ಹುಳಿಯಾರು : ಕೆರೆಯ ಜಲ ಮೂಲ ಮುಚ್ಚಿದ ಗುತ್ತಿಗೆದಾರ

ಹುಳಿಯಾರು

ವಿಶೇಷ ವರದಿ: ಎಚ್.ಬಿ.ಕಿರಣ್ ಕುಮಾರ್ 

      ಹುಳಿಯಾರು ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 243 ರ ಅಭಿವೃದ್ಧಿ ಕಾಮಗಾರಿಯು ಕಳೆದ 1 ವರ್ಷದಿಂದ ನಡೆಯುತ್ತಿದೆ. ಕಾಮಗಾರಿ ಆರಂಭವಾದ ದಿನದಿಂದ ಇಲ್ಲಿಯವರೆವಿಗೂ ಗುತ್ತಿಗೆದಾರರ ಮೇಲೆ ಒಂದಿಲ್ಲೊಂದು ದೂರು ಕೇಳಿಬರುತ್ತಲೆ ಇದೆ. ಮೂಲ ಪ್ಲಾನ್ ತಿರುಚಿ ಕಾಮಗಾರಿ ಮಾಡುತ್ತಿರುವ ಬಗ್ಗೆ, ಚರಂಡಿ ಸ್ಲ್ಯಾಬ್ ಕಳಪೆಯಾಗಿರುವ ಬಗ್ಗೆ, ಮಂದಗತಿ ಕಾಮಗಾರಿಯ ಬಗ್ಗೆ, ರಸ್ತೆಗೆ ನೀರು ಹಾಕದೆ ಧೂಳು ಮಾಡಿರುವ ಬಗ್ಗೆ ಹೀಗೆ ಅನೇಕ ದೂರುಗಳು ಕೇಳಿ ಬಂದಿವೆ.

    ಈಗ ಹೊಸದಾಗಿ ಕೆರೆಯ ಕಾಲುವೆಯನ್ನೇ ಮುಚ್ಚಿರುವ ದೂರು ಕೇಳಿಬಂದಿದೆ.ಹೌದು, ಕಾಮಗಾರಿ ಮಾಡುವಾಗ ಹಳೆಯ ಡಾಂಬರ್ ರಸ್ತೆ ಕಿತ್ತು ಅದನ್ನು ಹುಳಿಯಾರು ಕೆರೆಯ ಒಣ ಕಾಲುವೆಗೆ ಸುರಿದು ಜಲ ಮೂಲ ಮುಚ್ಚಿದ್ದಾರೆ. ಲೋಡ್‍ಗಟ್ಟಲೆ ರಸ್ತೆ ತ್ಯಾಜ್ಯವನ್ನು ಸೇತುವೆಯ ಪಕ್ಕದಲ್ಲೇ ಸುರಿದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಅದೃಷ್ಠವಶತ್ ಒಳ್ಳೆಯ ಮಳೆಯಾದರೂ ಸಹ ಹುಳಿಯಾರು ಕೆರೆಗೆ ನೀರೆ ಬಾರದಂತೆ ಮಾಡಿದ್ದಾರೆ.

   ಅಲ್ಲದೆ ಇದು ಹಳೆ ರಸ್ತೆ ಕಿತ್ತಿರುವ ಡಾಂಬರ್ ತಾಜ್ಯವಾಗಿದ್ದು ಇದು ನಾಲೆಯಲ್ಲಿ ಉಳಿದರೆ ನೀರು ಸಹ ಕಲುಷಿತಗೊಂಡು ಪ್ರಾಣಿ, ಪಕ್ಷಿಗಳ ಜೀವಕ್ಕೆ ಕಂಟಕವಾಗುವ ಆತಂಕ ಕಾಡುತ್ತಿದೆ.

ಕೆರೆಯಿಂದ ಕೆರೆಗೆ ನೀರು ಹರಿಸುವ ಕಾಲುವೆ

     ಯಾವುದೇ ಜಲಮೂಲ ಇಲ್ಲದ ಹುಳಿಯಾರು ಕೆರೆಗೆ ನೀರು ಹರಿಸುವ ಸಲುವಾಗಿ ಸ್ಥಳೀಯರ ಬೇಡಿಕೆಯ ಮೇರೆಗೆ ಮೂರು ದಶಕಗಳ ಹಿಂದೆ ತಿಮ್ಲಾಪುರ ಕೆರೆಯಿಂದ ಹುಳಿಯಾರು ಕೆರೆಗೆ ನೀರು ಹರಿಸಲು ಕಾಲುವೆ ನಿರ್ಮಾಣ ಮಾಡಲಾಗಿತ್ತು. ಕಾಲುವೆ ನಿರ್ಮಿಸಿದ ಅನೇಕ ವರ್ಷಗಳು ತಿಮ್ಲಾಪುರ ಕೆರೆ ತುಂಬದ ಕಾರಣ ಹುಳಿಯಾರು ಕೆರೆಗೆ ನೀರು ಬರಲೇ ಇಲ್ಲ. ಹಾಗಾಗಿ ಇದು ಒಣ ಕಾಲುವೆ ಎಂದು ಕುಖ್ಯಾತಿಯಾಯಿತು. ನಂತರದ ದಿನಗಳಲ್ಲಿ ತಿಮ್ಲಾಪುರ ಕೆರೆ ತುಂಬಿದ್ದಾಗಲೆಲ್ಲಾ ನೀರು ಹರಿದು ಹುಳಿಯಾರು ಕೆರೆಯಲ್ಲಿ ನೀರು ನಿಲ್ಲುವ ಮೂಲಕ ಕಾಲುವೆ ನಿರ್ಮಾಣ ಸಾರ್ಥಕ ಎನ್ನಿಸಿತು.

 ಹೇಮೆ ನೀರು ಹರಿಯುವ ಕಾಲುವೆ

      ಈಗ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಮಂಜೂರಾಗಿರುವ ಹೇಮಾವತಿ ನದಿ ನೀರು ಹರಿಸುವ ಯೋಜನೆಯಲ್ಲಿ ತಿಮ್ಲಾಪುರ ಕೆರೆಯೂ ಸಹ ಸೇರಿದೆ. ಅಲ್ಲದೆ ಪಾವಗಡ ತಾಲ್ಲೂಕಿಗೆ ಹೋಗುವ ಭದ್ರಾ ನೀರೂ ಸಹ ತಿಮ್ಲಾಪುರ ಕೆರೆಯ ಮೂಲಕ ಬೋರನಕಣಿವೆ ಜಲಾಶಯಕ್ಕೆ ಹೋಗುತ್ತದೆ. ಹಾಗಾಗಿ ಹೇಮೆ ಮತ್ತು ಭದ್ರಾ ಯೋಜನೆಯಿಂದ ತಿಮ್ಲಾಪುರ ಕೆರೆ ತುಂಬುವುದು ಖಚಿತ ಎನ್ನಲಾಗಿದೆ. ತಿಮ್ಲಾಪುರ ಕೆರೆ ತುಂಬಿದರೆ ಈ ಒಣಕಾಲುವೆ ಮೂಲಕ ಹುಳಿಯಾರು ಕೆರೆಗೆ ನೀರು ಹರಿಯುವ ಆಶಾಭಾವನೆ ಸ್ಥಳೀಯರಲ್ಲಿದೆ.

 ಕಾಲುವೆ ಮುಚ್ಚಿರುವುದಕ್ಕೆ ಆಕ್ರೋಶ

      ಹೇಮಾವತಿ ಕಾಮಗಾರಿಯು ಸಾಸಲು ಗ್ರಾಮದ ಬಳಿ ಶರವೇಗದಲ್ಲಿ ನಡೆಯುತ್ತಿದ್ದು ಈ ಕಾಮಗಾರಿ ಮುಗಿದ ತಕ್ಷಣ ಹುಳಿಯಾರು ಒಣ ಕಾಲುವೆ ಒತ್ತುವರಿ ತೆರವು ಮಾಡಿ ಕಾಲುವೆ ಕ್ಲೀನ್ ಮಾಡಿಸುವ ಚಿಂತನೆ ಸ್ಥಳೀಯರಲ್ಲಿದೆ. ಅಷ್ಟರಲ್ಲಾಗಲೆ ಹೈವೆ ಗುತ್ತಿಗೆದಾರರು ಕಾಲುವೆ ಮುಚ್ಚಿದ್ದಾರೆ. ಈ ಹಿಂದೆ ಹೈವೆ ಕಾಮಗಾರಿ ಆರಂಭದಲ್ಲಿ ಈ ಒಣಕಾಲುವೆಗೆ ಇದೇ ಗುತ್ತಿಗೆದರರು ಸೇತುವೆ ಸಹ ನಿರ್ಮಾಣ ಮಾಡಿದ್ದಾರೆ. ಆದರೂ ಸೇತುವೆಯ ಪಕ್ಕ ಕಾಲುವೆಗೆ ಲೋಡ್‍ಗಟ್ಟಲೆ ರಸ್ತೆ ತ್ಯಾಜ್ಯ ತಂದು ಸುರಿದಿದ್ದಾರೆ. ಇದು ಸಹಜವಾಗಿ ಸ್ಥಳೀಯರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link