ಗುವಾಹಟಿ: ಕಾಮುಕರಿಂದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ : ಏಳು ಜನರ ಬಂಧನ

ಗುವಾಹಟಿ: 

    ಗುವಾಹಟಿಯಲ್ಲಿ ಯುವತಿಯೊಬ್ಬಳ ಮೇಲೆ ಒಂಬತ್ತು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದು, ಏಳು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಗಳನ್ನು ಕುಲದೀಪ್ ನಾಥ್, ಪಿಂಕು ದಾಸ್, ಮೃಣಾಲ್ ರಭಾ, ಗಗನ್ ದಾಸ್, ಬಿಜೋಯ್ ರಭಾ, ಸೌರವ್ ಬೋರೋ ಮತ್ತು ದೀಪಂಕರ್ ಮುಖಿಯಾ ಎಂದು ಗುರುತಿಸಲಾಗಿದೆ. ಎಲ್ಲಾ ಆರೋಪಿಗಳು 18 ವರ್ಷದಿಂದ 23 ವರ್ಷ ವಯಸ್ಸಿನವರಾಗಿದ್ದಾರೆ.

    ಮಾಸ್ಟರ್‌ಮೈಂಡ್‌ಗಳೆಂದು ನಂಬಲಾದ ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.ಗುರುವಾರ ಮಧ್ಯರಾತ್ರಿ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದರು.

   ನಗರದ ಹೊರವಲಯದ ಬೋರಗಾಂವ್‌ನ ನಿಜಾರಪರ್ ಪ್ರದೇಶದ ದುರ್ಗಾ ದೇವಸ್ಥಾನದ ಆವರಣದಲ್ಲಿ ಈ ಕೃತ್ಯ ಎಸಗಲಾಗಿದೆ .“ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗುತ್ತಿರುವ ವಿಡಿಯೋವನ್ನು ಬೋರಗಾಂವ್ ನಿವಾಸಿಗಳ ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ ಎಂಬುದು ನಮಗೆ ತಿಳಿಯಿತು. ಶೀಘ್ರದಲ್ಲೇ, ನಾವು ಅದನ್ನು ಪಡೆದುಕೊಂಡೆವು. ಅದರಲ್ಲಿ ಎಂಟರಿಂದ ಒಂಬತ್ತು ಜನ ಇದ್ದು, ಮೈಮೇಲೆ ಬಟ್ಟೆಯಿಲ್ಲದ ಮಹಿಳೆ ಮೇಲೆ ಹಿಂಸಾತ್ಮಕವಾಗಿ ಲೈಂಗಿಕ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

   ತಕ್ಷಣವೇ ಪೊಲೀಸ್ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಮತ್ತು ಆರೋಪಿಗಳ ಮುಖಗಳು ಸ್ಪಷ್ಟವಾಗಿ ಗೋಚರಿಸುವ ವಿಡಿಯೋದಿಂದ ಇಬ್ಬರನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.“ನಂತರ ನಾವು ನಗರದ ಮೂರು ವಿಭಿನ್ನ ಪ್ರದೇಶಗಳಿಂದ ಏಳು ಜನರನ್ನು ಬಂಧಿಸಿದ್ದೇವೆ. ಇನ್ನಿಬ್ಬರಿಗಾಗಿ ಶೋಧ ನಡೆಸುತ್ತಿದ್ದೇವೆ” ಎಂದು ಅವರು ತಿಳಿಸಿದ್ದಾರೆ.ಪ್ರಾಥಮಿಕ ತನಿಖೆಯಲ್ಲಿ ನವೆಂಬರ್ 17 ರಂದು ಈ ಘಟನೆ ನಡೆದಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ.

Recent Articles

spot_img

Related Stories

Share via
Copy link