ಜೈಪುರ:
ಶುಕ್ರವಾರ ಬಿಜೆಪಿ ಸಚಿವರೊಬ್ಬರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ʻನಿಮ್ಮ ಅಜ್ಜಿʼ ಎಂದು ಟೀಕಿಸಿದ ನಂತರ ರಾಜಸ್ಥಾನ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಶಾಸಕರು, ಸಚಿವರು ಕ್ಷಮೆಯಾಚಿಸಬೇಕು ಹಾಗೂ ಈ ಹೇಳಿಕೆಯನ್ನು ದಾಖಲೆಯಿಂದ ಸಂಪೂರ್ಣವಾಗಿ ತೆಗೆಯಬೇಕೆಂದು ಆಗ್ರಹಿಸಿದರು. ಈ ವೇಳೆ ಕಾಂಗ್ರೆಸ್‌ನ ಕೆಲ ಸಚಿವರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ಹಿನ್ನೆಲೆಯಲ್ಲಿ ಮೂರು ಬಾರಿ ಬಜೆಟ್ ಮೇಲಿನ ಅಧಿವೇಶವನ್ನು ಮುಂದೂಡಲಾಯಿತು. ಈ ವೇಳೆ ಕಾಂಗ್ರೆಸ್‌ನ ಆರು ಮಂದಿ ಶಾಸಕರನ್ನು ಆಧಿವೇಶನದ ಇನ್ನುಳಿದ ಭಾಗದಿಂದ ಅಮಾನತುಗೊಳಿಸಲಾಗಿದೆ.
ದುಡಿಯುವ ಮಹಿಳೆಯರಿಗಾಗಿ ಹಾಸ್ಟೆಲ್‌ಗಳ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಅವಿನಾಶ್ ಗೆಹ್ಲೋಟ್ ವಿರೋಧ ಪಕ್ಷದ ಸದಸ್ಯರನ್ನು ತೋರಿಸುತ್ತಾ, “2023-24ರ ಬಜೆಟ್‌ನಲ್ಲಿಯೂ ನೀವು ಈ ಯೋಜನೆಗೆ ʻನಿಮ್ಮಅಜ್ಜಿʼ ಹೆಸರಿಟ್ಟಿದ್ದೀರಿ,” ಎಂದು ವ್ಯಂಗ್ಯವಾಡಿದರು. ಈ ವೇಳೆ ವಿರೋಧ ಪಕ್ಷದ ನಾಯಕ ಟಿಕಾ ರಾಮ್ ಜುಲ್ಲಿ, ಸಚಿವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು ಮತ್ತು ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಉಲ್ಲೇಖಿಸುತ್ತಿದ್ದಾರೆಯೇ ಎಂದು ಸ್ಪಷ್ಟನೆ ಕೇಳಿದರು. ಹಲವು ಕಾಂಗ್ರೆಸ್ ಶಾಸಕರು ಘೋಷಣೆ ಕೂಗುತ್ತಾ ಬಾವಿಯ ಕಡೆಗೆ ಹೋಗುತ್ತಿದ್ದಂತೆ ಈ ಹೇಳಿಕೆಯನ್ನು ದಾಖಲೆಯಿಂದ ತೆಗೆದುಹಾಕಬೇಕೆಂದು ರಾಮ್ ಜುಲ್ಲಿ ಒತ್ತಾಯಿಸಿದರು.
ಲಕ್ಷ್ಮಣ್‌ಗಢ ಶಾಸಕ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಗೋವಿಂದ ಸಿಂಗ್ ದೋತಸಾರ ಅವರು ವಿಧಾನಸಭಾ ಕಾರ್ಯದರ್ಶಿಯವರ ಮೇಜಿನ ಬಳಿಗೆ ಹೋಗಿ ಸಚಿವರಿಂದ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು. ಈ ವೇಳೆ ಪ್ರತಿ ಪಕ್ಷದ ಸದಸ್ಯರು ಮತ್ತು ಬಿಜೆಪಿ ಶಾಸಕರು ಹಾಗೂ ಸಚಿವರು ನಡುವೆ ಮಾತಿನ ಚಕಮಕಿ ನಡೆಯಿತು. ಸದನವನ್ನು ಆರಂಭದಲ್ಲಿ ಅರ್ಧ ಗಂಟೆ, ನಂತರ ಮಧ್ಯಾಹ್ನ 2 ಗಂಟೆ ಮತ್ತು ಮತ್ತೆ ಸಂಜೆ 4 ಗಂಟೆಯವರೆಗೆ ಮುಂದೂಡಲಾಯಿತು. ಕಲಾಪ ಪುನರಾರಂಭವಾದಾಗ ಸರ್ಕಾರದ ಮುಖ್ಯ ಸಚೇತಕ ಜೋಗೇಶ್ವರ್ ಗರ್ಗ್ ಅವರು ವಿರೋಧ ಪಕ್ಷಗಳು ಮಿತಿ ಮೀರಿವೆ ಎಂದು ದೂರಿದ್ದರು.’ಅಜ್ಜಿ’ ಪದದಲ್ಲಿ ಸಂಸತ್ತಿಗೆ ವಿರುದ್ಧವಾದದ್ದು ಏನೂ ಇಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಜೋಗರಾಮ್ ಪಟೇಲ್ ಹೇಳಿದ್ದಾರೆ.
“ಅವರು (ಕಾಂಗ್ರೆಸ್ ಶಾಸಕರು) ಕುರ್ಚಿಯ ಕಡೆಗೆ ಸಾಗಿದ ವೇಗ ಮತ್ತು ಉದ್ದೇಶ, ಸ್ಪೀಕರ್ ಹತ್ತಿರ ತಲುಪಿದ ಘಟನೆ ಖಂಡಿತವಾಗಿಯೂ ಖಂಡನೀಯ ಮತ್ತು ಕ್ಷಮಿಸಬಹುದಾದ ಅಪರಾಧವಲ್ಲ. ಆದ್ದರಿಂದ, ಸದನದಲ್ಲಿ ವಿರೋಧ ಪಕ್ಷದ ಸದಸ್ಯರ ಅಸಭ್ಯ ಮತ್ತು ಖಂಡನೀಯ ನಡವಳಿಕೆಯ ಪರಿಣಾಮವಾಗಿ, ಈ ಕೇಳಗಿನ ಸದಸ್ಯರಾದ ಗೋವಿಂದ್ ಸಿಂಗ್ ದೋತಸಾರ, ರಾಮಕೇಶ್ ಮೀನಾ, ಅಮೀನ್ ಕಾಗ್ಜಿ, ಜಾಕಿರ್ ಹುಸೇನ್, ಹಕೀಮ್ ಅಲಿ ಮತ್ತು ಸಂಜಯ್ ಕುಮಾರ್ ಸದಸ್ಯರನ್ನು ಪ್ರಸ್ತುತ ಬಜೆಟ್ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಬೇಕು ಎಂದು ನಾನು ವಿನಂತಿಸುತ್ತೇನೆ,” ಎಂದು ಅವರ ಹೇಳಿಕೆಯನ್ನು ಪಿಟಿಐ ವರದಿ ಮಾಡಿದೆ.
“ಸಚಿವರು ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಬಿಜೆಪಿಯ ವರ್ತನೆ ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವಲ್ಲಿ ಒಂದಾಗಿದೆ, ಎಂದು ವಿರೋಧ ಪಕ್ಷದ ನಾಯಕ ಜೂಲಿ ಎಕ್ಸ್ ಖಾತೆಯಲ್ಲಿ ವಿರೋಧಿಸಿದ್ದಾರೆ.
“ಸಚಿವ ಅವಿನಾಶ್ ಗೆಹ್ಲೋಟ್ ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಗೌರವಾನ್ವಿತ ನಾಯಕಿ ಇಂದಿರಾ ಗಾಂಧಿಜೀ ಬಗ್ಗೆ ಅಸಭ್ಯ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ನಮ್ಮ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಇದು ಬಿಜೆಪಿ ಸರ್ವಾಧಿಕಾರಿ ಮನೋಭಾವವನ್ನು ತೋರಿಸುತ್ತದೆ. ರಾಜ್ಯಪಾಲರ ಭಾಷಣದ ಕುರಿತು ವಿರೋಧ ಪಕ್ಷದ ನಾಯಕ ಭಾಷಣ ಮಾಡಲು ಅವಕಾಶ ನೀಡದಿರುವುದು ಮತ್ತು ಈಗ ರಾಜ್ಯ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ 6 ಶಾಸಕರನ್ನು ಅಮಾನತುಗೊಳಿಸಿರುವುದು ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕುವ ಬಿಜೆಪಿಯ ಚಿಂತನೆಯ ಪರಿಣಾಮವಾಗಿದೆ,” ಎಂದು ಅವರು ಹಿಂದಿಯಲ್ಲಿ ಬರೆದಿದ್ದಾರೆ.
