7th ಪೇ ಕಮಿಷನ್‌ :ಸರ್ಕಾರಕ್ಕೆ ನೌಕರರ ಪ್ರಶ್ನೆ…!

ಬೆಂಗಳೂರು

    ರಾಜ್ಯ ಸರ್ಕಾರಿ ನೌಕರರು ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗದ ವರದಿ ಶಿಫಾರಸು ಜಾರಿಗೊಳಿಸಲು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನಿಸಬೇಕಿರುವ ಸರ್ಕಾರ ವಿಳಂಬ ಮಾಡುತ್ತಿದೆ.ಜುಲೈ 15ರಂದು ಮತ್ತೊಂದು ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಮತ್ತೆ ನೌಕರರು ನಿರೀಕ್ಷೆಯಲ್ಲಿದ್ದಾರೆ.

     ಸರ್ಕಾರಿ ನೌಕರರು 7ನೇ ವೇತನ ಆಯೋಗದ ವರದಿ ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಸರ್ಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಅನಿರ್ಧಿಷ್ಟಾವಧಿ ಮುಷ್ಕರದ ಕರೆಯನ್ನು ನೀಡಿದ್ದಾರೆ. ಅದಕ್ಕೂ ಮೊದಲು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುವ ಮೊದಲ ಹಂತದ ಹೋರಾಟಕ್ಕೆ ಚಾಲನೆ ನೀಡಿದ್ದಾರೆ.

      ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್‌ 16 ರಂದು ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ವರದಿ ಸ್ವೀಕರಿಸಿ ಅದನ್ನು ಹಣಕಾಸು ಇಲಾಖೆಗೆ ನೀಡಿದ್ದರು. ಇಲಾಖೆ ವರದಿ ಶಿಫಾರಸು ಹೇಗೆ ಜಾರಿಗೊಳಿಸಬಹುದು? ಎಂದು ವರಿಯನ್ನು ತಯಾರು ಮಾಡಿ ಮುಖ್ಯಮಂತ್ರಿಗಳಿಗೆ ಸಲ್ಲಿಕೆ ಮಾಡಿದೆ. ಈ ವರದಿಯನ್ನು ಸಚಿವರಿಗೆ ವಿವರಿಸಿ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕಿದೆ.

 ನೌಕರರ ಪ್ರಶ್ನೆಗಳು:

   7ನೇ ರಾಜ್ಯ ವೇತನ ಆಯೋಗದ ವರದಿ ಜಾರಿ ವಿಳಂಬ ಮಾಡುತ್ತಿರುವ ಸರ್ಕಾರಕ್ಕೆ ಸರ್ಕಾರಿ ನೌಕರರು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಸರ್ಕಾರಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರದ ಕರೆಗೆ ಬೆದರಿರುವ ಸರ್ಕಾರ ವರದಿ ಜಾರಿ ಕುರಿತು ಆಗಸ್ಟ್‌ನಲ್ಲಿ ಆದೇಶ ಹೊರಡಿಸಲಿದೆ ಎಂಬ ಸುದ್ದಿಯೂ ಹಬ್ಬಿದೆ.

   ಸರ್ಕಾರಿ ನೌಕರರು ರಾಜ್ಯದ ವಿವಿಧ ಇಲಾಖೆಗಳಲ್ಲಿ 2.60 ಲಕ್ಷ ಖಾಲಿ ಹುದ್ದೆಗಳಿದ್ದು, ಆ ಕಾರ್ಯವನ್ನು ಹಾಲಿ ಇರುವ ಸರ್ಕಾರಿ ನೌಕರರು ಒತ್ತಡದ ನಡುವೆ ಕಾರ್ಯನಿರ್ವಹಿಸುವ ಮೂಲಕ ಸರ್ಕಾರಕ್ಕೆ ಪ್ರತಿ ವರ್ಷ ವಾರ್ಷಿಕ ಅಂದಾಜು 8,500 ಕೋಟಿ ಉಳಿತಾಯವಾಗುತ್ತಿದೆ. ರಾಜ್ಯ 7ನೇ ವೇತನ ಆಯೋಗವು ಸರ್ಕಾರಕ್ಕೆ ತನ್ನ ಪೂರ್ಣ ಪ್ರಮಾಣದ ವರದಿಯನ್ನು ಸಲ್ಲಿಸಿ 4 ತಿಂಗಳು ಪೂರ್ಣಗೊಂಡರೂ ಮುಖ್ಯಮಂತ್ರಿಗಳು ಸರ್ಕಾರಿ ನೌಕರರ ಸಮ್ಮೇಳನದಲ್ಲಿ ನೀಡಿದ್ದ ಭರವಸೆಯಂತೆ ವೇತನ ಆಯೋಗದ ವರದಿಯನ್ನು ಅನುಷ್ಠಾನಗೊಳಿಸದೇ ಇರುವುದರಿಂದ ರಾಜ್ಯ ಸರ್ಕಾರದ ಅಧಿಕಾರಿ-ನೌಕರರು ಸಹಜವಾಗಿಯೇ ವೇತನ ಪರಿಷ್ಕರಣೆ ವಿಳಂಬವಾಗುವುದೆಂಬ ಆತಂಕಕ್ಕೆ ಒಳಗಾಗಿ ಸಾಮಾಜಿಕ ಜಾಲತಾಣಗಳ ಮೂಲಕ ಸರ್ಕಾರ ಹಾಗೂ ಸಂಘಟನೆಯ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಯಾವಾಗ ಸರ್ಕಾರ ವರದಿ ಜಾರಿಗೊಳಿಸುತ್ತದೆ? ಎಂದು ಪ್ರಶ್ನಿಸಿದ್ದಾರೆ.

  ಫೆಬ್ರವರಿಯಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಸಮಾವೇಶವನ್ನು ಉದ್ಘಾಟಿಸಿದ್ದ ಮುಖ್ಯಮಂತ್ರಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದ 2.50 ಲಕ್ಷ ಸರ್ಕಾರಿ ನೌಕರರ ಸಮ್ಮುಖದಲ್ಲಿ ರಾಜ್ಯ 7ನೇ ವೇತನ ಆಯೋಗವು ವರದಿ ನೀಡಿದ ನಂತರ ಅನುಷ್ಠಾನಗೊಳಿಸುವ ಸ್ಪಷ್ಟ ಭರವಸೆ ನೀಡಿದ್ದರು. ರಾಜ್ಯ 7ನೇ ವೇತನ ಆಯೋಗವು ಅಂತಿಮವಾಗಿ 2024ರ ಮಾರ್ಚ್‍ನಲ್ಲಿ ಶೇ 27.5 ಫಿಟ್‍ಮೆಂಟ್ ಸೌಲಭ್ಯದೊಂದಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಆದರೆ ವರದಿ ಅನುಷ್ಠಾನಗೊಳಿಸಲು ವಿಳಂಬ ಮಾಡುತ್ತಿರುವುದು ಏಕೆ? ಎಂದು ಪ್ರಶ್ನಿಸಲಾಗಿದೆ.

   ಮತ್ತೊಂದು ಪ್ರಮುಖ ಬೇಡಿಕೆಯಾದ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸುವ ಸಲುವಾಗಿ ಈ ಹಿಂದಿನ ಸರ್ಕಾರ ಇತರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲು 2023ರ ಮಾರ್ಚ್‍ನಲ್ಲಿ ಅಪರ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿತು. ಸಮಿತಿಯು ಇದುವರೆವಿಗೂ ಒಂದೂ ಸಭೆಯನ್ನು ನಡೆಸಿಲ್ಲ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಿರುವ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನವನ್ನು ಸಹ ನಡೆಸಿರುವುದಿಲ್ಲ. ಅಲ್ಲದೆ ಈ ಸಂಬಂಧ ಸರ್ಕಾರಕ್ಕೆ ಯಾವುದೇ ವರದಿಯನ್ನು ಇಲ್ಲಿಯವರೆವಿಗೂ ನೀಡಿಲ್ಲ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯನ್ನು ಯಾವಾಗ ಈಡೇರಿಸಲಿದೆ? ಎಂದು ನೌಕರರು ಪ್ರಶ್ನಿಸಿದ್ದಾರೆ.

   ಕೆಲವು ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದುಪಡಿಸಿ ಓಪಿಎಸ್ ಜಾರಿಗೊಳಿಸಲು ಆದೇಶ ಹೊರಡಿಸಿವೆ. ಎನ್‌ಪಿಎಸ್‌ ಯೋಜನೆಯಲ್ಲಿ ನೇಮಕಗೊಂಡು ನಿವೃತ್ತಿಯಾಗಿರುವ ಸರ್ಕಾರಿ ನೌಕರರಿಗೆ ಮಾಸಿಕ ಕೇವಲ ರೂ. 1500 ಪಿಂಚಣಿ ಲಭ್ಯವಾಗುತ್ತಿದ್ದು, ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2.50 ಲಕ್ಷ ಎನ್‌ಪಿಎಸ್ ಯೋಜನೆ ವ್ಯಾಪ್ತಿಯ ನೌಕರರ ಸಂಧ್ಯಾಕಾಲದ ಬದುಕು ಆರ್ಥಿಕ ಭದ್ರತೆಯಿಲ್ಲದೆ ದುಸ್ತರಗೊಳ್ಳುತ್ತಿದ್ದು, ಸರ್ಕಾರ ಅಂತಹ ನೌಕರರ ಕುಟುಂಬದ ನೆರವಿಗೆ ಧಾವಿಸಬೇಕಾದ ತುರ್ತು ಅಗತ್ಯವಿದೆ ಎಂದು ಸರ್ಕಾರವನ್ನು ಒತ್ತಾಯಿಸಲಾಗಿದೆ.  

   ರಾಜ್ಯ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ನಗದುರಹಿತ ಚಿಕಿತ್ಸೆ ನೀಡುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಹಿಂದಿನ ರಾಜ್ಯ ಸರ್ಕಾರವು 2021-22ರ ಆಯವ್ಯದಲ್ಲಿ ಘೋಷಿಸಿತ್ತು. ಸಚಿವ ಸಂಪುಟದ ಅನುಮೋದನೆ ಪಡೆದು ಈ ಯೋಜನೆಯ ರೂಪುರೇಷೆಗಳನ್ನು ಸಿದ್ಧಪಡಿಸಿ ನಿರ್ವಹಣೆ ಮಾಡಲು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟಿಗೆ ಜವಾಬ್ದಾರಿಯನ್ನು ನೀಡಿ 2022ರ ಸೆಪ್ಟಂಬರ್‌ನಲ್ಲಿಯೇ ಸರ್ಕಾರ ಆದೇಶ ಹೊರಡಿಸಿತ್ತು. ಹಿಂದಿನ ಸರ್ಕಾರದ ಮುಖ್ಯಮಂತ್ರಿಗಳು ಈ ಯೋಜನೆಯನ್ನು 2023ರ ಮಾರ್ಚ್‍ನಲ್ಲಿ ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿದ್ದರು. ಈ ಯೋಜನೆಗೆ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಪ್ರತಿ ತಿಂಗಳು ವೃಂದವಾರು ವಂತಿಗೆ ಕಟಾವಣೆಯಾಗಲಿದ್ದು, ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗದು. ಇದನ್ನು ಬೇಗ ಜಾರಿಗೊಳಿಸಬೇಕು ಎಂದು ಒತ್ತಾಯಿಸಲಾಗಿದೆ.

   ರಾಜ್ಯದಲ್ಲಿ 2.60 ಲಕ್ಷ ಖಾಲಿ ಹುದ್ದೆಗಳಿದ್ದು, ಹಾಲಿ ನೌಕರರು ಖಾಲಿ ಹುದ್ದೆಗಳ ಕಾರ್ಯಭಾರವನ್ನೂ ಸಹ ನಿರ್ವಹಿಸುತ್ತಿರುವುದರಿಂದ ನೌಕರರು ಒತ್ತಡಕ್ಕೆ ಸಿಲುಕಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದು, ಅವಶ್ಯವಿರುವ ಚಿಕಿತ್ಸೆ ಪಡೆಯುವಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಯೋಜನೆಯ ಅನುಷ್ಠಾನಾಧಿಕಾರಿಗಳು ತಾಂತ್ರಿಕ ಹಾಗೂ ಇನ್ನಿತರ ಕಾರಣಗಳನ್ನು ನೀಡಿ ಈ ಯೋಜನೆಯನ್ನು ಜಾರಿಗೊಳಿಸಲು ಅನಗತ್ಯ ವಿಳಂಬ ಮಾಡುತ್ತಿದ್ದು, ನೌಕರರಿಗೆ ಆರ್ಥಿಕ ಹೊರೆಯಾಗುತ್ತಿರುವುದರಿಂದ ಶೀಘ್ರವಾಗಿ ಈ ಯೋಜನೆಯನ್ನು ಲೋಕಾರ್ಪಣೆ ಮಾಡುವಂತೆ ಒತ್ತಾಯ ಮಾಡಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link