ಮದ್ದೂರಿನಲ್ಲಿ ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಾಟ : 8 ಮಂದಿಗೆ ಗಾಯ

ಮಂಡ್ಯ:

    ಮಂಡ್ಯದ ಮದ್ದೂರಿನ ಚನ್ನೇಗೌಡ ಬಡಾವಣೆ ನಿವಾಸಿಗಳು ಭಾನುವಾರ ರಾತ್ರಿ ಗಣಪತಿ ವಿಸರ್ಜನೆ  ಮೆರವಣಿಗೆ ನಡೆಸುತ್ತಿರುವಾಗ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ನಾಲ್ವರು ಹೋಂಗಾರ್ಡ್​​ಗಳು ಸೇರಿ 8 ಜನರು ಗಾಯಗೊಂಡಿದ್ದಾರೆ. ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಮದ್ದೂರಿನಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಮಸೀದಿಯಿಂದಲೇ ಲೈಟ್ ಆಫ್ ಮಾಡಿ ಕಲ್ಲು ತೂರಾಟ  ಮಾಡಿದ್ದಾರೆ ಎಂದು ಮೆರವಣಿಗೆಯಲ್ಲಿದ್ದವರು ಆರೋಪಿಸಿದ್ದಾರೆ.

    ಬೀದಿಯಲ್ಲಿ ಮೆರವಣಿಗೆ ಮೂಲಕ ಬಂದ ಗಣಪ ಮಸೀದಿ ಮುಂದೆ ಹಾದುಹೋಗುತ್ತಿದ್ದಾಗ ಸ್ಥಳದಲ್ಲಿ ದಿಢೀರ್ ಲೈಟ್​ ಆಫ್​ ಮಾಡಿ ಮಸೀದಿಯಿಂದ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೇ ದೊಣ್ಣೆಗಳನ್ನು ಕೂಡ ಎಸೆದಿದ್ದಾರೆ ಎಂದು ಸ್ಥಳದಲ್ಲಿದ್ದವರು ದೂರಿದ್ದಾರೆ. ಮಸೀದಿ ಬಳಿ ಬಂದಾಗ ಯಾವುದೇ ಘೋಷಣೆ ಕೂಗಬಾರದು. ಮೈಕ್ ಹಾಕಬಾರದು ಎಂದು ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಅದರಂತೆ ಮೈಕ್‌ ಆಫ್ ಮಾಡಿ ಮೆರವಣಿಗೆ ಮಾಡಲಾಗುತ್ತಿತ್ತು. ಇದಾದ ಬಳಿಕ‌ ಏಕಾಏಕಿ ಲೈಟ್ ಆಫ್ ಮಾಡಿ ಗಣಪತಿ ಮೆರವಣಿಗೆ ಮೇಲೆ ಮಸೀದಿಯಿಂದ ಕಲ್ಲು ತೂರಾಟ‌ ಮಾಡಲಾಗಿದೆ ಎಂದು ಹಿಂದೂಗಳು ಆರೋಪಿಸಿದ್ದಾರೆ.

   ಸ್ಥಳಕ್ಕೆ ಮಂಡ್ಯ ಎಸ್‌ಪಿ ಬಾಲದಂಡಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಕಳೆದ ವರ್ಷ ನಾಗಮಂಗಲದಲ್ಲಿ ಗಲಾಟೆ ಸಂಭವಿಸಿತ್ತು. ಇದೀಗ ಮತ್ತೊಂದು ಅದೇ ರೀತಿಯ ಘಟನೆ ಜಿಲ್ಲೆಯಲ್ಲಿ ಮರುಕಳಿಸಿದೆ. ಪ್ರಕರಣ ಸಂಬಂಧ 20ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

   ತಮಿಳು ಕಾಲೋನಿ ಯುವಕರು ಗಣೇಶ ಪ್ರತಿಷ್ಠಾಪನೆ ಮಾಡಿದ್ದರು. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ರಾಮ್ ರಹೀಮ್ ನಗರದಲ್ಲಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಲೈಟ್​ ಆಫ್ ಮಾಡಿ ಕಲ್ಲು ತೂರಾಟ ಮಾಡಿದ್ದಾರೆಂಬ ಆರೋಪವಿದೆ. ಘಟನೆ ಸಂಬಂಧ 2 ಪ್ರಕರಣ​ ದಾಖಲು ಮಾಡಿದ್ದೇವೆ. 21 ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವೆ. ಇಬ್ಬರು ಮಾತ್ರ ಚನ್ನಪಟ್ಟಣದವರು, ಉಳಿದೆಲ್ಲರೂ ಸ್ಥಳೀಯರು. ಮಂಗಳವಾರ ಬೆಳಗ್ಗೆವರೆಗೆ ಮದ್ದೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ ಎಂದು ಮದ್ದೂರಿನಲ್ಲಿ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.

   ಮದ್ದೂರಿನಲ್ಲಿ ನಾಳೆ ಬೆಳಗ್ಗೆ ವರೆಗೆ 144 ಸೆಕ್ಷನ್ ಜಾರಿ ಮಾಡಿ ಆದೇಶ ಹೊರಡಿಸಲಾಗಿದೆ. ಎಸ್‌ಪಿ ಮಲ್ಲಿಕಾರ್ಜನ ಬಾಲದಂಡಿ ನೇತೃತ್ವದಲ್ಲಿ ಮದ್ದೂರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥಸಂಚಲನ ನಡೆಸಲಿದ್ದಾರೆ.

Recent Articles

spot_img

Related Stories

Share via
Copy link