ಚೀನಾದಲ್ಲಿ ಸದ್ದು ಮಾಡುತ್ತಿದೆ ರಕ್ಷಿತ್‌ ಶೆಟ್ಟಿಯ ʼ777 ಚಾರ್ಲಿʼ ಚಿತ್ರ;

ಬೆಂಗಳೂರು:

     2022ರಲ್ಲಿ ತೆರೆಕಂಡ ಸ್ಯಾಂಡಲ್‌ವುಡ್‌ನ ʼ777 ಚಾರ್ಲಿʼ ಚಿತ್ರವನ್ನು ಇಂದಿಗೂ ಹಲವರು ಮರೆತಿಲ್ಲ. ಇದಕ್ಕೆ ಕಾರಣ ಅದರಲ್ಲಿ ನಟಿಸುರುವ ಮುದ್ದಾದ ಶ್ವಾನ. ಹೌದು ಈ ಸಿನಿಮಾದ ಮುಖ್ಯ ಪಾತ್ರ ಚಾರ್ಲಿಯಾಗಿ ಲ್ಯಾಬ್ರೋಡರ್‌ ನಾಯಿಯೊಂದು ನಟಿಸಿದೆ. ಈ ಚಿತ್ರದ ಕಥೆ ಶ್ವಾನದ ಸುತ್ತವೇ ಸುತ್ತುತ್ತದೆ. ಅದಕ್ಕೆ ತಕ್ಕಂತೆ ಚಾರ್ಲಿ ಕೂಡ ಭಾವನಾತ್ಮಕ ದೃಶ್ಯಗಳಲ್ಲಿ ನಟಿಸಿ ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡಿತ್ತು.

    ಹೊಸ ಪ್ರತಿಭೆ ಕಿರಣ್‌ ರಾಜ್‌  ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ  ನಾಯಕನಾಗಿ ಕಾಣಿಸಿಕೊಂಡಿದ್ದು, ಕನ್ನಡ ಮಾತ್ರವಲ್ಲ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿದ್ದ ಈ ಚಿತ್ರ ಮತ್ತೆ ಸುದ್ದಿಯಲ್ಲಿದೆ. ಆದರೆ ಇಲ್ಲಲ್ಲ, ಬದಲಾಗಿ ದೂರ ಚೀನಾದಲ್ಲಿ. ಈ ಚೀನಾದಲ್ಲಿರುವ ಕನ್ನಡತಿ ಅಸೀಮಾ ಧೋಳ ಈ ಮಾಹಿತಿ ಹಂಚಿಕೊಂಡಿದ್ದಾರೆ.

    ರೀಲ್ಸ್‌, ವಿಡಿಯೊ ಮೂಲಕ ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಜನಪ್ರಿಯರಾಗಿರುವ ಅಸೀಮಾ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಧೋಳದವರು. ಅವರು ಚೀನಾದಲ್ಲಿ ಕನ್ನಡ ಚಿತ್ರ ʼ777 ಚಾರ್ಲಿʼ ಹೇಗೆ ಮೋಡಿ ಮಾಡುತ್ತಿದೆ ಎನ್ನುವುದನ್ನು ವಿವರಿಸಿದ್ದಾರೆ. ಈ ಬಗ್ಗೆ ರೀಲ್ಸ್‌ ಒಂದನ್ನು ಶೇರ್‌ ಮಾಡಿದ್ದಾರೆ.

    ಅಸೀಮಾ ಉನ್ನತ ಶಿಕ್ಷಣಕ್ಕಾಗಿ ಚೀನಾಕ್ಕೆ ತೆರಳಿದ್ದು, ಸದ್ಯ ವುಹಾನ್‌ನಲ್ಲಿ ನೆಲೆಸಿದ್ದಾರೆ. ರೀಲ್ಸ್‌ ಮೂಲಕ ಅಲ್ಲಿನ ಜನ ಜೀವನವನ್ನು ಪರಿಚಯಿಸುವ ಅವರು ಇದೀಗ ʼ777 ಚಾರ್ಲಿʼ ಚಿತ್ರ ಹೇಗೆ ಪ್ರೇಕ್ಷಕರನ್ನು ಆಕರ್ಷಿಸಿದೆ ಎನ್ನುವುದನ್ನು ವಿವರಿಸಿದ್ದಾರೆ. ದಕ್ಷಿಣ ಭಾರತದವರು ಎಂದು ಗೊತ್ತಾದ ತಕ್ಷಣ ಅಲ್ಲಿನವರು ʼಚಾರ್ಲಿʼ ಚಿತ್ರ ನೋಡಿದ್ದೀಯಾ ಎಂದು ಕೇಳುತ್ತಾರೆ ಎಂಬುದಾಗಿ ಹೆಮ್ಮೆಯಿಂದ ತಿಳಿಸಿದ್ದಾರೆ. ʼʼನಮ್ಮಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್‌ ಇರುವಂತೆ ಚೀನಾದಲ್ಲಿ ವಿಚಾಟ್‌ ಅಪ್ಲಿಕೇಷನ್‌ ತುಂಬ ಜನಪ್ರಿಯ. ವಿಚಾಟ್‌ನಲ್ಲಿ ಒಬ್ಬರು ʼ777 ಚಾರ್ಲಿʼಯ ದೃಶ್ಯವೊಂದನ್ನು ಪೋಸ್ಟ್‌ ಮಾಡಿದ್ದರು. ಇದು ಇಲ್ಲಿ ಈಗ ವೈರಲ್‌ ಆಗಿದೆ. ಇದನ್ನು ಸುಮಾರು 97 ಸಾವಿರ ಮಂದಿ ಲೈಕ್‌ ಮಾಡಿದರೆ, 56.6 ಸಾವಿರ ಮಂದಿ ಶೇರ್‌ ಮಾಡಿದ್ದಾರೆ. ಅಲ್ಲದೆ 5.5 ಸಾವಿರ ಕಾಮೆಂಟ್‌ ಬಂದಿದೆʼʼ ಎಂದು ತಿಳಿಸಿದ್ದಾರೆ. 

   ʼʼಚೀನಾದಲ್ಲಿ ನಮ್ಮ ಕನ್ನಡ ಸದ್ದು ಮಾಡುತ್ತಿದೆ ಎನ್ನುವುದು ತಿಳಿದು ಖುಷಿಯಾಗುತ್ತಿದೆ. ನಾನು ಕನ್ನಡದವಳು ಎಂದು ಹೇಳಲು ಹೆಮ್ಮೆಯಾಗುತ್ತಿದೆʼʼ ಎಂದು ಹೇಳಿದ್ದಾರೆ. ಸದ್ಯ ಅವರ ಈ ಪೋಸ್ಟ್‌ ವೈರಲ್‌ ಆಗಿದ್ದು, ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. 

    ಸ್ವಚ್ಛ ಕನ್ನಡ ಮಾತನಾಡುವ ಅಸೀಮಾ ಚೀನಾದ ಜನ-ಜೀವನ, ಅಲ್ಲಿನ ಜನರು ಸ್ವಚ್ಛತೆಗೆ ಕೊಡುವ ಪ್ರಾಧಾನ್ಯತೆಯನ್ನು ತೋರಿಸುವ ವಿಡಿಯೊ ಮಾಡುವ ಮೂಲಕ ಸೋಶಿಯಲ್‌ ಮೀಡಿಯಾದಲ್ಲಿ ಜನಪ್ರಿಯರಾಗಿದ್ದಾರೆ. ʼʼನಾನು ಅಸೀಮಾ, ಚೈನಾದಿಂತ ಮಾತನಾಡುತ್ತಿದ್ದೇನೆʼʼ ಎಂದು ವಿಡಿಯೊ ಆರಂಭಿಸುವ ಅವರು ಚೀನಾದ ಬಗ್ಗೆ ನಮಗೆ ಗೊತ್ತಿಲ್ಲದೆ ಅದೆಷ್ಟೋ ಸಂಗತಿಗಳನ್ನು ಹೊತ್ತು ತರುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರಿಗೆ 1 ಲಕ್ಷಕ್ಕಿಂತ ಅಧಿಕ ಫಾಲೋವರ್ಸ್‌ ಇದ್ದಾರೆ. ಬಹುಮುಖ ಪ್ರತಿಭೆಯಾಗಿರುವ ಇವರು ಉತ್ತಮ ಡ್ಯಾನ್ಸರ್‌ ಕೂಡ ಹೌದು.

Recent Articles

spot_img

Related Stories

Share via
Copy link