ಲಖಿಸರಾಯ್:
ಬಿಹಾರದ ಲಖಿಸರಾಯ್ ಜಿಲ್ಲೆಯಲ್ಲಿ ಬುಧವಾರ ನಸುಕಿನ ಜಾವ ಟ್ರಕ್ ಮತ್ತು ಟೆಂಪೋ ಮುಖಾಮುಖಿ ಡಿಕ್ಕಿಯಾಗಿ ಕನಿಷ್ಠ ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ. ಲಖಿಸರಾಯ್-ಸಿಕಂದ್ರ ಮುಖ್ಯ ರಸ್ತೆಯ ಬಿಹರೌರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಸುಮಾರು 15 ಮಂದಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ಡಿಕ್ಕಿಯಾದ ಸಮಯದಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಮೃತಪಟ್ಟವರಲ್ಲಿ ವೀರ್ ಪಾಸ್ವಾನ್, ವಿಕಾಸ್ ಕುಮಾರ್, ವಿಜಯ್ ಕುಮಾರ್, ದಿಬಾನಾ ಪಾಸ್ವಾನ್, ಅಮಿತ್ ಕುಮಾರ್, ಮೋನು ಕುಮಾರ್, ಕಿಸಾನ್ ಕುಮಾರ್ ಮತ್ತು ಮನೋಜ್ ಗೋಸ್ವಾಮಿ ಎಂದು ಗುರುತಿಸಲಾಗಿದ್ದು ಅವರಲ್ಲಿ ಬಹುತೇಕರು ಮುಂಗರ್ ಪ್ರದೇಶದವರಾಗಿದ್ದಾರೆ.
ಘಟನೆ ಬಗ್ಗೆ ಪಿಟಿಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಲಕ್ಷಿಸರೈ ಎಸ್ಪಿ ಪಂಕಜ್ ಕುಮಾರ್, “ಲಖಿಸರೈ-ಸಿಕಂದ್ರ ಮುಖ್ಯರಸ್ತೆಯಲ್ಲಿ ನಸುಕಿನ ಜಾವ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಒಂಬತ್ತು ಜನರು ಸ್ಥಳದಲ್ಲೇ ಮೃತಪಟ್ಟರೆ, ಹಲವಾರು ಮಂದಿ ಗಾಯಗೊಂಡಿದ್ದಾರೆ. ಎಲ್ಲಾ ಗಾಯಾಳುಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ಸಂತ್ರಸ್ತರು ಮದುವೆ ಸಮಾರಂಭದಿಂದ ಹಿಂದಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ, ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಟ್ರಕ್ ನ್ನು ಪೊಲೀಸರು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.