ಧಾರವಾಡ:
ಮಹಿಳೆಯೊಬ್ಬರಿಗೆ ಕಳೆದ ವರ್ಷ ರೂ.133.25 ಮೌಲ್ಯದ ಮೊಮೊಸ್ ಆಹಾರ ವಿತರಿಸಲು ವಿಫಲವಾದ ಆಹಾರ ವಿತರಣಾ ಕಂಪನಿ ಜೊಮಾಟೊ ರೂ.60,000 ಪರಿಹಾರ ನೀಡಬೇಕು ಎಂದು ಧಾರವಾಡದ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗ ಆದೇಶಿಸಿದೆ.
ಜೊಮ್ಯಾಟೋ ಸೇವೆ ನ್ಯೂನತೆಯಿಂದ ಕೂಡಿದ್ದು, ಗ್ರಾಹಕರಿಗೆ ತೊಂದರೆ ಮತ್ತು ಮಾನಸಿಕ ಸಂಕಟ ಉಂಟುಮಾಡಿದೆ ಎಂದು ಆಯೋಗ ತಿಳಿಸಿದೆ.ಜೊಮ್ಯಾಟೋ ಮೂಲಕ ಆಗಸ್ಟ್ 31, 2023 ರಂದು ಮೊಮೊಸ್ ಆರ್ಡರ್ ಮಾಡಿದ್ದ ದೂರುದಾರೆ ಜಿ ಪೇ ಮೂಲಕ ಅದಕ್ಕಾಗಿ ರೂ.133.25 ಪಾವತಿಸಿದ್ದರು. ನಂತರ ಆರ್ಡರ್ ತಲುಪಿದೆ ಎಂಬ ಸಂದೇಶ ಅವರಿಗೆ ತಲುಪಿತ್ತಾದರೂ ಆಹಾರ ತಲುಪಿರಲಿಲ್ಲ.
ರೆಸ್ಟೋರೆಂಟನ್ನು ಆಕೆ ಸಂಪರ್ಕಿಸಿದಾಗ ಡೆಲಿವರಿ ಪ್ರತಿನಿಧಿ ಆರ್ಡರನ್ನು ಕೊಂಡೊಯ್ದಿರುವುದು ತಿಳಿದು ಬಂದಿತು. ಜಾಲತಾಣದ ಮೂಲಕ ಪ್ರತಿನಿಧಿಯನ್ನು ಸಂಪರ್ಕಿಸಲು ಆಕೆ ಯತ್ನಿಸಿದರಾದರೂ ಅಲ್ಲಿಂದ ಪ್ರತಿಕ್ರಿಯೆ ದೊರೆಯಲಿಲ್ಲ. ಅದೇ ದಿನ ಅವರು ಜೊಮ್ಯಾಟೋಗೆ ಇಮೇಲ್ ಸಂದೇಶ ಕಳಿಸಿದರು. 72 ಗಂಟೆಗಳ ಕಾಲ ಕಾಯುವಂತೆ ಅಲ್ಲಿಂದ ಉತ್ತರ ಬಂತು. ಆದರೂ ಜೊಮ್ಯಾಟೋ ಸ್ಪಂದಿಸದೇ ಹೋದದ್ದರಿಂದ ಸೆಪ್ಟೆಂಬರ್ 13, 2023ರಂದು ಜೊಮಾಟೊಗೆ ಆಕೆ ಲೀಗಲ್ ನೋಟಿಸ್ ನೀಡಿದರು. ಬಳಿಕ ಪ್ರಕರಣ ಗ್ರಾಹಕ ಆಯೋಗದ ಮೆಟ್ಟಿಲೇರಿತು.
ವಿಚಾರಣೆ ವೇಳೆ ದೂರುದಾರರ ಆರೋಪಗಳನ್ನು ನಿರಾಕರಿಸಿದ ಜೊಮ್ಯಾಟೋ ಪರ ವಕೀಲರು ಕಂಪೆನಿಗೆ ಡೆಲಿವರಿ ಪ್ರತಿನಿಧಿ ಅಥವಾ ರೆಸ್ಟರಂಟ್ ಜೊತೆ ಕಾನೂನಾತ್ಮಕ ನಂಟು ಇರುವುದಿಲ್ಲ ಎಂದರು.
ವಾದ ಆಲಿಸಿದ ಆಯೋಗ ದೂರುದಾರೆಗೆ 72 ಗಂಟೆಗಳ ಕಾಲ ಕಾಯುವಂತೆ ಜೊಮಾಟೊ ವಿನಂತಿಸಿತಾದರೂ ಆಕೆಯ ಕುಂದುಕೊರತೆ ನೀಗಿಸದೆ ಹೋಯಿತು. ಅದು ಅವರ ಹೇಳಿಕೆಯ ವಿಶ್ವಾಸಾರ್ಹತೆ ಬಗ್ಗೆ ಅನುಮಾನ ಮೂಡುವಂತೆ ಮಾಡಿತು ಎಂದಿತು.
ಹೀಗಾಗಿ ದೂರುದಾರರಿಗೆ ಉಂಟಾದ ತೊಂದರೆ ಮತ್ತು ಮಾನಸಿಕ ಸಂಕಟಕ್ಕೆ ಪರಿಹಾರವಾಗಿ ರೂ. 50,000 ಹಾಗೂ ದಾವೆ ವೆಚ್ಚದ ರೂಪದಲ್ಲಿ ರೂ.10,000 ನೀಡುವಂತೆ ಗ್ರಾಹಕ ವೇದಿಕೆ ಆದೇಶಿಸಿತು. ಜೊಮ್ಯಾಟೋ ಪರವಾಗಿ ವಕೀಲ ಜಿ ಎಂ ಕಣಸೋಗಿ ವಾದ ಮಂಡಿಸಿದ್ದರು.
