ತಾಯಿ-ಮಗನ ಅಪಹರಿಸಿ ದೌರ್ಜನ್ಯ: 9 ಮಂದಿ ಬಂಧನ

ಬೆಂಗಳೂರು:

   ಕದ್ದ ಮೊಬೈಲ್ ಮತ್ತು ಚಿನ್ನದ ಸರಗಳನ್ನು ಮಾರಾಟ ಮಾಡುತ್ತಿದ್ದ ತಾಯಿ ಮತ್ತು ಮಗನನ್ನು ಅಪಹರಿಸಿ, ಕಿರುಕುಳ ನೀಡಿದ ಆರೋಪದ ಮೇಲೆ ಇಬ್ಬರು ಮಹಿಳೆಯರು ಸೇರಿದಂತೆ 9 ಮಂದಿ ಆರೋಪಿಗಳನ್ನು ಚಂದ್ರಲೇಔಟ್ ಪೊಲೀಸ್ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

   ಆರೋಪಿಗಳನ್ನು ಜೋಸೆಫ್‌, ಶ್ರೀನಿವಾಸ್ ಅಲಿಯಾಸ್ ಪಾಗಲ್ ಸೀನಾ, ಸೌಮ್ಯಾ, ಬಡ್ಡಿ ವ್ಯವಹಾರ ಮಾಡುವ ಪ್ರತಾಪ್, ಜತೀನ್, ವಿಜ್ಞೇಶ್, ಆಟೋ ಚಾಲಕ ಸೈಯದ್ ಶಹಬುದ್ದೀನ್, ಸ್ವಾತಿ, ಮಾದೇಶ ಎಂದು ಗುರ್ತಿಸಲಾಗಿದೆ.

   ಆರೋಪಿಗಳ ವಿರುದ್ಧ ಅಪಹರಣ, ಅಕ್ರಮ ಬಂಧನ, ಸುಲಿಗೆ, ದೈಹಿಕ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಆ.13ರಂದು ಚಂದ್ರಾಲೇಔಟ್ ಠಾಣಾ ವ್ಯಾಪ್ತಿಯಿಂದ 40 ವರ್ಷದ ಮಹಿಳೆ ಹಾಗೂ ಆತನ ಪುತ್ರ ವರುಣ್(20) ಎಂಬುವವರನ್ನು ಅಪಹರಿಸಿ 3 ದಿನಗಳ ಕಾಲ ಅಕ್ರಮ ಬಂಧನದಲ್ಲಿ ಇರಿಸಿಕೊಂಡು ದೈಹಿಕವಾಗಿ ದೌರ್ಜನ್ಯ ನಡೆಸಿದ್ದರು. ಅಲ್ಲದೆ, 9 ಲಕ್ಷ ರೂ. ಹಣಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ಇವರ ಬಳಿ ಹಣ ಇಲ್ಲ ಎಂಬುದು ಗೊತ್ತಾಗಿ ಬಿಟ್ಟು ಕಳುಹಿಸಿದ್ದರು. ಬಳಿಕ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು 9 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

   ದೂರುದಾರ ಮಹಿಳೆ ಮತ್ತು ಆಕೆಯ ಪುತ್ರ ವರುಣ್, ಕದ್ದ ಮೊಬೈಲ್‌ಗಳು ಹಾಗೂ ಚಿನ್ನಾಭರಣಗಳನ್ನು ವಿಲೇವಾರಿ ಮಾಡುತ್ತಾರೆ. ಶಕ್ತಿ ಮತ್ತು ಬಸವರಾಜು ಎಂಬುವವರು ಕದ್ದ ವಸ್ತುಗಳನ್ನು ವಿಲೇವಾರಿ ಮಾಡಲು ವರುಣ್‌ಗೆ ನೀಡುತ್ತಿದ್ದರು. ವರುಣ್ ತನ್ನ ತಾಯಿಯ ಮೂಲಕ ಈ ವಸ್ತುಗಳನ್ನು ವಿಲೇವಾರಿ ಮಾಡಿಸುತ್ತಿದ್ದ. ಈ ವಿಚಾರ ತಿಳಿದುಕೊಂಡ ರೌಡಿ ಶೀಟರ್‌ಗಳಾದ ಜೋಸೆಫ್ ಮತ್ತು ಪಾಗಲ್ ಸೀನ, ವರುಣ್ ಮತ್ತು ಆತನ ತಾಯಿಯಿಂದ 2 ಲಕ್ಷ ರೂ. ಸುಲಿಗೆ ಮಾಡುವ ಉದ್ದೇಶದಿಂದ ತಮ್ಮ ಸಹಚರರೊಂದಿಗೆ ಆ.13ರಂದು ಚಂದ್ರಾಲೇಔಟ್‌ನಿಂದ ತಾಯಿ-ಮಗನನ್ನು ಅಪಹರಣ ಮಾಡಿದ್ದರು. ಬಳಿಕ ಕೆಂಗೇರಿಯ ಪ್ರತಾಪ್ ಮತ್ತು ಸೌಮ್ಯ ಮನೆಯಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದರು.

   ವರುಣ್ ಮತ್ತು ಆತನ ತಾಯಿಯ ಅಕ್ರಮ ಬಂಧನದ ವೇಳೆ ಆರೋಪಿಗಳು ಇಬ್ಬರ ಮೇಲೆ ದೈಹಿಕ ಹಲ್ಲೆ ನಡೆಸಿದ್ದರು. ಈ ವೇಳೆ ವರುಣ್ ತಾಯಿ ಮೇಲೆ ಲೈಂಗಿಕವಾಗಿ ಹಲ್ಲೆ ನಡೆಸಿ 2 ಲಕ್ಷ ರೂ. ಹಣಕ್ಕೆ ಬೇಡಿಕೆ ಇರಿಸಿದ್ದರು. ಬಳಿಕ ಇವರ ಬಳಿ ಹಣ ಇಲ್ಲ ಎಂಬುದನ್ನು ತಿಳಿದುಕೊಂಡು ಆ.16ರಂದು ಬಿಟ್ಟು ಕಳುಹಿಸಿದ್ದರು. ಬಳಿಕ ಮಹಿಳೆ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ನಡೆಸಿ 9 ಮಂದಿ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ