9 ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸಂಪುಟ ಉಪಸಮಿತಿ ನಿರ್ಧಾರ!

ಬೆಂಗಳೂರು: 

   ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರಂಭಿಸಲಾಗಿದ್ದ 10 ಹೊಸ ವಿಶ್ವವಿದ್ಯಾಲಯಗಳ ಪೈಕಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ಸಚಿವ ಸಂಪುಟ ಉಪಸಮಿತಿ ತೀರ್ಮಾನಿಸಿದೆ.

   ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಯ ಪರಿಶೀಲನೆ ಕುರಿತು ಗುರುವಾರ ನಡೆಸಿದ ಮೊದಲ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧ್ಯಕ್ಷತೆಯ ಈ ಉಪಸಮಿತಿಯು, ಬೀದರ್ ವಿಶ್ವವಿದ್ಯಾಲಯ ಹೊರತುಪಡಿಸಿ ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ಮತ್ತು ನೃಪತುಂಗ ವಿಶ್ವವಿದ್ಯಾಲಯ ಸೇರಿ 9 ವಿಶ್ವವಿದ್ಯಾಲಯಗಳನ್ನು ಮುಚ್ಚಲು ತೀರ್ಮಾನ ಕೈಗೊಂಡಿದೆ ಎನ್ನಲಾಗಿದೆ.

   ಇತರ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ಬೀದರ್ ವಿಶ್ವವಿದ್ಯಾಲಯ 150 ಸಂಯೋಜಿತ ಕಾಲೇಜುಗಳನ್ನು ಹೊಂದಿದ್ದು, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಾವುದೇ ವಿಶ್ವವಿದ್ಯಾಲಯ ಸುಗಮವಾಗಿ ನಡೆಯಲು ಸಂಯೋಜಿತ ಕಾಲೇಜುಗಳ ಶುಲ್ಕ ಮುಖ್ಯವಾಗಿರುತ್ತದೆ. ಹೀಗಾಗಿ, ಈ ವಿಶ್ವವಿದ್ಯಾಲಯವನ್ನು ಉಳಿಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

   ಹೊಸದಾಗಿ ಸ್ಥಾಪನೆಯಾದ ವಿಶ್ವವಿದ್ಯಾಲಯಗಳನ್ನು ನಡೆಸಲು ಅಗತ್ಯವಿರುವ ಹಣಕಾಸಿನ ಮೊತ್ತದ ಬಗ್ಗೆ ಪರಿಶೀಲನೆ ನಡೆಸಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ವರದಿ ಸಲ್ಲಿಸಿತ್ತು. ಹೀಗಾಗಿ, ಸಂಪುಟ ಉಪಸಮಿತಿಯನ್ನು ರಚಿಸಲಾಯಿತು.

   ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಮತ್ತು ಕಾರ್ಯಾಚರಣೆಗೆ ಜಮೀನಿನ ವೆಚ್ಚ ಬಿಟ್ಟು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವೇತನ, ಮೂಲ ಸೌಕರ್ಯ, ಸಲಕರಣೆಗಳು, ವಾಹನಗಳು, ಪೀಠೋಪಕರಣ ಮತ್ತು ಇತರೆ ವಸ್ತುಗಳ ಖರೀದಿಸಲು 342 ಕೋಟಿ ರೂಪಾಯಿ ಅಗತ್ಯವಿದೆ. ವಿಶ್ವವಿದ್ಯಾಲಯ ಸ್ಥಾಪನೆಗೆ 100 ರಿಂದ 200 ಎಕರೆ ಜಮೀನು ಕೂಡ ಅಗತ್ಯವಿರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಹಾಸನ, ಚಾಮರಾಜನಗರ, ಹಾವೇರಿ, ಕೊಡಗು, ಕೊಪ್ಪಳ, ಬಾಗಲಕೋಟೆ, ಮಹಾರಾಣಿ ಕ್ಲಸ್ಟರ್, ಮಂಡ್ಯ ಮತ್ತು ನೃಪತುಂಗ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಸಾಧ್ಯತೆ ಇದೆ.

Recent Articles

spot_img

Related Stories

Share via
Copy link