ಬೆಂಗಳೂರು ಸೇರಿ 12 ನಗರಗಳಲ್ಲಿ ಮೊದಲಿಗೆ 5ಜಿ ಸೇವೆ

ಬೆಂಗಳೂರು:ಬೆಂಗಳೂರು ಸೇರಿ 12 ನಗರಗಳಲ್ಲಿ ಮೊದಲಿಗೆ 5ಜಿ ಸೇವೆ
ಡಿಸೆಂಬರ್ 27: ಭಾರತದಲ್ಲಿ 5G ತಂತ್ರಜ್ಞಾನ ತ್ವರಿತ ಗತಿಯಲ್ಲಿ ಅಳವಡಿಕೆ ಮತ್ತು ಸುರಕ್ಷಿತ ನೆಟ್ವರ್ಕ್ ಗಳನ್ನು ಒದಗಿಸಬಲ್ಲ ವಿಶ್ವಾಸಾರ್ಹ ಪಾಲುದಾರರನ್ನು ಸರ್ಕಾರ ಎದುರು ನೋಡುತ್ತಿದೆ. ಈ ಉನ್ನತ ತಂತ್ರಜ್ಞಾನದ ಕ್ಷೇತ್ರದಲ್ಲಿ ಹೂಡಿಕೆ ಅಗತ್ಯ ಹೆಚ್ಚಿದೆ.

ಯುಎಸ್ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಅಲ್ಲಿನ ಪ್ರಮುಖ ಸಂಸ್ಥೆಗಳ ಸಿಇಒಗಳ ಜೊತೆ ನಡೆಸಿದ ಮಾತುಕತೆಯಲ್ಲಿ ಹೆಚ್ಚಿನ ಚರ್ಚೆ ಟೆಲಿಕಾಂ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ್ದು ಎಂಬುದು ಗಮನಾರ್ಹ.

ಭಾರತದಲ್ಲಿ 5 ಜಿ ತಂತ್ರಜ್ಞಾನದ ಮೇಲೆ ಹೂಡಿಕೆ ಮಾಡಲು ಪ್ರಮುಖ ಸಂಸ್ಥೆ ಕ್ವಾಲ್‌ಕಾಮ್ ಆಸಕ್ತಿ ತೋರಿದೆ. ಸ್ಯಾನ್ ಡಿಯಾಗೋ ಮೂಲದ ಈ ಕಂಪನಿಯು ವೈರ್‌ಲೆಸ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೆಮಿಕಂಡಕ್ಟರ್‌ಗಳು, ಸಾಫ್ಟ್‌ವೇರ್ ಮತ್ತು ಸೇವೆಗಳನ್ನು ನೀಡುತ್ತಿದೆ ಮತ್ತು ಪ್ರವರ್ತಕ ಉತ್ಪನ್ನಗಳ ಶ್ರೇಣಿಯೊಂದಿಗೆ 5G ತಂತ್ರಜ್ಞಾನ ಒದಗಿಸಬಲ್ಲ ಸಾಮರ್ಥ್ಯ ಹೊಂದಿದೆ.

ಈ ನಡುವೆ ಭಾರತದಲ್ಲಿ ಮುಂದಿನ ವರ್ಷ 5ಜಿ ಸೇವೆಯನ್ನು ಅಧಿಕೃತವಾಗಿ ಜಾರಿಗೆ ತರಲಾಗುತ್ತಿದೆ. ಮೊದಲ ಹಂತದಲ್ಲಿ ಪ್ರಮುಖ 13 ನಗರಗಳಲ್ಲಿ 5ಜಿ ತಂತ್ರಜ್ಞಾನ ಅಳವಡಿಸಲಾಗುತ್ತದೆ ಎಂದು ದೂರಸಂಪರ್ಕ ಇಲಾಖೆ ಮೂಲಗಳು ತಿಳಿಸಿವೆ. ಗುರುಗ್ರಾಮ, ಬೆಂಗಳೂರು, ಕೋಲ್ಕತಾ, ದೆಹಲಿ, ಅಹಮದಾಬಾದ್, ಹೈದರಾಬಾದ್, ಪುಣೆ, ಚೆನ್ನೈ, ಲಕ್ನೋ, ಚಂಡೀಗಢ, ಜಾಮ್ ನಗರ್ ಹಾಗೂ ಗಾಂಧಿನಗರದಲ್ಲಿ ಮೊದಲಿಗೆ ಈ ತಂತ್ರಜ್ಞಾನದ ಪ್ರಯೋಜನ ಗ್ರಾಹಕರಿಗೆ ಲಭ್ಯವಾಗಲಿದೆ. ಮಾರ್ಚ್ -ಏಪ್ರಿಲ್ 2022ರ ವೇಳೆಗೆ 5ಜಿ ಜಾರಿಗೆ ತರುವ ಮುನ್ನ ತರಂಗಗುಚ್ಛ ಹಂಚಿಕೆ ಹರಾಜು ಪ್ರಕ್ರಿಯೆಯನ್ನು ಸರ್ಕಾರ ನಡೆಸಲಿದೆ.

5ಜಿ ತರಂಗಗಳು ಆರೋಗ್ಯಕ್ಕೆ ಮಾರಕವಲ್ಲ:

ಮೊಬೈಲ್ ಟವರ್‌ಗಳು ಹೊರಹಾಕುವ ಇಎಂಎಫ್ ಕಿರಣಗಳು ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ ಎಂಬ ಕುರಿತು ಜನಸಾಮಾನ್ಯರಲ್ಲಿರುವ ಭಯವನ್ನು ಹೋಗಲಾಡಿಸಲು ದೂರಸಂಪರ್ಕ ಇಲಾಖೆ ಇಎಂಎಫ್ ವಿಕಿರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಲವು ಕ್ರಮಗಳನ್ನು ಕೈಗೊಂಡಿದೆ.

ಜೀವಂತ ಕೋಶಗಳ ಮೇಲೆ ಯಾವುದೇ ರೀತಿಯ ಹಾನಿ ಇಲ್ಲ ಮೊಬೈಲ್ ಟವರ್ ಗಳು ನಾನ್ ಅಯೊನೈಜಿಂಗ್ ರೇಡಿಯೋ ತರಂಗಾಂತರಗಳನ್ನು ಹೊರಹಾಕಲಿದ್ದು, ಅವು ಅತ್ಯಂತ ಕಡಿಮೆ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಮನುಷ್ಯರು ಸೇರಿದಂತೆ ಜೀವಂತ ಕೋಶಗಳ ಮೇಲೆ ಯಾವುದೇ ರೀತಿಯ ಹಾನಿಯನ್ನು ಮಾಡುವ ಸಾಮರ್ಥ್ಯ ಅವುಗಳಿಗಿರುವುದಿಲ್ಲ.

ದೂರಸಂಪರ್ಕ ಇಲಾಖೆ(ಡಿಒಟಿ) ರೇಡಿಯೋ ತರಂಗಾಂತರ ಕ್ಷೇತ್ರ(ಅಂದರೆ ಬೇಸ್ ಸ್ಟೇಷನ್ ಎಮಿಷನ್ಸ್)ಕ್ಕೆ ತೆರೆದುಕೊಳ್ಳಬಹುದಾದ ಮಿತಿಯನ್ನು ನಿಗದಿಪಡಿಸಿದೆ. ಅವು ಸುರಕ್ಷಿತ ಅಂತಾರಾಷ್ಟ್ರೀಯ ನಾನ್ ಅಯೊನೈಜಿಂಗ್ ರೇಡಿಯೇಷನ್ ಪ್ರೊಟೆಕ್ಷನ್ ಕಮಿಷನ್(ಐಸಿಎನ್‌ಐಆರ್ ಪಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡಿರುವ ಸುರಕ್ಷತಾ ಮಾನದಂಡಗಳಿಗಿಂತ ಹತ್ತು ಪಟ್ಟು ಕಠಿಣವಾಗಿವೆ.

ರಾಷ್ಟ್ರವ್ಯಾಪಿ ಜಾಗೃತಿ ಕಾರ್ಯಕ್ರಮ, ಇಎಂಎಫ್ ಗೆ ಸಂಬಂಧಿಸಿದ ನಾನಾ ವಿಷಯಗಳ ಕುರಿತ ಕರಪತ್ರ/ಮಾಹಿತಿ ಕೈಪಿಡಿ ವಿತರಣೆ, ಡಿಒಟಿ ವೆಬ್ ಸೈಟ್ ನಲ್ಲಿ ಇಎಂಎಫ್ ಗೆ ಸಂಬಂಧಿಸಿದ ವಿಸ್ತೃತ ಮಾಹಿತಿ ಪ್ರಕಟಣೆ ‘ತರಂಗ್ ಸಂಚಾರ್’ ಪೋರ್ಟಲ್ ಆರಂಭ ಕುರಿತು ದಿನಪತ್ರಿಕೆಗಳಲ್ಲಿ ಜಾಹಿರಾತು ಮತ್ತಿತರ ಕ್ರಮಗಳು ಸೇರಿವೆ.

ದೂರಸಂಪರ್ಕ ಇಲಾಖೆಯ ಕ್ಷೇತ್ರ ಘಟಕಗಳು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಹೆಚ್ಚು ಹೆಚ್ಚು ಜನರಿಗೆ ಮೊಬೈಲ್ ಟವರ್ ಗಳು ಹೊರಹಾಕುವ ಇಎಂಎಫ್ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆಯೇ ಎಂಬ ಕುರಿತ ವೈಜ್ಞಾನಿಕ ವಾಸ್ತವಾಂಶಗಳ ಬಗ್ಗೆ ಅರಿವು ಮೂಡಿಸುತ್ತಿದೆ.

5ಜಿ ಪ್ರಯೋಗ:

ಪುಣೆ ನಗರದಲ್ಲಿ, ವಿ ತನ್ನ 5 ಜಿ ಪ್ರಯೋಗವನ್ನು ಕ್ಲೌಡ್ ಕೋರ್, ಹೊಸ ತಲೆಮಾರಿನ ಸಾರಿಗೆ ಮತ್ತು ರೇಡಿಯೋ ಪ್ರವೇಶ ಜಾಲದ ಎಂಡ್-ಟು-ಎಂಡ್ ಕ್ಯಾಪ್ಟಿವ್ ನೆಟ್‍ವರ್ಕ್‍ನ ಲ್ಯಾಬ್ ಸೆಟಪ್‍ನಲ್ಲಿ ನಡೆಸಿದೆ. ಈ ಪ್ರಯೋಗದಲ್ಲಿ, ಎಂಎಂ ವೇವ್ ಸ್ಪೆಕ್ಟ್ರಮ್ ಬ್ಯಾಂಡ್‍ನಲ್ಲಿ ಅತಿ ಕಡಿಮೆ ಸುಪ್ತತೆಯೊಂದಿಗೆ ವಿ 3.7 ಜಿಬಿಪಿಎಸ್‍ಗಿಂತ ಹೆಚ್ಚಿನ ವೇಗವನ್ನು ಸಾಧಿಸಿದೆ.

5ಜಿ ನೆಟ್‍ವರ್ಕ್‍ನ ಹೆಚ್ಚಿನ ವೇಗ ಮತ್ತು ಕಡಿಮೆ ಲೇಟೆನ್ಸಿ ಗುಣಲಕ್ಷಣಗಳು ಸುಧಾರಿತ ಕಣ್ಗಾವಲು ಮತ್ತು ವೀಡಿಯೋ ಸ್ಟ್ರೀಮಿಂಗ್/ಪ್ರಸಾರದಂತಹ ಅನೇಕ ಸಾಮರ್ಥ್ಯಗಳನ್ನು ಹೊಂದಿವೆ; ವರ್ಧಿತ ಆನ್‍ಲೈನ್ ಗೇಮಿಂಗ್ ಅನುಭವಕ್ಕಾಗಿ ಎಆರ್/ವಿಆರ್ ಸೌಲಭ್ಯವನ್ನು ಹೊಂದಿದೆ; ಮತ್ತು 5ಜಿ ಸ್ಮಾರ್ಟ್ ಕಾರ್ಖಾನೆಯ ವಿಕಾಸವನ್ನು ಇದು ಸಕ್ರಿಯಗೊಳಿಸುತ್ತದೆ.

ಉದ್ಯಮ 4.0 ಮತ್ತು 5 ಜಿ ಸ್ಮಾರ್ಟ್ ಸಿಟಿ ಯೋಜನೆಗಳು 5ಜಿ ನಿಯೋಜನೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ ಮತ್ತು ದೇಶದಲ್ಲಿ ತಂತ್ರಜ್ಞಾನದ ಪ್ರಗತಿಯ ಭರವಸೆಯ ಹೊಸ ಯುಗಕ್ಕೆ ನಾಂದಿ ಹಾಡಲಿವೆ.

ಇನ್ನೊಂದೆಡೆ, ಕ್ವಾಲ್ಕಾಮ್ ಮತ್ತು ಜಿಯೋ ಭಾರತದಲ್ಲಿ 5 ಜಿ ಪ್ರಯೋಗಗಳನ್ನು ಯಶಸ್ವಿಯಾಗಿ ಪರೀಕ್ಷಿಸಿದ್ದು, ಜಿಯೋ 5 ಜಿ ವಿಭಾಗದಲ್ಲಿ, 1 ಜಿಬಿಪಿಎಸ್ ಮೈಲಿಗಲ್ಲು ಸಾಧಿಸಿದೆ ಎಂದು ರಿಲಯನ್ಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ವಾರ್ಷಿಕ ವರದಿಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link