ಇನ್ಫಿ ನಾರಾಯಣಮೂರ್ತಿ ಧ್ವನಿಯಲ್ಲಿ ಬಂದ ಜಾಹೀರಾತು ನಂಬಿ 86 ಲಕ್ಷ ರೂ. ಟೋಪಿ!

ಬೆಂಗಳೂರು:

   ದೊಡ್ಡ ಉದ್ಯಮಿಗಳ ಹೆಸರು ಹಾಗೂ ಧ್ವನಿಯಲ್ಲಿ ಆನ್‌ಲೈನ್ ಟ್ರೇಡಿಂಗ್   ಕಂಪನಿ ಜಾಹೀರಾತು ರೂಪಿಸಿ, ಅದರ ಮೂಲಕ ಅಮಾಯಕರನ್ನು ಸಂಪರ್ಕಿಸಿ ಅವರಿಂದ ಲಕ್ಷಾಂತರ ರೂಪಾಯಿ ಹಣ ದೋಚಿದ   ಪ್ರಕರಣಗಳು ವರದಿಯಾಗಿವೆ. ಇನ್‌ಫೋಸಿಸ್‌ ನಾರಾಯಣಮೂರ್ತಿ   ಹಾಗೂ ರಿಲಯನ್ಸ್‌ ಮುಕೇಶ್‌ ಅಂಬಾನಿ   ಧ್ವನಿಗಳನ್ನು ವಂಚನೆಗೆ ಬಳಸಲಾಗಿದೆ.

  ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಸೈಬರ್ ವಂಚಕರು ಮಹಿಳೆ ಮತ್ತು ನಿವೃತ್ತ ನೌಕರರೊಬ್ಬರಿಗೆ 86 ಲಕ್ಷ ವಂಚಿಸಿದ್ದಾರೆ. ಈ ಸಂಬಂಧ ಸೈಬರ್ ಅಪರಾಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  ಇನ್ಫೋಸಿಸ್ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಹಾಗೂ ರಿಲಯನ್ಸ್‌ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಅವರು `ಎಫ್‌ಎಕ್ಸ್ ರೋಡ್.ಕಾಂ’ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದಂತೆ ಫೇಸ್‌ಬುಕ್‌ನಲ್ಲಿ ಸೈಬ‌ರ್‌ ಕಳ್ಳರು ಪೋಸ್ಟ್ ಪ್ರಕಟಿಸಿದ್ದರು. ಅದನ್ನು ಗಮನಿಸಿದ್ದ ನಿವೃತ್ತ ನೌಕರರೊಬ್ಬರು ಹಣ ಕಳೆದುಕೊಂಡಿದ್ದಾರೆ. ಕಂಪನಿ ವ್ಯವಸ್ಥಾಪಕರ ಸೋಗಿನಲ್ಲಿ ಸೈಬರ್‌ ವಂಚಕನೊಬ್ಬ ಮೇ 30ರಂದು ಕರೆ ಮಾಡಿ ಲಿಂಕ್ ಕಳುಹಿಸಿದ್ದ.

   ಆ ಲಿಂಕ್ ಮೂಲಕ ನಿವೃತ್ತ ನೌಕರರು ಹೂಡಿಕೆ ಖಾತೆ ತೆರೆದಿದ್ದರು. ಲಾಭದ ಆಸೆಯಿಂದ ಅವರು ಮೂರು ಬ್ಯಾಂಕ್‌ ಖಾತೆಗಳಿಂದ ಮೇ 30ರಿಂದ ಅಕ್ಟೋಬರ್ 3ರ ಮಧ್ಯೆ ಒಟ್ಟು 719 ಲಕ್ಷ ಹೂಡಿಕೆ ಮಾಡಿದ್ದರು. ಹೂಡಿಕೆ ಮಾಡಿದ್ದ ಹಣಕ್ಕೆ ಯಾವುದೇ ಕಮಿಷನ್ ನೀಡಿಲ್ಲ. ಅಲ್ಲದೇ ಅಸಲು ಸಹ ನೀಡದೇ ಮೋಸ ಮಾಡಲಾಗಿದೆ ಎಂದು ದೂರು ನೀಡಲಾಗಿದೆ.

   ಇನ್ನು ಮಹಿಳೆಯೊಬ್ಬರಿಗೆ ಇದೇ ರೀತಿ ಹಂತಹಂತವಾಗಿ 67 ಲಕ್ಷ ರೂ. ಟೋಪಿ ಹಾಕಲಾಗಿದೆ. ಸೆಪ್ಟೆಂಬರ್ 23ರಂದು ಫೇಸ್‌ಬುಕ್‌ನಲ್ಲಿ “ಎಫ್‌ಎಕ್ಸ್ ರೋಡ್ ಪ್ಲಾಟ್‌ಫಾರಂ’ ಟ್ರೇಡಿಂಗ್ ಬಗ್ಗೆ ಎನ್‌.ಆರ್. ನಾರಾಯಣ ಮೂರ್ತಿ ಅವರು ಮಾತನಾಡಿದಂತೆಯೇ ಮಾಹಿತಿ ನೀಡಲಾಗಿತ್ತು. ನಂತರ, ಅಪರಿಚಿತ ವ್ಯಕ್ತಿಯೊಬ್ಬ ದೂರುದಾರರಾದ ಕೆ.ಜಿ.ವೀಣಾ ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿ, ಪ್ಲಾಟ್‌ಫಾರಂನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದೆಂದು ಅಮಿಷವೊಡ್ಡಿದ್ದ.

   ಸೈಬರ್ ವಂಚಕರ ಮಾತು ನಂಬಿದ್ದ ವೀಣಾ ಅವರು ಕೆನರಾ ಬ್ಯಾಂಕ್ ಖಾತೆಯಿಂದ 11.39 ಲಕ್ಷ ಹೂಡಿಕೆ ಮಾಡಿದ್ದರು. ಆ ಹಣಕ್ಕೆ ಆರಂಭದಲ್ಲಿ 78,363 ಲಾಭಾಂಶವನ್ನು ವಂಚಕರು ನೀಡಿದ್ದರು. ಇದನ್ನು ನಂಬಿದ್ದ ಮಹಿಳೆ ಹಂತಹಂತವಾಗಿ 67 ಲಕ್ಷ ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೂಡಿಕೆ ಮಾಡಿದ ಹಣಕ್ಕೆ 55,997 ರೂ. ಮಾತ್ರ ವಾಪಸ್ ನೀಡಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಿಎನ್‌ಎಸ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Recent Articles

spot_img

Related Stories

Share via
Copy link
Powered by Social Snap