿಂಗ್ ಉಲ್ಲಂಘನೆಗಳ ಬಗ್ಗೆ ಏಜೆನ್ಸಿಯ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ಒತ್ತಿಹೇಳುತ್ತದೆ. ಈ ತೀರ್ಪಿನ ಪ್ರಕಾರ ಬಾಲಾ ಅವರ ಅಮಾನತು ಅವಧಿಯಲ್ಲಿ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (ಎಎಫ್ಐ) ಅಥವಾ ಇತರ ಅಂಗಸಂಸ್ಥೆಗಳು ಅನುಮೋದಿಸುವ ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧೆ, ಆಯ್ಕೆ ಅಥವಾ ಭಾಗವಹಿಸುವಿಕೆಯಿಂದ ಅವರನ್ನು ನಿಷೇಧಿಸಲಾಗುವುದು. ಅಧಿಕೃತ ಶ್ರೇಯಾಂಕ ಮತ್ತು ರಾಷ್ಟ್ರೀಯ ತಂಡದ ಪರಿಗಣನೆಗೆ ಅರ್ಹತೆಯನ್ನು ಸಹ ಅವರು ಕಳೆದುಕೊಳ್ಳುತ್ತಾರೆ.








