ನವದೆಹಲಿ:
ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ಅವರ ಪುಣೆಯ ಬಂಗಲೆ ಮತ್ತು ಈಕ್ವಿಟಿ ಷೇರುಗಳು ಸೇರಿದಂತೆ 98 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಗುರುವಾರ ತಿಳಿಸಿದೆ.
ಜಾರಿ ನಿರ್ದೇಶನಾಲಯವು ಶಿಲ್ಪಾ ಶೆಟ್ಟಿ ಅವರ ಹೆಸರಿನಲ್ಲಿರುವ ಜುಹು (ಮುಂಬೈ) ನಲ್ಲಿರುವ ವಸತಿ ಫ್ಲಾಟ್ ಹಾಗೂ ರಾಜ್ ಕುಂದ್ರಾ ಅವರ ಹೆಸರಿನಲ್ಲಿರುವ ಪುಣೆಯಲ್ಲಿರುವ ವಸತಿ ಬಂಗಲೆ ಮತ್ತು ಈಕ್ವಿಟಿ ಷೇರುಗಳನ್ನು ಜಪ್ತಿ ಮಾಡಲಾಗಿದೆ ಎಂದು ತನಿಖಾ ಸಂಸ್ಥೆಯು ಹೇಳಿಕೆಯಲ್ಲಿ ತಿಳಿಸಿದೆ.
ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಬಂಧನೆಗಳ ಅಡಿಯಲ್ಲಿ ಒಟ್ಟು 97.79 ಕೋಟಿ ರೂ. ಮೌಲ್ಯದ ಈ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಆದೇಶವನ್ನು ಹೊರಡಿಸಲಾಗಿದೆ ಎಂದು ಅದು ಹೇಳಿದೆ.
ವೇರಿಯಬಲ್ ಟೆಕ್ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿ, ದಿವಂಗತ ಅಮಿತ್ ಭಾರದ್ವಾಜ್, ಅಜಯ್ ಭಾರದ್ವಾಜ್, ವಿವೇಕ್ ಭಾರದ್ವಾಜ್, ಸಿಂಪಿ ಭಾರದ್ವಾಜ್, ಮಹೇಂದರ್ ಭಾರದ್ವಾಜ್ ಸೇರಿಂದೆತೆ ಹಲವಾರು ಏಜೆಂಟ್‌ಗಳ ವಿರುದ್ಧ ಮಹಾರಾಷ್ಟ್ರ ಮತ್ತು ದೆಹಲಿ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳಿಂದ ಈ ಹಣ ಅಕ್ರಮ ವರ್ಗಾವಣೆ ಪ್ರಕರಣವು ಉದ್ಭವಿಸಿದೆ. ಇವರು ಬಿಟ್‌ಕಾಯಿನ್‌ಗಳ ರೂಪದಲ್ಲಿ (2017 ರಲ್ಲಿ 6,600 ಕೋಟಿ ರೂ. ಮೌಲ್ಯದ) ಬೃಹತ್ ಮೊತ್ತದ ಹಣವನ್ನು ತಿಂಗಳಿಗೆ ಶೇ 10 ರಷ್ಟು ಆದಾಯ ನೀಡುವ ಸುಳ್ಳು ಭರವಸೆಗಳೊಂದಿಗೆ ಸಾರ್ವಜನಿಕರಿಂದ ಸಂಗ್ರಹಿಸಿ ವಂಚಿಸಿದ್ದರು.
ಪ್ರವರ್ತಕರು ಹೂಡಿಕೆದಾರರನ್ನು ವಂಚಿಸಿದ್ದಾರೆ ಮತ್ತು ಅಸ್ಪಷ್ಟ ಆನ್‌ಲೈನ್ ವ್ಯಾಲೆಟ್‌ಗಳಲ್ಲಿ ಬಿಟ್‌ಕಾಯಿನ್‌ಗಳನ್ನು ಮರೆಮಾಚುತ್ತಿದ್ದಾರೆ ಎಂದು ಇ.ಡಿ ಆರೋಪಿಸಿದೆ.
ಕುಂದ್ರಾ ಅವರು ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಮೈನಿಂಗ್ ಫಾರ್ಮ್ ಅನ್ನು ಸ್ಥಾಪಿಸಲು ಮಾಸ್ಟರ್‌ಮೈಂಡ್ ಮತ್ತು ಗೇನ್ ಬಿಟ್‌ಕಾಯಿನ್ ಪೊಂಜಿ “ಎಸ್” ಪ್ರವರ್ತಕರಾದ ಅಮಿತ್ ಭಾರದ್ವಾಜ್ ಅವರಿಂದ 285 ಬಿಟ್‌ಕಾಯಿನ್‌ಗಳನ್ನು ಸ್ವೀಕರಿಸಿದ್ದಾರೆ ಎಂದು ತನಿಖಾ ಸಂಸ್ಥೆ ಹೇಳಿದೆ.