ಬೆಂಗಳೂರು:
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಮಾಡಿದ ಪ್ರಮಾದದಿಂದ, 93 ವರ್ಷದ ನಿವೃತ್ತ ಪಿಡಬ್ಲ್ಯೂಡಿ ಎಂಜಿನಿಯರ್ ಲಕ್ಷ್ಮಿ ನಾರಾಯಣ್ ಪ್ರತಿನಿತ್ಯ ಬಿಡಿಎ ಕಚೇರಿ ಅಲೆಯುವ ಪರಿಸ್ಥಿತಿ ಎದುರಾಗಿದೆ.
ಕುಟುಂಬದ ಆಸ್ತಿಯ ಮೂಲ ಮಾಲೀಕತ್ವದ ದಾಖಲೆಗಳನ್ನು ಪಡೆಯಲು ಅವರು ಹೋರಾಟ ನಡೆಸಿ ಹತಾಶರಾಗಿದ್ದಾರೆ, ಒಂದು ವೇಳೆ ನಿವೇಶನದ ಮೂಲ ದಾಖಲೆಗಳು ಸಿಕ್ಕರೆ ತಾವು ಬದುಕಿದ್ದಾಗಲೇ ಅದನ್ನು ತಮ್ಮ ಮೂವರು ಹೆಣ್ಣುಮಕ್ಕಳಿಗೆ ವರ್ಗಾಯಿಸಬಹುದು ಎಂಬುದು ಅವರ ಆಸೆಯಾಗಿದೆ. 2012 ರಲ್ಲಿ ಅವರ ಪರವಾಗಿ ಹೈಕೋರ್ಟ್ ತೀರ್ಪು ನೀಡಿ, ಅವರಿಗೆ ಸಹಾಯ ಮಾಡುವಂತೆ ಬಿಡಿಎಗೆ ನಿರ್ದೇಶನ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ನಾರಾಯಣ್ ಅವರ ಸಹೋದರಿಗೆ ಅರ್ಕಾವತಿ ಏಳನೇ ಬ್ಲಾಕ್‌ನ ಜಕ್ಕೂರು ಗ್ರಾಮದಲ್ಲಿ 2013 ರಲ್ಲಿ ಬಿಡಿಎ ನಿವೇಶನ ಮಂಜೂರು ಮಾಡಲಾಗಿತ್ತು. ನಿವೇಶನ ಹಂಚಿಕೆ ವೇಳೆ ತಮ್ಮ ಅಕ್ಕನ ಹಿರಿತನ (ಪ್ರಯತ್ನಗಳ ಸಂಖ್ಯೆ) ಕಡೆಗಣಿಸಲಾಗಿದೆ ಎಂದು ಅವರು ಒಂದು ವರ್ಷದ ಹಿಂದೆ ನ್ಯಾಯಾಲಯದ ಮೊರೆ ಹೋಗಿದ್ದರು.
ನಿಯಮಗಳ ಪ್ರಕಾರ ಮೂಲ ಆಸ್ತಿ ದಾಖಲೆಗಳು , ಸಂಪೂರ್ಣ ಮಾರಾಟದ ಪತ್ರ , ಗುತ್ತಿಗೆ-ಕಮ್-ಮಾರಾಟ ಒಪ್ಪಂದದ ದಿನಾಂಕದಿಂದ 10 ವರ್ಷಗಳ ಅವಧಿ ಮುಗಿದ ನಂತರ ಮಾತ್ರ ಹಂಚಿಕೆದಾರರಿಗೆ ಹಸ್ತಾಂತರಿಸಲಾಗುತ್ತದೆ. ನಾರಾಯಣ್ ಅವರ ಪ್ರಕರಣದಲ್ಲಿ ಈ ಅವಧಿಯು 2016 ರಲ್ಲಿ ಕೊನೆಗೊಂಡಿತು.
ಆದಾಗ್ಯೂ, ಅವರು ಇನ್ನೂ ದಾಖಲೆ ಪತ್ರ ಸಿಕ್ಕಿಲ್ಲ, ಅವರು, ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಅಲೆದಾಡುವುದನ್ನು ಮುಂದುವರೆಸಿದ್ದಾರೆ. ಬಿಡಿಎಯಿಂದ ನನ್ನ ಸಂಪೂರ್ಣ ಮಾರಾಟ ಪತ್ರವನ್ನು ನಾನು ಇನ್ನೂ ಪಡೆದಿಲ್ಲ. ನನ್ನ ಮೃತ ಸಹೋದರಿಯ ಹೆಸರಿಗೆ ಮಂಜೂರು ಮಾಡಲಾದ 60×40 ಚದರ ಅಡಿ ನಿವೇಶನವನ್ನು ನನ್ನ ಹೆಣ್ಣುಮಕ್ಕಳ ಹೆಸರಿಗೆ ವರ್ಗಾಯಿಸಲು ನಾನು ಬಯಸಿದ್ದೆ ಎಂದು ಹೇಳಿದ್ದಾರೆ.
ಕಡ್ಡಾಯ ಹತ್ತು ವರ್ಷಗಳ ಗುತ್ತಿಗೆ ಕಮ್ ಮಾರಾಟದ ಅವಧಿ ಮುಗಿದ ನಂತರವೇ ಸಂಪೂರ್ಣ ಮಾರಾಟ ಪತ್ರವನ್ನು ಹಸ್ತಾಂತರಿಸಬೇಕು ಎಂಬ ಬಿಡಿಎ ನಿಯಮವಿದೆ. ನನ್ನ ಹತ್ತು ವರ್ಷಗಳ ಅವಧಿಯು 2016 ರಲ್ಲಿಯೇ ಕೊನೆಗೊಂಡಿದೆ ಎಂದು ಅನೇಕ ಕಮಿಷನರ್‌ಗಳಿಗೆ ನಾನು ಲೆಕ್ಕವಿಲ್ಲದಷ್ಟು ಬಾರಿ ಹೇಳಿ ಮನದಟ್ಟು ಮಾಡಿದ್ದೇನೆ. ಆದರೆ ಈ ಬಗ್ಗೆ ಯಾರು ಗಮನ ಹರಿಸುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ನನ್ನ ವಯಸ್ಸಿನ ಪ್ರಕಾರ ದೈನಂದಿನ ಜೀವನ ನಡೆಸಿ ಜೀವಂತವಾಗಿರುವುದು ಒಂದು ಪವಾಡ. ನನ್ನ ಹೆಣ್ಣುಮಕ್ಕಳಿಗಾಗಿ ನಾನು ಇದನ್ನು ವರ್ಗಾವಣೆ ಮಾಡಲು ಬಯಸುತ್ತಿದ್ದೇನೆ, ಮುಂದಿನ ತಿಂಗಳು ಈ ಹೋರಾಟ ಅಂತ್ಯವಾದರೂ, ನಾರಾಯಣ್ ಅದರ ಬಗ್ಗೆ ಸಮಾಧಾನವಿಲ್ಲ. ಬಿಡಿಎ ಅಧಿಕಾರಿಗಳು ದಾಖಲೆ ಪತ್ರವನ್ನು ಜುಲೈ 17, 2023 ರಂದು ನೀಡಲು ಬಯಸಿದ್ದಾರೆ.
ಆದರೆ ಇದು ಆಷಾಢ ಮಾಸ ಹೀಗಾಗಿ ಶುಭಕರವಲ್ಲ ಆ ಸಮಯದಲ್ಲಿ ನಾನು ಯಾವುದೇ ನೋಂದಣಿ ಮಾಡಲು ಬಯಸುವುದಿಲ್ಲ. ಒಂದು ತಿಂಗಳ ಕಾಲಾವಕಾಶ ನೀಡುವಂತೆ ಬಿಡಿಎ ಅಧಿಕಾರಿಗಳಿಗೆ ಇತ್ತೀಚೆಗೆ ಮನವಿ ಮಾಡಿದ್ದೇನೆ. ಅವರು ಏನು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಶೀಘ್ರವೇ ತಿಳಿಯಲಿದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








