ಶ್ರೀನಗರ:
ಜಮ್ಮು ಜಿಲ್ಲೆಯಲ್ಲಿ ಗುರುವಾರ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ರಸ್ತೆಯಿಂದ ಸ್ಕಿಡ್ ಆಗಿ ಪ್ರಪಾತಕ್ಕೆ ಉರುಳಿಬಿದ್ದಿದ್ದು, ಭೀಕರ ಅಪಘಾತದಲ್ಲಿ ಕನಿಷ್ಠ ಏಳು ಮಂದಿ ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ.ಪೊಲೀಸರ ಪ್ರಕಾರ, ಜಿಲ್ಲೆಯ ಚೋಕಿ ಚೋರಾ ಬೆಲ್ಟ್‌ನ ತಂಗ್ಲಿ ಮೋರ್‌ನಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ.
ಬಸ್ಸು ಸುಮಾರು 150 ಅಡಿಗಳಷ್ಟು ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವಾಹನವು ಹರಿಯಾಣದ ಕುರುಕ್ಷೇತ್ರ ಪ್ರದೇಶದಿಂದ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಶಿವ ಖೋರಿ ಪ್ರದೇಶಕ್ಕೆ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಮತ್ತು ಸ್ಥಳೀಯರನ್ನು ಒಳಗೊಂಡ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಗಾಯಾಳುಗಳನ್ನು ಅಖ್ನೂರ್ ಆಸ್ಪತ್ರೆ ಮತ್ತು ಜಮ್ಮುವಿನ ಸರ್ಕಾರಿ ವೈದ್ಯಕೀಯ ಕಾಲೇಜು(ಜಿಎಂಸಿ) ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.