ಹುಬ್ಬಳ್ಳಿ:
ಹುಬ್ಬಳ್ಳಿಯಲ್ಲಿ ಚಾಕುವಿನಿಂದ ಇರಿದು ಅಂಜಲಿ ಅಂಬಿಗೇರ್ ಎಂಬ ಯುವತಿಯನ್ನು ಹತ್ಯೆ ಮಾಡಿ ಬಂಧನಕ್ಕೊಳಗಾಗಿರುವ ಆರೋಪಿ ವಿಶ್ವ ಅಲಿಯಾಸ್ ಗಿರೀಶ್ನನ್ನು ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಎಂಟು ದಿನ ಸಿಐಡಿ ಕಸ್ಟಡಿಗೆ ನೀಡಿ ಗುರುವಾರ ಆದೇಶಿಸಿದೆ.
ಪ್ರಕರಣ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಆರೋಪಿ ಗಿರೀಶ್ನನ್ನು ಇಂದು ಹುಬ್ಬಳ್ಳಿಯ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಿ, ಮತ್ತೆ 15 ದಿನ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು.
ಆರೋಪಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗೇಶ್ ನಾಯ್ಕ್ ಅವರು, ಎಂಟು ದಿನ ಮಾತ್ರ ಸಿಐಡಿ ವಶಕ್ಕೆ ನೀಡಿ ಆದೇಶಿಸಿದ್ದಾರೆ. ಈ ವೇಳೆ ಆರೋಪಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ್ದಾನೆ. ಇದಕ್ಕೆ ಹತ್ಯೆ ಮಾಡುವಾಗ ಗೊತ್ತಾಗಲಿಲ್ವಾ ಎಂದು ಜಡ್ಜ್ ಗದರಿದರು. ಸಿಐಡಿ ವಿಚಾರಣೆ ವೇಳೆ ಆರೋಪಿ ವಿಶ್ವ ತಪ್ಪೊಪ್ಪಿಕೊಂಡಿದ್ದು, ಅಂಜಲಿಯನ್ನು ನಾನು ಮೈಸೂರಿಗೆ ಬಾ ಎಂದು ಕರೆದಿದ್ದೆ.
ಆಕೆ ಬರಲಿಲ್ಲ. ಹಾಗಾಗಿ ಕೊಲೆ ಮಾಡಿದೆ ಎಂದಿದ್ದಾನೆ. ಜೊತೆಗೆ ಅಂಜಲಿ ಕೊಲೆಯಾಗುವ ಹಿಂದಿನ ದಿನವೇ ಅಂಜಲಿಗೆ ವಿಶ್ವ 1000 ರೂಪಾಯಿ ಫೋನ್ ಪೇ ಕೂಡ ಮಾಡಿದ್ದ. 1000 ರೂ. ಹಣ ತೆಗೆದುಕೊಂಡು ನಂತರ ಆಕೆ ಆತನನ್ನು ಬ್ಲಾಕ್ ಮಾಡಿದ್ದಳು. ಅದೇ ಕಾರಣಕ್ಕೆ ಸಿಟ್ಟು ಬಂದು ಕೊಲೆ ಮಾಡಿದ್ದೇನೆ ಎಂದು ವಿಶ್ವ ಸಿಐಡಿ ಅಧಿಕಾರಿಗಳ ಬಳಿ ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ.