ಶಿರಸಿ:
ಆ.15 ರಂದು ಮಾಜಿ ಯೋಧರನ್ನು ಸನ್ಮಾನಿಸುವ ಮೂಲಕ ಸ್ಕೊಡ್‌ವೆಸ್ ಸಂಸ್ಥೆಯು 79ನೇ ಸ್ವಾತಂತ್ರ್ಯೋತ್ಸವವನ್ನು ವಿಶೇಷವಾಗಿ ಆಚರಿಸಿತು. ಸ್ಕೊಡ್‌ವೆಸ್ ಸಂಸ್ಥೆಯ ಕಛೇರಿ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಆಡಳಿತ ಮಂಡಳಿ ಸದಸ್ಯ ದಯಾನಂದ ಅಗಾಸೆ ನಿವೃತ್ತ ಯೋಧ ಜಿ.ಎಸ್. ಹೆಗಡೆ ರವರನ್ನು ಗೌರವಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ಮಾತನಾಡಿ ದೇಶದ ಸೈನಿಕರು ಗಡಿಯಲ್ಲಿ ರಾಷ್ಟ್ರ ರಕ್ಷಣೆಯಲ್ಲಿ ತೊಡಗಿದ್ದರೆ, ನಾವೆಲ್ಲರೂ ದೇಶದ ಒಳಗಿದ್ದು ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿನ ಕೊರತೆಗಳನ್ನು ನೀಗಿಸುವ ಮೂಲಕ ದೇಶವನ್ನು ಬಲಪಡಿಸೋಣ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹಾಗೂ ಮುಖ್ಯ ಹಣಕಾಸು ಹಾಗೂ ಆಡಳಿತಾಧಿಕಾರಿ ಸರಸ್ವತಿ ಎನ್.ರವಿ ಸಂದರ್ಭೋಚಿತವಾಗಿ ಮಾತನಾಡಿದರು. ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯಕ್ರಮ ಅಧಿಕಾರಿ ಡಾ. ನಾರಾಯಣ ಹೆಗಡೆ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರತೀ ವರ್ಷದಂತೆ ಈ ವರ್ಷವೂ ಸಹ ಧ್ವಜಾರೋಹಣದ ನಂತರದಲ್ಲಿ ಸಂಸ್ಥೆಯ ಸಿಬ್ಬಂದಿಗಳು ನಗರದ ಪ್ರಮುಖ ಬೀದಿಗಳಲ್ಲಿ ದೇಶ ಭಕ್ತಿಯ ಘೋಷಣೆಗಳನ್ನು ಕೂಗುತ್ತಾ, ತಿರಂಗಾ ಬೈಕ್ ರ‍್ಯಾಲಿ ನಡೆಸಿದರು.








