ದೆಹಲಿ ವಿಮಾನ ನಿಲ್ದಾಣ ಟರ್ಮಿನಲ್-1 ಛಾವಣಿ ಕುಸಿತ : 7 ಮಂದಿಗೆ ಗಾಯ

ನವದೆಹಲಿ:

      ಬಿಡುವಿಲ್ಲದೆ ಸುರಿಯುವ ಮಳೆಯ ನಡುವೆ ಶುಕ್ರವಾರ ನಸುಕಿನ ಜಾವ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್-1 ನಿರ್ಗಮನ ಗೇಟ್‌ನಲ್ಲಿನ ಮೇಲ್ಛಾವಣಿ ಭಾಗವು ಕುಸಿದು ಬಿದ್ದ ಪರಿಣಾಮ ಒಬ್ಬರು ಮೃತಪಟ್ಟುಸ 7 ಮಂದಿ ಗಾಯಗೊಂಡಿದ್ದಾರೆ, ದುರ್ಘಟನೆಯಲ್ಲಿ ಟ್ಯಾಕ್ಸಿಗಳು ಮತ್ತು ಕಾರುಗಳು ಸೇರಿದಂತೆ ಅನೇಕ ವಾಹನಗಳು ಜಖಂಗೊಂಡಿವೆ.

     ಇಂದು ನಸುಕಿನ ಜಾವ 5 ಗಂಟೆ ಸುಮಾರಿಗೆ ಟರ್ಮಿನಲ್ 1 ರಲ್ಲಿ ದುರ್ಘಟನೆ ನಡೆದಿದ್ದು, ಸುರಕ್ಷತಾ ಕ್ರಮಗಳಾಗಿ ಟರ್ಮಿನಲ್‌ನಿಂದ ಎಲ್ಲಾ ಚೆಕ್-ಇನ್‌ ಮತ್ತು ನಿರ್ಗಮನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ(DIAL) ತಿಳಿಸಿದೆ. 

     ಇದಲ್ಲದೆ, ಟರ್ಮಿನಲ್ 1 ರಿಂದ ಕಾರ್ಯನಿರ್ವಹಿಸುವ ಎರಡು ವಿಮಾನಯಾನ ಸಂಸ್ಥೆಗಳಾದ ಇಂಡಿಗೋ ಮತ್ತು ಸ್ಪೈಸ್‌ಜೆಟ್‌ಗಳ ವಿಮಾನ ಕಾರ್ಯಾಚರಣೆಗಳನ್ನು ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.

    ಟರ್ಮಿನಲ್ 2 ಮತ್ತು 3 ರಿಂದ ನಿಗದಿತ ವಿಮಾನಗಳ ನಿರ್ಗಮನವನ್ನು ಬದಲಾಯಿಸಲು ನಾವು ವಿಮಾನಯಾನ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಲ್ಲಿ ನಿರ್ಗಮನದ ಮುಂಭಾಗದ ಮೇಲಾವರಣ ಮತ್ತು ಸಪೋರ್ಟ್ ಬೀಮ್ ಗಳು ಕುಸಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

   ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ಅವರು ಘಟನೆಯ ಬಗ್ಗೆ ಬೆಳಿಗ್ಗೆ 5.30 ಕ್ಕೆ ಮಾಹಿತಿ ಬಂದಿದೆ ಎಂದರು. ತಕ್ಷಣವೇ 4 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿದವು. ವಿಮಾನ ನಿಲ್ದಾಣದಲ್ಲಿ, ಪಿಕ್ ಅಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಛಾವಣಿಯ ಒಂದು ಭಾಗವು ಕೆಲವು ಕಾರುಗಳ ಮೇಲೆ ಕುಸಿದಿರುವುದನ್ನು ಅಗ್ನಿಶಾಮಕ ದಳದವರು ನೋಡಿದರು, ಇದರಡಿ ಇಬ್ಬರು ಸಿಕ್ಕಿಹಾಕಿಕೊಂಡಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡ ಸ್ಥಿತಿಯಲ್ಲಿ ಎಂಟು ಜನರನ್ನು ವಿಮಾನ ನಿಲ್ದಾಣದಿಂದ ರಕ್ಷಿಸಿದ್ದೇವೆ. ಅವರನ್ನು ಪಿಸಿಆರ್ ವ್ಯಾನ್‌ಗಳ ಮೂಲಕ ಮೇದಾಂತ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ. ಎಂಟು ಜನರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

    ಧಾರಾಕಾರ ಮಳೆಯಿಂದಾಗಿ ನಗರದ ಹಲವೆಡೆ ನೀರು ನಿಂತು ಪ್ರಯಾಣಿಕರು ಪರದಾಡಬೇಕಾಯಿತು. ಟ್ರಾಫಿಕ್ ಕಂಟ್ರೋಲ್ ರೂಮ್‌ನಲ್ಲಿ ಸಂಚಾರ ದಟ್ಟಣೆ, ಅಲ್ಲಲ್ಲಿ ನೀರು ನಿಂತಿರುವ ಬಗ್ಗೆ, ಮರಗಳು ಬಿದ್ದಿರುವ ಬಗ್ಗೆ ದೆಹಲಿಯ ಹಿರಿಯ ಟ್ರಾಫಿಕ್ ಪೊಲೀಸರು ಮಾಹಿತಿ ನೀಡಿದ್ದಾರೆ.

   ತೀನ್ ಮೂರ್ತಿ ಮಾರ್ಗ್, ಮೂಲಚಂದ್, ಮಿಂಟೋ ರಸ್ತೆ, ಆನಂದ್ ವಿಹಾರ್, ಮೆಹ್ರೌಲಿ ಬದರ್‌ಪುರ್ ರಸ್ತೆ, ಮಂಡವಾಲಿ, ಭಿಕಾಜಿ ಕಾಮಾ ಪ್ಲೇಸ್, ಮಧು ವಿಹಾರ್, ಪ್ರಗತಿ ಮೈದಾನ, ಮುನಿರ್ಕಾ, ಧೌಲಾ ಕುವಾನ್, ಮೋತಿ ಬಾಗ್, ಐಟಿಒ, ಮತ್ತು ಗೌತಮ್ ಬುದ್ ನಗರದಲ್ಲಿ ಹಲವಾರು ವಲಯಗಳು ಜಲಾವೃತವಾಗಿವೆ.

   ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜರಾಪು ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ಪರಿಸ್ಥಿತಿಯನ್ನು ಖುದ್ದಾಗಿ ಗಮನಿಸುತ್ತಿರುವುದಾಗಿ ಹೇಳಿದ್ದಾರೆ.

   ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರ ಮೇಲ್ಛಾವಣಿ ಕುಸಿತದ ಘಟನೆಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ. ತೊಂದರೆಗೀಡಾದ ಪ್ರಯಾಣಿಕರಿಗೆ ಸಹಾಯ ಮಾಡಲು ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ಮುಂದುವರೆದಿದೆ ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap