ಬೆಂಗಳೂರು:
ಪ್ರತಿಷ್ಠಿತ ಆ್ಯಪಲ್ ಕಂಪನಿಯ ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಮೊಬೈಲ್, ಏರ್ ಪಾಡ್ ಸೇರಿದಂತೆ ಕೆಲ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಸುಮಾರು ರೂ,8 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಚಿಕ್ಕಪೇಟೆಯ ಖಲೀಲ್ ಕಟ್ಟಡದ ಚೋದ್ರಾ ಟೆಲಿಕಾಂ ಎಂಬ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಅಂಗಡಿಯಲ್ಲಿ ಆ್ಯಪಲ್ ಕಂಪನಿ ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ಮೊಬೈಲ್ ಫೋನ್, ಏರ್ ಪಾಡ್, ಯುಎಸ್’ಬಿ ಕೇಬಲ್, ಲೈಟ್ನಿಂಗ್ ಕೇಬಲ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸಿಸಿಬಿ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
ದಾಳಿ ವೇಳೆ ಆ್ಯಪಲ್ ಕಂಪನಿ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ವೇಳೆ ಸುಮಾರು ರೂ.8 ಲಕ್ಷ ಮೌಲ್ಯದ ಕಳಪೆ ಗುಣಮಟ್ಟದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ವಿದ್ಯುತ್ ತಾಮ್ರದ ತಂತಿ ಮಾರಾಟ ಮಾಡುತ್ತಿದ್ದ ಗರುಚಾರ್ ಪಾಳ್ಯದ ಅಂಗಡಿ ಮೇಲೆ ಸಿಸಿಬಿ ದಾಳಿ ನಡೆಸಿ, ರೂ.6.20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ಈ ಅಂಗಡಿಯಲ್ಲಿ ವಿ ಗಾರ್ಡ್, ಆರ್ ಆರ್, ಪಾಲಿ ಕ್ಯಾಬ್, ಆ್ಯಂಕರ್,ಗ್ರೇಟ್ ವೈಟ್, ಹಾವೆಲ್ಸ್ ಕಂಪನಿಗಳ ಬ್ರ್ಯಾಂಡ್ ಹೆಸರಿನಲ್ಲಿ ಕಳಪೆ ಗುಣಮಟ್ಟದ ವಿದ್ಯುತ್ ತಾಮ್ರದ ವೈಯರ್ ಮಾರಾಟ ಮಾಡುತ್ತಿರುವ ಬಗ್ಗೆ ಖಚಿಕ ಮಾಹಿತಿ ದೊರೆತೆ ಹಿನ್ನೆಲೆಯಲ್ಲಿ ದಾಳಿ ಮಾಡಿ ರೂ,6.20 ಲಕ್ಷ ಮೌಲ್ಯದ ಕಳಪೆ ಗುಣಮಟ್ಟದ ವಿದ್ಯುತ್ ತಾಮ್ರದ ತಂತಿ ಜಪ್ತಿ ಮಾಡಿದ್ದಾರೆ. ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.