ಚೆನ್ನೈ:
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಬುಧವಾರ ಅಕ್ರಮ ಮದ್ಯ ಸೇವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ ಮತ್ತು 70ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕಲ್ಲಕುರಿಚಿ ಜಿಲ್ಲಾಧಿಕಾರಿ ಎಂಎಸ್ ಪ್ರಶಾಂತ್ ಖಚಿತಪಡಿಸಿದ್ದಾರೆ.
ಮದ್ಯ ಮಾದರಿಗಳಲ್ಲಿ ಮಾರಣಾಂತಿಕ ಮೆಥನಾಲ್ ಇರುವಿಕೆಯು ಪ್ರಯೋಗಾಲಯದ ಪರೀಕ್ಷೆಯಲ್ಲಿ ಪತ್ತೆಯಾಗಿದೆ. ಸರ್ಕಾರದ ಪ್ರಕಟಣೆಯ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿ ಚೆನ್ನೈನಲ್ಲಿ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶಕರ ಪತ್ರಿಕಾ ಪ್ರಕಟಣೆ ಪ್ರಕಾರ, ಐವರು ಸಾವಿಗೀಡಾಗಿದ್ದು, ಇನ್ನೂ 24 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದರೆ, ಕಲ್ಲಕುರಿಚಿ ಜಿಲ್ಲೆಯ ಅಧಿಕೃತ ಮೂಲಗಳು ಸಾವಿನ ಸಂಖ್ಯೆ 16ಕ್ಕೆರಿದ್ದು, ಕಲ್ಲಕುರಿಚಿಯ ಸರ್ಕಾರಿ ಆಸ್ಪತ್ರೆಯಲ್ಲಿ 72 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದಿದೆ.
ಇವರಲ್ಲಿ 32 ಮಂದಿಯನ್ನು ಪುದುಚೇರಿಯ ಜಿಪ್ಮರ್ ಮತ್ತು ಸೇಲಂ ಮತ್ತು ವಿಲ್ಲುಪುರಂನ ಸರ್ಕಾರಿ ಆಸ್ಪತ್ರೆಗಳಂತಹ ಇತರ ಆಸ್ಪತ್ರೆಗಳಿಗೆ ದಾಖಲಿಸಲು ಶಿಫಾರಸು ಮಾಡಲಾಗಿದೆ.
ಮೃತರನ್ನು ಜಿ ಪ್ರವೀಣ್‌ಕುಮಾರ್ (26), ಡಿ ಸುರೇಶ್ (40), ಕೆ ಶೇಖರ್ (59), ಎಸ್ ವಡಿವುಕ್ಕರಸಿ, ಸಿ ಕಂದನ್, ಪಿ ಜಗದೀಶನ್, ಆರ್ ಸುರೇಶ್, ಎಂ ಸೆಲ್ವಂ ಮತ್ತು ಎಂ ಆರುಮುಗಂ ಎಂದು ಗುರುತಿಸಲಾಗಿದೆ. ಇತರ ಸಂತ್ರಸ್ತರ ಹೆಸರುಗಳನ್ನು ಇನ್ನೂ ದೃಢೀಕರಿಸಲಾಗಿಲ್ಲ.
ಈ ಸಂಬಂಧ 49 ವರ್ಷದ ಕೆ ಕನ್ನುಕುಟ್ಟಿ ಎಂಬಾತನನ್ನು ಬಂಧಿಸಲಾಗಿದ್ದು, ಆತನಿಂದ ವಶಪಡಿಸಿಕೊಂಡ ಸುಮಾರು 200 ಲೀಟರ್ ಅಕ್ರಮ ಮದ್ಯ ವಿಶ್ಲೇಷಣೆಯಲ್ಲಿ ಮಾರಣಾಂತಿಕ ಮೆಥನಾಲ್ ಇರುವಿಕೆ ಪತ್ತೆಯಾಗಿದೆ ಎಂದು ಸರ್ಕಾರ ತಿಳಿಸಿದೆ.
ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಪ್ರಕರಣವನ್ನು ಸಿಬಿ-ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಸರ್ಕಾರವು ಕಲ್ಲಕುರಿಚಿ ಜಿಲ್ಲಾಧಿಕಾರಿ ಶ್ರವಣ್ ಕುಮಾರ್ ಜಾತಾವತ್ ಅವರನ್ನು ವರ್ಗಾವಣೆ ಮಾಡಿದೆ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸಮಯ್ ಸಿಂಗ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಕಲ್ಲಕುರಿಚಿ ಜಿಲ್ಲೆಯ ನಿಷೇಧಿತ ವಿಭಾಗದ ಸಿಬ್ಬಂದಿ ಸೇರಿದಂತೆ ಒಂಬತ್ತು ಇತರ ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ಅಕ್ರಮ ಮದ್ಯ ಸೇವಿಸಿ ಸಾವಿಗೀಡಾದವರ ಬಗ್ಗೆ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. ಅಪರಾಧದಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದ್ದು, ಇದನ್ನು ತಡೆಯುವಲ್ಲಿ ವಿಫಲರಾದ ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಮದ್ಯ ಮಾರಾಟ ಕುರಿತು ಜನರು ಮಾಹಿತಿಯನ್ನು ಹಂಚಿಕೊಂಡರೆ ಅಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಲಾಗುತ್ತದೆ. ಸಮಾಜವನ್ನು ಹಾಳು ಮಾಡುವ ಇಂತಹ ಅಪರಾಧಗಳನ್ನು ಹತ್ತಿಕ್ಕಲಾಗುವುದು ಎಂದಿದ್ದಾರೆ.
ತಮಿಳುನಾಡು ರಾಜ್ಯಪಾಲ ಆರ್‍ಎನ್ ರವಿ ಕೂಡ ಟ್ವೀಟ್ ಮಾಡಿದ್ದು, ಕಲ್ಲಕುರಿಚಿಯಲ್ಲಿ ಅಕ್ರಮ ಮದ್ಯ ಸೇವನೆಯಿಂದ ಸಂಭವಿಸಿದ ಜೀವಹಾನಿಯಿಂದ ತೀವ್ರ ಆಘಾತವಾಗಿದೆ. ಇನ್ನೂ ಅನೇಕ ಸಂತ್ರಸ್ತರು ಗಂಭೀರ ಸ್ಥಿತಿಯಲ್ಲಿದ್ದಾರೆ. ಮೃತರ ಕುಟುಂಬಗಳಿಗೆ ನನ್ನ ಹೃತ್ಪೂರ್ವಕ ಸಾಂತ್ವನ ಮತ್ತು ಆಸ್ಪತ್ರೆಯಲ್ಲಿರುವವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.
‘ ನಮ್ಮ ರಾಜ್ಯದ ವಿವಿಧ ಭಾಗಗಳಿಂದ ಪ್ರತಿನಿತ್ಯವೂ ಅಕ್ರಮ ಮದ್ಯ ಸೇವನೆಯಿಂದ ದುರಂತ ಜೀವಹಾನಿಗಳು ವರದಿಯಾಗುತ್ತಿವೆ. ಇದು ಅಕ್ರಮ ಮದ್ಯದ ಉತ್ಪಾದನೆ ಮತ್ತು ಸೇವನೆಯನ್ನು ತಡೆಗಟ್ಟುವಲ್ಲಿ ನಿರಂತರ ಲೋಪವನ್ನು ಪ್ರತಿಬಿಂಬಿಸುತ್ತದೆ. ಇದು ಗಂಭೀರ ಕಳವಳಕಾರಿ ವಿಷಯವಾಗಿದೆ’ ಎಂದು ಅವರು ಹೇಳಿದರು.
ಈಮಧ್ಯೆ, ಎಐಎಡಿಎಂಕೆ ಆಡಳಿತಾರೂಢ ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದೆ. ಪ್ರತಿಪಕ್ಷದ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ, ಅಕ್ರಮ ಮದ್ಯ ಸೇವಿಸಿ ಸುಮಾರು 40 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಡಿಎಂಕೆ ಆಡಳಿತಕ್ಕೆ ಬಂದಾಗಿನಿಂದಲೂ ಇಂತಹ ಸಾವುಗಳು ಸಂಭವಿಸುತ್ತಿವೆ. ನಾನು ಈ ವಿಷಯವನ್ನು ರಾಜ್ಯ ವಿಧಾನಸಭೆಯಲ್ಲೂ ಪ್ರಸ್ತಾಪಿಸಿ ಕ್ರಮಕ್ಕೆ ಒತ್ತಾಯಿಸುತ್ತಿದ್ದೇನೆ. ರಾಜ್ಯ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಸರ್ಕಾರದ ಪ್ರಕಾರ, ವಾಂತಿ ಮತ್ತು ಹೊಟ್ಟೆ ನೋವಿನಿಂದ ದೂರಿದ 20ಕ್ಕೂ ಹೆಚ್ಚು ಜನರನ್ನು ಜೂನ್ 19ರಂದು ಕಲ್ಲಕುರಿಚಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಮತ್ತು ಕಂದಾಯ ಅಧಿಕಾರಿಗಳ ತನಿಖೆಯ ನಂತರ, ಅವರು ‘ಅಕ್ರಮ ಮದ್ಯ’ ಸೇವಿಸಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ಕಾರಣ ತಿಳಿಯಲಿದೆ.
ವಿಲ್ಲುಪುರಂ, ತಿರುವಣ್ಣಾಮಲೈ ಮತ್ತು ಸೇಲಂನಿಂದ ಅಗತ್ಯವಿರುವ ಔಷಧಿಗಳು ಮತ್ತು ವಿಶೇಷ ಸರ್ಕಾರಿ ವೈದ್ಯರ ತಂಡಗಳು ಚಿಕಿತ್ಸೆಗೆ ಸಹಾಯ ಮಾಡಲು ಮತ್ತು ಮೇಲ್ವಿಚಾರಣೆ ಮಾಡಲು ಕಲ್ಲಕುರಿಚಿ ಆಸ್ಪತ್ರೆಗೆ ಧಾವಿಸಿವೆ. ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯನ್ನೂ ನಿಯೋಜಿಸಲಾಗಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಎಕ್ಸ್‌ನಲ್ಲಿ ಮಾತನಾಡಿ, ‘ಅಕ್ರಮ ಮದ್ಯ ಸೇವನೆಯಿಂದ ಪತಿಯನ್ನು ಕಳೆದುಕೊಂಡು, ಮಗುವನ್ನು ಕಳೆದುಕೊಂಡಿರುವ ಪಾಲಕರು ಹಾಗೂ ಪತ್ನಿ ಪತಿಯನ್ನು ಕಳೆದುಕೊಂಡ ನೋವಿನಿಂದ ಅಳುತ್ತಿರುವುದನ್ನು ನೋಡಿದರೆ ಹೃದಯ ಕಲಕುತ್ತದೆ. ಈ ರೀತಿಯ ಅನೇಕ ಘಟನೆಗಳು ನಡೆದರೂ ಡಿಎಂಕೆ ಪಾಠ ಕಲಿತಿಲ್ಲ. ಅವರ ದುರಾಡಳಿತದಿಂದಾಗಿ ಇಂದು ಡಿಎಂಕೆ ಸರ್ಕಾರದಲ್ಲಿ ಶೂನ್ಯ ಹೊಣೆಗಾರಿಕೆ ಇದೆ ಮತ್ತು ಅಕ್ರಮ ಮದ್ಯ ಮಾರಾಟಗಾರರೊಂದಿಗೆ ಪೋಸ್ ನೀಡುವುದರಿಂದ ಪರಿಣಾಮಗಳ ಅವರು ಬಗ್ಗೆ ಭಯಪಡುವುದಿಲ್ಲ ಎಂದಿದ್ದಾರೆ.