ಕರ್ನಾಟಕಕ್ಕೆ 750 ಇ-ಬಸ್ ಕೊಡುಗೆ ಕೊಟ್ಟ ಕೇಂದ್ರ : ಯಾವ ಜಿಲ್ಲೆಗೆ ಎಷ್ಟು?

ಬೆಂಗಳೂರು:

   ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ವಿವಿಧ ರಾಜ್ಯಗಳಿಗೆ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಿದೆ. ಇದರಲ್ಲಿ ಕರ್ನಾಟಕಕ್ಕೆ 750 ಬಸ್‌ಗಳು ಸಿಕ್ಕಿದ್ದು, ಇದನ್ನು ರಾಜ್ಯ ಸರ್ಕಾರ ವಿವಿಧ ಜಿಲ್ಲೆಗಳಿಗೆ ಹಂಚಿಕೆ ಮಾಡಲಿದೆ.

   ಸಂಸತ್ ಮುಂಗಾರು ಅಧಿವೇಶನ ನಡೆಯುತ್ತಿದೆ. ಲೋಕಸಭೆ ಕಲಾಪದಲ್ಲಿ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಕುರಿತು ಮಾಹಿತಿ ನೀಡಿದೆ. ಪಿಎಂ-ಇ ಬಸ್ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 750 ಬಸ್ ಹಂಚಿಕೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

    ಕರ್ನಾಟಕ ಸರ್ಕಾರದ ಬೇಡಿಕೆಯಂತೆ 10 ನಗರಗಳಿಗೆ ಪಿಎಂ-ಇ ಬಸ್ ಯೋಜನೆಯಡಿ ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಬೆಂಗಳೂರು ಮತ್ತು ಉಡುಪಿ ಜಿಲ್ಲೆಗಳು ಯೋಜನೆಯ ಮಾನದಂಡಗಳಡಿ ಬಸ್‌ ಹಂಚಿಕೆಗೆ ಆಯ್ಕೆಯಾಗಿಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

  ಪಿಎಂ-ಇ ಬಸ್ ಯೋಜನೆಯನ್ನು ಕೇಂದ್ರ ಸರ್ಕಾರ 2023ರ ಆಗಸ್ಟ್ 16ರಂದು ಪ್ರಾರಂಭಿಸಿತು. ಸಾರ್ವಜನಿಕ ಸಾರಿಗೆ ಬಳಕೆ ಮಾಡುವುದನ್ನು ಉತ್ತೇಜಿಸಲು ಈ ಯೋಜನೆ ಪ್ರಾರಂಭಿಸಲಾಗಿದ್ದು, ಇದರ ಅನ್ವಯ ಪಿಪಿಪಿ ಮಾದರಿಯಲ್ಲಿ ದೇಶಾದ್ಯಂತ 10,000 ಎಲೆಕ್ಟ್ರಿಕ್ ಬಸ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ.

   ಕರ್ನಾಟಕದ 750 ಬಸ್‌ಗಳ ಪೈಕಿ ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಮಂಗಳೂರು ಮತ್ತು ಮೈಸೂರು ನಗರಗಳಿಗೆ ತಲಾ 100 ಬಸ್ ಹಂಚಿಕೆಯಾಗಲಿದೆ. ಉಳಿದ ನಗರಗಳಿಗೆ 50 ಬಸ್ ಸಿಗಲಿದೆ. ಈಗಾಗಲೇ ಕರ್ನಾಟಕದಲ್ಲಿ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕ್ ನಗರ ಸಾರಿಗೆ ಬಸ್‌ಗಳು ಸಂಚಾರವನ್ನು ನಡೆಸುತ್ತಿದೆ. ಕೆಎಸ್ಆರ್‌ಟಿಸಿ ಬಳಿಯೂ ಎಲೆಕ್ಟ್ರಿಕ್ ಬಸ್‌ಗಳಿವೆ.

  ಈ ಯೋಜನೆಯಡಿ ಈಗಾಗಲೇ 7,293 ಬಸ್‌ಗಳನ್ನು ಹಂಚಿಕೆ ಮಾಡಲಾಗಿದೆ. ಅಲ್ಲದೇ 6,518 ಬಸ್‌ಗಳನ್ನು ಖರೀದಿಸಲು ಟೆಂಡರ್ ಕರೆಯಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕರ್ನಾಟಕದಲ್ಲಿ ಶಿವಮೊಗ್ಗ 50, ತುಮಕೂರು 50, ಬಳ್ಳಾರಿ 50, ವಿಜಯಪುರ 50, ದಾವಣಗೆರೆ ನಗರಕ್ಕೆ 50 ಬಸ್‌ಗಳು ಬೇಕು ಎಂದು ಕರ್ನಾಟಕ ಸರ್ಕಾರ ಮನವಿ ಸಲ್ಲಿಕೆ ಮಾಡಿದೆ.

  ಆದರೆ ಕರ್ನಾಟಕ ಪಿಎಂ-ಇ ಬಸ್ ಯೋಜನೆಯಡಿ ನೀಡುವ ಬಸ್‌ಗಳ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸಿದೆ. ಪಿಪಿಪಿ ಬದಲು ನೇರ ಸಬ್ಸಿಡಿಯಡಿ ಬಸ್ ನೀಡಬೇಕು ಎಂದು ಮನವಿ ಮಾಡಿದೆ. ಈ ಹಿಂದೆ ಕೇಂದ್ರ ಸರ್ಕಾರ ಶೇ 50 ಮತ್ತು ರಾಜ್ಯದ ಸಾರಿಗೆ ನಿಗಮ ಶೇ 50ರಷ್ಟು ವೆಚ್ಚ ಎಂಬ ನಿಯಮವಿತ್ತು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

   ಈ ಮಾದರಿಯಡಿ ರಾಜ್ಯ ಸರ್ಕಾರಕ್ಕೆ ನೇರವಾಗಿ ಸಬ್ಸಿಡಿ ದೊರೆಯುವುದಿಲ್ಲ. ಟೆಂಡರ್ ಪಡೆದ ಖಾಸಗಿ ಕಂಪನಿಗೆ ಲಭಿಸುತ್ತದೆ. ಬಸ್‌ಗಳ ನಿರ್ವಹಣೆ, ಚಾಲಕರ ನೇಮಕ ಕಂಪನಿಯ ಕೆಲಸವಾಗಿದೆ. ರಾಜ್ಯದ ಸಾರಿಗೆ ಸಂಸ್ಥೆಗಳು ಕೇವಲ ನಿರ್ವಾಹಕರ ನೇಮಕ, ಕಿ.ಮೀ. ಸಂಚಾರಕ್ಕೆ ಹಣ ಪಾವತಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಬೆಂಗಳೂರು ನಗರ ಪ್ರಧಾನ ಮಂತ್ರಿ ಇ-ಬಸ್ ಸೇವಾ ಯೋಜನೆಯ ಮಾನದಂಡದಡಿ ಬರುವುದಿಲ್ಲ. ಆದರೆ ಬೆಂಗಳೂರು ನಗರದಲ್ಲಿ ಈಗಾಗಲೇ ವಿವಿಧ ಖಾಸಗಿ ಕಂಪನಿಗಳ ಎಲೆಕ್ಟ್ರಿಕ್ ಬಸ್‌ಗಳು ಸಬ್ಸಿಡಿ ದರದಲ್ಲಿ ಸಂಚಾರವನ್ನು ನಡೆಸುತ್ತಿವೆ. ಬಿಎಂಟಿಸಿ ಈ ಬಸ್‌ಗಳಿಗೆ ಕಂಡಕ್ಟರ್ ಮಾತ್ರ ನೀಡುತ್ತದೆ. ಚಾಲಕ ಮತ್ತು ಬಸ್ ನಿರ್ವಹಣೆಯನ್ನು ಕಂಪನಿಯೇ ನೋಡಿಕೊಳ್ಳಬೇಕಿದೆ.

Recent Articles

spot_img

Related Stories

Share via
Copy link