ಉತ್ತರ ಕನ್ನಡ:
ಕರಡಿ ದಾಳಿಯಿಂದ 70 ವರ್ಷದ ವ್ಯಕ್ತಿಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಬದುಕುಳಿದಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ವರದಿಯಾಗಿದೆ.ಮಹಾರಾಷ್ಟ್ರದ ವಿಟ್ಟು ಶೆಳಾಕೆ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಬೆಳಗಾವಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಳಾಕೆ ಅವರು ರಾಮನಗರದಿಂದ ತಿಂಬೋಲಿ ಗ್ರಾಮಕ್ಕೆ ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.
ವ್ಯಕ್ತಿಯ ಮೇಲೆ ದಾಳಿ ಮಾಡಿದ ಕರಡಿ, ಅವರ ಒಂದು ಕಣ್ಣನ್ನು ಕಿತ್ತುಹಾಕಿದೆ ಮತ್ತು ಇನ್ನೊಂದು ಕಣ್ಣಿಗೂ ಗಾಯ ಉಂಟುಮಾಡಿದೆ. ಆದರೆ, ವೃದ್ಧ ದೃತಿಗೆಡದೆ ಧೈರ್ಯದಿಂದ ಕರಡಿ ವಿರುದ್ಧ ಹೋರಾಡಿ, ಕಿರುಚುತ್ತಾ, ಕೂಗಾಡಿದ್ದಾರೆ. ಇದರಿಂದ ಕರಡಿ ಗಾಬರಿಯಿಂದ ಅಲ್ಲಿಂದ ಕಾಲ್ಕಿತ್ತಿದೆ.
ಕರಡಿ ಅವರನ್ನು ಬಿಟ್ಟು ಕಾಡಿನಲ್ಲಿ ಕಣ್ಮರೆಯಾದ ನಂತರ, ತೀವ್ರ ರಕ್ತಸ್ರಾವವಾಗುತ್ತಿದ್ದರೂ ಕೂಡ ವೃದ್ಧ ಸುಮಾರು ಎರಡು ಕಿ.ಮೀ. ನಡೆದು ಜೀವ ಉಳಿಸಿಕೊಂಡಿದ್ದಾರೆ. ಶಳಾಕೆ ಅವರಿಗೆ ರಾಮನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ರವಾನಿಸಲಾಗಿದೆ.
ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈಮಧ್ಯೆ, ಕರಡಿ ದಾಳಿಯು ಆ ಪ್ರದೇಶದ ಜನರಲ್ಲಿ ಭಯ ಮತ್ತು ಆತಂಕವನ್ನು ಉಂಟುಮಾಡಿದೆ. ಕರಡಿ ದಾಳಿಯಿಂದ ಜನರನ್ನು ರಕ್ಷಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅರಣ್ಯಾಧಿಕಾರಿಗಳು ಕೂಡ ಈ ಪ್ರದೇಶದ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ.
