ಪಕ್ಷಾಂತರ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗದಿದ್ದರೆ ಅಪಾಯ

ಚಿತ್ರದುರ್ಗ:

     ಪಂಚೇಂದ್ರಿಯ ವಂಚಿತ ಪ್ರಜಾಪ್ರಭುತ್ವ ಕಾಲ ಇದಾಗಿರುವುದರಿಂದ ಪ್ರಜಾಪ್ರಭುತ್ವದ ರಕ್ಷಣೆಗೆ ಮಾಧ್ಯಮಗಳ ಜವಾಬ್ದಾರಿ ಅತಿ ಮುಖ್ಯವಾಗಿದೆ ಎಂದು ಸಾಹಿತಿ ಚಿಂತಕ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ ಮತ್ತು ಪ್ರತಿಭಾಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟಿ.ವಿ.ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳ ನಡುವೆ ಸ್ಪರ್ಧೆ ಆರೋಗ್ಯಕರವಾಗಿರಬೇಕು.

     ಬೇಗನೆ ಸುದ್ದಿ ಮುಟ್ಟಿಸಬೇಕೆಂಬ ಆತುರದಲ್ಲಿ ಟಿ.ವಿ.ಮಾಧ್ಯಮ ಕೆಲವೊಮ್ಮೆ ಅನೇಕ ಅವಘಡಗಳನ್ನುಂಟು ಮಾಡುತ್ತದೆ. ಆದರೆ ಮುದ್ರಣ ಮಾಧ್ಯಮಕ್ಕೆ ತಾಳ್ಮೆಯಿದೆ. ಹಾಗಾಗಿ ರೋಚಕತೆ ರಚನಾತ್ಮಕ ಮುಖಾಮುಖಿ ನಡೆಯುತ್ತಿದೆ. ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳುವುದರಿಂದ ಸಾಮಾಜಿಕ ಜವಾಬ್ದಾರಿ, ನೈತಿಕತೆ ಹುಟ್ಟುತ್ತದೆ ಎಂದು ತಿಳಿಸಿದರು.

    1615 ರಲ್ಲಿ ಪ್ರಪಂಚದಲ್ಲಿ ಮಾಧ್ಯಮಗಳು ಹುಟ್ಟಿಕೊಂಡವು. ಮಾಧ್ಯಮಗಳು ಹುಟ್ಟಿದ ಸಂದರ್ಭವೇ ರೋಮಾಂಚನವಾದುದು. ಪತ್ರಿಕೆಗಳು ಕೆಲವೊಂದು ಸಂದರ್ಭದಲ್ಲಿ ವಿಶೇಷ ಪಾತ್ರ ವಹಿಸುತ್ತವೆ. ದೇಶದ ಸ್ವಾತಂತ್ರ ಹಾಗೂ ಚಳುವಳಿಯಲ್ಲಿಯೂ ಪತ್ರಿಕೆಗಳ ಪಾತ್ರವಿದೆ. ಹೊಸ ಹೊಸ ಮಾಧ್ಯಮಗಳು ಹುಟ್ಟಿದಾಗ ಅನೇಕ ಘಟನೆಗಳು ನಡೆದಿವೆ. ಟಿ.ವಿ.ಯನ್ನು ವೀಕ್ಷಕರು ನೋಡುತ್ತಾರೆ. ಪತ್ರಿಕೆಯನ್ನು ಓದುತ್ತಾರೆ. ಟಿ.ವಿ.ನೋಡುಗರ ಮೇಲೆ ಪ್ರಭಾವ ಬೀರುತ್ತದೆ. ಪತ್ರಿಕೆಗಳು ಬಳಸುವ ಭಾಷೆಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

     ಪತ್ರಿಕೆಗೆ ತಾಳ್ಮೆಯ ಗುಣವಿದೆ. ಟಿ.ವಿ.ಬೇಗನೆ ಸುದ್ದಿ ಮುಟ್ಟಿಸಬೇಕೆಂಬ ಆತುರದಲ್ಲಿ ಸುಳ್ಳು ಸುದ್ದಿಗಳನ್ನು ಬಿತ್ತರಿಸಬಾರದು ಸತ್ಯದ ಸುದ್ದಿ ಕೊಡಬೇಕು. ಹೊಸ ಹೊಸ ಪದಗಳನ್ನು ಹುಟ್ಟು ಹಾಕುವ ಪತ್ರಿಕೆಗಳಿಗೆ ಪರಿಭಾಷೆಯಿರಬೇಕು. ಬೈಗಳು ಅಕ್ಷರ ಮಾಧ್ಯಮದ ಭಾಷೆಯಾಗಬಾರದು. ಮಾಧ್ಯಮಗಳು ಉದ್ಯಮಗಳಾಗಿರುವುದರಿಂದ ಪತ್ರಿಕೆಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿವೆ. ರಾಜ್ಯದಲ್ಲಿ ವರ್ಷಕ್ಕೆ ಏಳು ಸಾವಿರ ಪುಸ್ತಕಗಳು ಪ್ರಕಟವಾಗುತ್ತಿವೆ. ಮಾಧ್ಯಮದಲ್ಲಿ ಸಂವೇದನೆ, ಸಂಪಾದನೆ ಸಮತೋಲನವಾಗಿದ್ದಾಗ ಮಾತ್ರ ಓದುಗರಿಗೆ ಸಾಮಾಜಿಕ ನ್ಯಾಯ ನೀಡಲು ಸಾಧ್ಯ ಎಂದು ತಿಳಿಸಿದರು.

     ಹದಿನಾರು ಸಾವಿರ ಪತ್ರಿಕೆಗಳು ದೇಶದಲ್ಲಿದ್ದು, ಭಾರತದಲ್ಲಿ ಪ್ರತಿನಿತ್ಯವೂ ಹದಿನಾಲ್ಕು ಕೋಟಿ ಜನ ಪತ್ರಿಕೆಗಳನ್ನು ಓದುತ್ತಾರೆ. 1250 ಸಿನಿಮಾ ದೇಶದಲ್ಲಿ ವರ್ಷಕ್ಕೆ ತಯಾರಾಗುತ್ತಿದೆ. ಹದಿನೈದು ಸಾವಿರ ಸ್ಕ್ರೀನ್‍ಗಳಿವೆ. ಫೇಸ್‍ಬುಕ್ ಐವತ್ತು ಲಕ್ಷವಿದೆ. ತಂತ್ರಜ್ಞಾನ ಜ್ಞಾನವಾಗಿರುವ ಬದಲು ಉದ್ಯಮವಾಗಿದೆ. ಮಾಧ್ಯಮ ಲೋಕದಲ್ಲಿ ಜಾಹಿರಾತಿಕರಣ ಕಾಲಿಟ್ಟಿರುವ ಇಂದಿನ ದಿನಮಾನಗಳಲ್ಲಿಯೂ ಮುದ್ರಣ ಮಾಧ್ಯಮ ನೈತಿಕತೆಯನ್ನು ಉಳಿಸಿಕೊಂಡಿರುವುದೇ ಸಮಾಧಾನದ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

     ಪತ್ರಿಕೆಗಳನ್ನು ನಡೆಸುತ್ತಿರುವ ಮಾಲೀಕರುಗಳು ಕೆಲವರು ರಾಜಕಾರಣಿಗಳಾಗಿದ್ದಾರೆ. ಹಾಗಾಗಿ ಅಲ್ಲಿ ಕೆಲಸ ಮಾಡುವವರು ಸಂಕಟ ಅನುಭವಿಸುವಂತಾಗಿದೆ. ಪ್ರಜಾಪ್ರಭುತ್ವ ಜನರ ಪರವಾಗಿರಬೇಕು. ತಾಂತ್ರಿಕ ಪ್ರಜಾಪ್ರಭುತ್ವ-ತಾತ್ವಿಕ ಪ್ರಜಾಪ್ರಭುತ್ವವಿದೆ. ಸೈದ್ದಾಂತಿಕ ರಾಜಕಾರಣದಿಂದ ಪ್ರಜಾಪ್ರಭುತ್ವ ಉಳಿಯುತ್ತದೆ. ಸಮಯ ಸಾಧಕತನ ರಾಜಕಾರಣದಿಂದ ಪ್ರಜಾಪ್ರಭುತ್ವ ನಾಶವಾಗಲಿದೆ. ಸಿನಿಕತನ ಪ್ರಜಾಪ್ರಭುತ್ವ ಜನಮುಖಿಗೆ ಒಳ್ಳೆಯದಲ್ಲ. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ಗಾಂಧಿಗಿಂತ ದೇಶಭಕ್ತ ಬೇಕೆ ಎಂದು ಕೋಮುವಾದಿಗಳನ್ನು ಪ್ರಶ್ನಿಸಿದ ಬರಗೂರು ರಾಮಚಂದ್ರಪ್ಪ ಧಾರ್ಮಿಕ ಮೂಲಭೂತ ವಾದಿಗಳು ಎಲ್ಲಾ ಧರ್ಮಗಳಲ್ಲಿಯೂ ವಿಜೃಂಭಿಸುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಹೇಳಿದರು.

    ಪಕ್ಷಾಂತರ ನಿಷೇಧ ಕಾಯಿದೆ ಕಟ್ಟುನಿಟ್ಟಾಗಿ ಜಾರಿಯಾಗಲಿ: ರಾಜ್ಯ ಮೈತ್ರಿ ಸರ್ಕಾರವನ್ನು ಕೆಡವಿ ಬಿಜೆಪಿ.ಅಧಿಕಾರಕ್ಕೆ ಬರಲು ಹಪಹಪಿಸುತ್ತಿದೆ. ವಿಧಾನಸಭೆಯಲ್ಲಿ ಕೆಲವರಾದರೂ ನ್ಯಾಯಾಲಯದ ತೀರ್ಪು ಸಂವಿಧಾನದ ಆಶಯಗಳನ್ನು ತಿಳಿದುಕೊಂಡು ಗಂಭೀರವಾಗಿ ಚರ್ಚಿಸುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ. ಅಧಿಕಾರಕ್ಕಾಗಿ ತಂತ್ರ-ಪ್ರತಿತಂತ್ರಗಳು ನಡೆಯುವುದರಲ್ಲಿ ತಪ್ಪೇನಿಲ್ಲ. ಚುನಾವಣೆ ದಿನಾಂಕ ಪ್ರಕಟವಾದಂದಿನಿಂದಲೆ ಪಕ್ಷಾಂತರ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ. ಚರ್ಚೆಗಳನ್ನು ಮುನ್ನೆಲೆಗೆ ತರುವ ಕೆಲಸವನ್ನು ಮಾಧ್ಯಮಗಳು ಪ್ರಾಮಾಣಿಕವಾಗಿ ಮಾಡಬೇಕು.

     ಮತದಾರರು ಐದು ವರ್ಷದ ಅವಧಿಗೆಂದು ಆಯ್ಕೆ ಮಾಡಿ ಶಾಸನಸಭೆಗೆ ಕಳಿಸಿರುತ್ತಾರೆ. ಮನಬಂದಂತೆ ಪಕ್ಷಾಂತಾರ ಮಾಡುವುದು. ಇಷ್ಟ ಬಂದಾಗಲೆಲ್ಲಾ ಸರ್ಕಾರವನ್ನು ಉರುಳಿಸಿ ಚುನಾವಣೆಗೆ ಹೋಗುವುದು ಮತದಾರರಿಗೆ ಮಾಡುವ ಬಹುದೊಡ್ಡ ದ್ರೋಹ. ಅದಕ್ಕಾಗಿ ಚುನಾವಣೆ ವೇಳಾಪಟ್ಟಿ ಪ್ರಕಟಗೊಂಡ ದಿನದಿಂದಲೆ ಪಕ್ಷಾಂತರವನ್ನು ನಿಷೇಧಿಸಬೇಕು. ಜಾಗತೀಕರಣದಿಂದ ಚುನಾವಣೆ ಮಾರುಕಟ್ಟೆಯಂತಾಗಿದೆ.

       ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳಿಗೆ ವ್ಯಕ್ತಿತ್ವವಿಲ್ಲದಂತಾಗಿದೆ. ಸತ್ಯ, ಅಸತ್ಯ, ವಿವೇಕ, ಅವಿವೇಕ, ಮಾನವೀಯತೆ, ಮತೀಯತೆ ನಡುವಿನ ಗೆರೆ ಕಡಿಮೆಯಾಗುತ್ತಿದೆ. ಓಟಿಗಾಗಿ ದೇವರುಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಧರ್ಮ ಗುರುಗಳು ಕಾಣುತ್ತಿಲ್ಲ. ಜಾತಿ ಗುರುಗಳು ಕಾಣುತ್ತಿದ್ದಾರೆ. ಭಿನ್ನಾಭಿಪ್ರಾಯವೇ ಬೇರೆ, ಪರಸ್ಪರ ದ್ವೇಷವೇ ಬೇರೆ. ಟೀಕೆಗಳನ್ನು ಆಹ್ವಾನಿಸುವ, ಚರ್ಚಿಸುವ, ವಿಮರ್ಶಿಸುವ ವಾತಾವರಣವಿಲ್ಲದಿದ್ದರೆ ಸಂವಿಧಾನ ಬಿಕ್ಕಟ್ಟಿಗೆ ಸಿಲುಕುತ್ತದೆ.

    ಸುದ್ದಿಮಾಧ್ಯಮ, ಸಾಂಸ್ಕತಿಕ, ಧಾರ್ಮಿಕ ಕ್ಷೇತ್ರದ ವಿಶ್ವಾಸಾರ್ಹತೆ ಉಳಿಯಬೇಕು. ಅದಕ್ಕಾಗಿ ಚರ್ಚೆ, ಚಿಂತನೆಗಳು ನಡೆಯಬೇಕು. ದ್ವೇಷ ಅಳಿಸಬೇಕು ಎಂದರು.ಮುರುಘಾಮಠದ ಡಾ.ಶಿವಮೂರ್ತಿ ಶರಣರು ಆಶೀರ್ವಚನ ನೀಡಿ ಹೊರನೋಟಕ್ಕಿಂತ ಒಳನೋಟ ಬೇಕು. ವ್ಯಕ್ತಿ ಎಂದ ಮೇಲೆ ಅಭಿವ್ಯಕ್ತಿ ಇರಲೇಬೇಕು. ವ್ಯಕ್ತಿಗಳಾಗುವುದು ಸುಲಭ. ಅಭಿವ್ಯಕ್ತಿಗಳಾಗುವ ಹಾದಿ ಕಷ್ಟ. ಅನೇಕ ಸವಾಲುಗಳಿಂದ ಕೂಡಿದೆ. ಬೆದರಿಸುವ ಅಭಿವ್ಯಕ್ತಿ ಇರಬಾರದು. ಮಾಧ್ಯಮ ರಂಗ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಬೆದರಿಸುವವರಿದ್ದಾರೆ. ಇದು ಅನಾರೋಗ್ಯಕರ ಎಂದು ವಿಷಾಧಿಸಿದರು.

      ವ್ಯಂಗ್ಯ ಅಭಿವ್ಯಕ್ತಿಯೂ ಇದೆ. ರೋಚಕತನಕ್ಕೆ ಮಿತಿಯಿರಬೇಕು. ಮುಕ್ತ ಅಭಿವ್ಯಕ್ತಿಯಲ್ಲಿ ಸತ್ಯದ ದರ್ಶನವಿರುತ್ತದೆ. ಅವಲೋಕನ ಮಾಡಿಕೊಳ್ಳಬೇಕು. ಬರೆಯುವವರಿಗೆ ಬದುಕು, ಭಾವನೆ, ಉದ್ದೇಶ, ಅವಕಾಶಗಳಿವೆ. ಕೆಲವೊಮ್ಮೆ ಬರೆಯುವವರು ತಲ್ಲಣ, ಗೊಂದಲಗಳಿಗೆ ಒಳಗಾಗುತ್ತಾರೆ. ಆರೋಗ್ಯಪೂರ್ಣ ಸಮಾಜಕ್ಕೆ ಪತ್ರಕರ್ತರ ಪಾತ್ರ ಮುಖ್ಯ. ಉತ್ತಮ ಅಭಿವ್ಯಕ್ತಿಯನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ಅಧ್ಯಯನಶೀಲರಾಗಬೇಕು. ಅನುಭವಗಳು ವ್ಯಕ್ತಿಯನ್ನು ದೊಡ್ಡವನಾಗಿ ಮಾಡುತ್ತವೆ ಎಂದು ತಿಳಿಸಿದರು.

       ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಲಕ್ಷ್ಮಣ್ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ನರೇನಹಳ್ಳಿ ಅರುಣ್‍ಕುಮಾರ್, ಹಿರಿಯ ಪತ್ರಕರ್ತರಾದ ಟಿ.ಕೆ.ಬಸವರಾಜ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ದಿನೇಶ್‍ಗೌಡಗೆರೆ, ಖಜಾಂಚಿ ಮೇಘಗಂಗಾಧರ ನಾಯ್ಕ ವೇದಿಕೆಯಲ್ಲಿದ್ದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap