ಅವಕಾಶ ಬಳಸಿಕೊಂಡು ಬದುಕು ಕಟ್ಟಿಕೊಳ್ಳಬೇಕು

ಚಿತ್ರದುರ್ಗ:

   ಸ್ಮರ್ಧಾತ್ಮಕ ಪ್ರಪಂಚದಲ್ಲಿರುವ ಹೇರಳವಾದ ಅವಕಾಶವನ್ನು ಬಳಿಸಿಕೊಂಡು ಉನ್ನತ ಮಟ್ಟದ ಅಧಿಕಾರಿಗಳಾಗುವ ಮೂಲಕ ನಿಮ್ಮ ಭವಿಷ್ಯವನ್ನು ನೀವುಗಳೇ ರೂಪಿಸಿಕೊಳ್ಳಬೇಕು ಎಂದು ವಿಜ್ಞಾನ ಕಾಲೇಜಿನ ಹಳೆ ವಿದ್ಯಾರ್ಥಿ ಹೈಕಮೀಷನರ್ ಆಫ್ ಇಂಡಿಯಾದ ಡಾ.ಕೆ.ಜೆ.ಶ್ರೀನಿವಾಸ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಇಂತಹ ಉನ್ನತ ಮಟ್ಟಕ್ಕೆ ಹೋಗಬೇಕಾದರೆ ತರಗತಿಗಳಿಗೆ ಒಂದು ದಿನವೂ ಮಿಸ್ ಮಾಡಿಕೊಳ್ಳದೆ ಶಿಕ್ಷಣದ ಕಡೆ ಹೆಚ್ಚಿನ ಒತ್ತು ನೀಡಿದ್ದು, ಜೊತೆಗೆ ತಂದೆ-ತಾಯಿಗಳ ಪ್ರೋತ್ಸಾಹವೇ ಕಾರಣ ಎಂದು ಸ್ಮರಿಸಿಕೊಂಡರು.

     ವಿದ್ಯಾರ್ಥಿ ದೆಸೆಯಲ್ಲಿ ನಿಮಗೆ ಪಾಠ ಹೇಳಿಕೊಡುವ ಶಿಕ್ಷಕರುಗಳನ್ನು ಗೌರವಿಸಿ. ಕೀಟಲೆ ಮಾಡಬೇಡಿ. ಆಧುನಿಕ ಯುಗದಲ್ಲಿ ಪಿ.ಯು.ಸಿ.ನಂತರ ಇಂಜಿನಿಯರಿಂಗ್ ಮೆಡಿಕಲ್ ಎರಡನ್ನೇ ಜೀವನದ ಗುರಿಯಾಗಿಟ್ಟುಕೊಳ್ಳುವ ಬದಲು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ದೊಡ್ಡ ದೊಡ್ಡ ಅಧಿಕಾರಿಗಳಾಬಹುದು. ವಿಜ್ಞಾನಿಗಳಾಗುವ ಅವಕಾಶವೂ ಸಾಕಷ್ಟಿದೆ. ಪೈಪೋಟಿ ಕಾಲವಾಗಿರುವುದರಿಂದ ಒಂದೊಂದು ಅಂಕಗಳಿಗೂ ಮೌಲ್ಯವಿದೆ. ನಿರ್ಲಕ್ಷಿಸಿದರೆ ಅವಕಾಶಗಳು ಕೈತಪ್ಪಿ ಹೋಗುತ್ತವೆ. ನಂತರ ಚಿಂತಿಸಿದರೆ ಪ್ರಯೋಜನವಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

     ಎಲ್ಲ ಭಾರವನ್ನು ದೇವರ ಮೇಲೆ ಹಾಕಿ ಮಲಗಬೇಡಿ. ಕಠಿಣ ಪರಿಶ್ರಮ ಹಾಗೂ ಏಕಾಗ್ರತೆಯಿಂದ ಕಲಿತರೆ ಫಲ ಸಿಕ್ಕೇ ಸಿಗುತ್ತದೆ. ನಾನು ಯಾವ ಕೋಚಿಂಗ್ ಕ್ಲಾಸ್‍ಗೂ ಹೋಗಿಲ್ಲ. ಲೈಬ್ರರಿಗಳಲ್ಲಿರುವ ಪುಸ್ತಕಗಳನ್ನು ಬಳಸಿಕೊಂಡಿದ್ದೇನೆ. ಸಿವಿಲ್ ಸರ್ವಿಸ್‍ನಲ್ಲಿ ತುಂಬಾ ಪೈಪೋಟಿಯಿದೆ. ಹದಿನೇಳು ವರ್ಷಗಳಲ್ಲಿ ಐದು ದೇಶಗಳನ್ನು ಸುತ್ತಾಡಿದ್ದೇನೆ. ಹೈಕಮೀಷನರ್ ಆಫ್ ಇಂಡಿಯಾ ಆಗಿ ನೇಮಕ ಗೊಂಡಿರುವುದು ನನಗೆ ಹೊಸ ಸವಾಲು. ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಯನ್ನು ಎತ್ತಿಹಿಡಿಯುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ದೇಶದ ಭವಿಷ್ಯ ನಿಮ್ಮ ಕೈಯಲ್ಲಿದೆ. ಭಾರತದ ಸಂಸ್ಕತಿ, ಇತಿಹಾಸವನ್ನು ಇಂದಿನ ಪೀಳಿಗೆಗೆ ತಿಳಿಸಿ ಎಂದು ಹೇಳಿದರು.

      ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾದ ಬಸವರಾಜ್, ನಿವೃತ್ತ ಪ್ರಾಚಾರ್ಯರಾದ ಹೊನ್ನೂರೆಡ್ಡಿ, ಡಾ.ಕೆ.ಜೆ.ಶ್ರೀನಿವಾಸ್‍ರವರ ಪೋಷಕರುಗಳಾದ ಡಾ.ಜಯದೇವಪ್ಪ, ಚಂದ್ರಮ್ಮ ವೇದಿಕೆಯಲ್ಲಿದ್ದರು.ಪ್ರಾಧ್ಯಾಪಕ. ಕೆ.ಕೆ.ಕಮಾನಿ, ನವೀನ್ ಚಾಲುಕ್ಯ ಇವರುಗಳು ಡಾ.ಕೆ.ಜೆ.ಶ್ರೀನಿವಾಸ್‍ರವರ ಕುರಿತು ಹಿಂದಿನ ನೆನಪುಗಳನ್ನು ಮೆಲಕು ಹಾಕಿದರು.

     ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್‍ರವರ ಪತ್ನಿ ಗಾಯತ್ರಿ ಸಿದ್ದೇಶ್, ಡಾ.ಕೆ.ಜೆ.ಶ್ರೀನಿವಾಸ್‍ರವರ ಪತ್ನಿ ಹಾಗೂ ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap