ಚಳ್ಳಕೆರೆ
ನಗರದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಲವಾರು ಉದ್ಯಮಗಳು, ಹೋಟೆಲ್ ಮತ್ತು ಬೇಕರಿಗಳಿಗೆ ನಗರಸಭೆ ಆಡಳಿತ ತಮ್ಮ ವ್ಯವಹಾರವನ್ನು ನಡೆಸಿಕೊಳ್ಳಲು ಅನುಕೂಲವಾಗುವಂತೆ ವ್ಯಾಪಾರ ಪರವಾನಿಗೆಯನ್ನು ಕೆಲವೊಂದು ನಿಬಂಧನೆಗಳ ಮೇಲೆ ನೀಡಿದ್ದು, ನಿಬಂಧನೆಯನ್ನು ಉಲ್ಲಘಿಸುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಿದೆ ಎಂಬ ಎಚ್ಚರಿಕೆಯನ್ನು ಪೌರಾಯುಕ್ತ ಜೆ.ಟಿ.ಹನುಮಂತರಾಜು ನೀಡಿದ್ದಾರೆ.
ಅವರು, ಗುರುವಾರ ಬೆಳಗ್ಗೆ ಪಾವಗಡ ರಸ್ತೆಯ ವಾಸವಿ ಬೇಕರಿಗಳಿಗೆ ಭೇಟಿ ನೀಡಿದ ನಂತರ ಸುಧಾ ಹೋಟೆಲ್ಗೂ ಭೇಟಿ ನೀಡಿ, ಅಲ್ಲಿನ ಅವ್ಯವಸ್ಥೆಯನ್ನು ಕಂಡು ಹೋಟೆಲ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡರು. ವಿವಿಧ ಕಿರಾಣಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ಗಳನ್ನು ವಶಪಡಿಸಿಕೊಂಡರು. ನಗರಸಭೆ ನಿಮ್ಮ ಉದ್ಯಮಕ್ಕೆ ಅನುಮತಿ ನೀಡುವ ಸಂದರ್ಭದಲ್ಲಿ ಹೋಟೆಲ್ ವಾತಾವರಣವನ್ನು ಶುಚಿಯಾಗಿಡಬೇಕು .
ಗ್ರಾಹಕರಿಗೆ ಗುಣಮಟ್ಟದ ಆಹಾರ ಜೊತೆಗೆ ಉತ್ತಮ ಕುಡಿಯುವ ಪಿಲ್ಟರ್ ನೀರು ನೀಡಬೇಕೆಂಬ ನಿಯಮಾವಳಿ ಪ್ರಕಾರ ಲೈಸನ್ಸ್ ನೀಡಿದೆ. ಆದರೆ, ಇಲ್ಲಿ ಸ್ವಚ್ಚತೆ ಇಲ್ಲ, ಗ್ರಾಹಕರಿಗೆ ನೀಡುವ ಕುಡಿಯುವ ನೀರೂ ಸಹ ಗುಣಮಟ್ಟದಲ್ಲ ಎಂಬ ದೂರಿದೆ. ಸಾರ್ವಜನಿಕರ ಆರೋಪದ ಹಿನ್ನೆಲೆಯಲ್ಲಿ ಭೇಟಿ ನೀಡಿ ತನಿಖೆ ನಡೆಸಿದ್ದೇನೆ. ಇರುವ ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿಕೊಂಡು ಹೋಗಬೇಕು, ಇಲ್ಲವಾದರೆ ಅನಿವಾರ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಹೋಟೆಲ್ ಮಾಲೀಕರ ಪರವಾಗಿ ಮಾತನಾಡಿದ ವ್ಯವಸ್ಥಾಪಕ, ಅನಿವಾರ್ಯವಾಗಿ ಕೆಲವು ಕೆಲಸಗಾರರು ಆಗಮಿಸದ ಹಿನ್ನೆಲೆಯಲ್ಲಿ ಸಂಪೂರ್ಣ ಸ್ವಚ್ಚತೆ ಸಾಧ್ಯವಾಗಿಲ್ಲ. ಆದರೂ ಸಹ ನಗರಸಭೆ ನಿಯಮಾವಳಿಗಳ ಪ್ರಕಾರ ಸ್ವಚ್ಚತೆ ಮತ್ತು ಗ್ರಾಹಕರಿಗೆ ಉತ್ತಮ ಕುಡಿಯುವ ನೀರು ನೀಡುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ನೈರ್ಮಲ್ಯ ಅಧಿಕಾರಿ ನರೇಂದ್ರಬಾಬು, ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಮುಖಂಡ ಆರ್.ಪ್ರಸನ್ನಕುಮಾರ್ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
