ತುಮಕೂರು
ತುಮಕೂರು ಡಿಸಿಸಿ ಬ್ಯಾಂಕಿನಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ತನಿಖಾಧಿಕಾರಿಗಳು ನೀಡಿರುವ ವರದಿ ಹಾಗೂ ದಾಖಲೆಗಳ ಆಧಾರದ ಮೇಲೆ ಬ್ಯಾಂಕನ್ನು ಸೂಪರ್‍ಸೀಡ್ ಮಾಡಿ ಸರ್ಕಾರ ಜಿಲ್ಲಾಧಿಕಾರಿಗಳನ್ನು ಬ್ಯಾಂಕಿನ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ.
ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳು ಯಾರ ಮುಲಾಜಿಗೂ ಒಳಗಾಗದೆ ಡಿಸಿಸಿ ಬ್ಯಾಂಕಿನಲ್ಲಿ ನಡೆದಿರಬಹುದಾದ ಇನ್ನು ಹೆಚ್ಚಿನ ಅವ್ಯವಹಾರಗಳನ್ನು ಪತ್ತೆ ಮಾಡಿ ಕಾನೂನುಕ್ರಮ ಜರುಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ರೆಡ್ಡಿ ಚಿನ್ನಯಲ್ಲಪ್ಪ ಮನವಿ ಮಾಡಿದರು.
ವಿವಿಧ ಮುಖಂಡರೊಂದಿಗೆ ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠೊಯಲ್ಲಿ ಮಾತನಾಡಿದ ಅವರು, ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದ ಮಾಜಿ ಶಾಸಕ ಕೆ ಎನ್ ರಾಜಣ್ಣನವರು, ಬ್ಯಾಂಕ್ ಸೋಪರ್‍ಸೀಡ್ ಆಗಲು ಉಪಮುಖ್ಯಮತ್ರಿ ಡಾ. ಪರಮೇಶ್ವರ್ ಕಾರಣ, ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಸೋಲಿಗೆ ದ್ಷೇಷದ ರಾಜಕಾರಣ ಮಾಡಲಾಗಿದೆ ಎಂದು ಆಪಾದಿಸಿರುವುದು ಸರಿಯಲ್ಲ ಎಂದರು.
ಯಾವುದೇ ಅವ್ಯವಹಾರ ಆಗಿಲ್ಲದಿದ್ದರೆ ರಾಜಣ್ಣನವರು ತನಿಖೆ ಎದುರಿಸಲಿ, ತಪ್ಪಿಲ್ಲದಿದ್ದರೆ ಯಾರಿಗೂ ಹೆದರುವ ಅಗತ್ಯವಿಲ್ಲ, ಅದುಬಿಟ್ಟು ನಾಯಕರನ್ನು ಟೀಕಿಸುವುದು ಸರಿಯಲ್ಲ. ಅಧಿಕಾರಿಗಳು ತನಿಖೆ ಮಾಡಿ ನೀಡಿದ ವರದಿ ಆಧಾರದ ಮೇಲೆ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ ಹೊರತು, ಡಾ. ಪರಮೇಶ್ವರ್ ಆಗಲಿ, ಮುಖ್ಯಮಂತ್ರಿ ಕುಮಾರಸ್ವಾಮಿಯಾಗಲಿ ಅಲ್ಲ ಎಂದರು.
ಈ ಸಂಬಂಧ ತಾವು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಡಿಸಿಸಿ ಬ್ಯಾಂಕಿನಲ್ಲಿ ಆಗಿರಬಹುದಾದ ಅವ್ಯವಹಾರ, ಲೋಪದ ಬಗ್ಗೆ ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಕೋರಲಾಗುವುದು ಎಂದು ಹೇಳಿದರು.ಜಿಲ್ಲಾ ಪಂಚಾಯ್ತಿ ಸದಸ್ಯ, ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಕೆಂಚಮಾರಯ್ಯ ಮಾತನಾಡಿ, ಡಿಸಿಸಿ ಬ್ಯಾಂಕಿನ ಅವ್ಯವಹಾರದ ಬಗ್ಗೆ ಮೂವರು ಹಿರಿಯ ಅಧಿಕಾರಿಗಳು ತನಿಖೆ ನಡೆಸಿ ಆಗಿರುವ ಅವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದಾರೆ.
ಅವ್ಯವಹಾರ ಆಗಿಲ್ಲ ಎಂದು ಹೇಳುವವರು ನ್ಯಾಯಾಲಯದಲ್ಲಿ ಸಮರ್ಥನೆ ಮಾಡಬಹುದು, ಅದುಬಿಟ್ಟು, ಡಿಸಿಎಂ ಡಾ. ಪರಮೇಶ್ವರ್ ಅವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪ ಮಾಡುವುದು ಸರಿಯಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಳಾಗಲು ಯಾರು ಕಾರಣ ಎಂಬುದನ್ನು ಇಡೀ ಜಿಲ್ಲೆಯ ಕಾರ್ಯಕರ್ತರು ಹೇಳುತ್ತಾರೆ, 2013ರ ಚುನಾವಣೆಯಲ್ಲಿ ಡಾ. ಪರಮೇಶ್ವರ್‍ರನ್ನು ಸೋಲಿಸಲು ಯಾರೆಲ್ಲಾ ಕುತಂತ್ರ ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕೆ. ಎನ್. ರಾಜಣ್ಣನವರ ವಿರುದ್ಧ ಮಾತನಾಡಿದರು.
ರೈತರಿಗಾಗಿ ಸಾಲ ಸೌಲಭ್ಯ ನೀಡಬೇಕಾದ ಡಿಸಿಸಿ ಬ್ಯಾಂಕಿನ ಹಣವನ್ನು ಶಿಕ್ಷಣ ಸಂಸ್ಥೆಗಳಿಗೆ, ಸಕ್ಕರೆ ಕಾರ್ಖಾನೆಗೆ, ಗುತ್ತಿಗೆದಾರಿಕೆಗೆ ಬಂಡವಾಳವಾಗಿ ಸಾಲ ನೀಡಿ ಡಿಸಿಸಿ ಬ್ಯಾಂಕಿನ ನಿಯಮ ಉಲ್ಲಂಘಿಸಲಾಗಿದೆ. ಇಂತಹ ಹತ್ತು ಲೋಪಗಳನ್ನು ಪತ್ತೆ ಮಾಡಿ ತನಿಖಾಧಿಕಾರಿಗಳು ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ಕೆಂಚಮಾರಯ್ಯ ಹೇಳಿದರು.
ತುಮುಲ್ ನಿರ್ದೇಶಕ, ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ಮಾತನಾಡಿ, ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗಿದ್ದ ಕೆ ಎನ್ ರಾಜಣ್ಣನವರು ಎಲ್ಲವನ್ನೂ ತಾವೇ ತೀರ್ಮಾನ ತೆಗೆದುಕೊಳ್ಳುತ್ತಿದ್ದರು, ನಿರ್ದೇಶಕರ ಅಭಿಪಾಯಕ್ಕೆ ಅಲ್ಲಿ ಬೆಲೆ ಇರಲಿಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಕೆ. ಎನ್ ರಾಜಣ್ಣನವರು ಪಕ್ಷದ ನಾಯಕರನ್ನೇ ಸಾರ್ವನಿಕವಾಗಿ ಟೀಕಿಸುತ್ತಾ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಡಿಸಿಎಂ ಡಾ. ಪರಮೇಶ್ವರ್ ಒಬ್ಬ ದಲಿತ ವರ್ಗದ ನಾಯಕರಾಗಿರುವ ಕಾರಣ ಜೀರೋ ಟ್ರಾಫಿಕ್ ಮಂತ್ರಿ ಎಂದು ಟೀಕಿಸುತ್ತಾ ಬಂದಿದ್ದಾರೆ. ಡಾ. ಪರಮೇಶ್ವರ್ ವಿರುದ್ಧ ಕೆ ಎನ್ ಆರ್ ಪುತ್ರ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ರಾಜೇಂದ್ರ ನಗರದಲ್ಲಿ ಪೋಸ್ಟರ್ ಅಂಟಿಸಿ, ತಮ್ಮದೇ ಪಕ್ಷಕ್ಕೆ ಅವಮಾನ ಮಾಡಿದ್ದಾರೆ ಎಂದು ಟೀಕಿಸಿದರು.ಜಿಲ್ಲಾ ಪಂಚಾಯ್ತಿ ಸದಸ್ಯ ನಾರಾಯಣ ಮೂರ್ತಿ, ಮುಖಂಡರಾದ ಜಿ ಎಸ್ ಸೋಮಣ್ಣ, ನರಸೀಯಪ್ಪ, ರೇವಣಸಿದ್ದಯ್ಯ, ಚಂದ್ರಶೇಖರ ಗೌಡ, ವಾಲೆ ಚಂದ್ರಯ್ಯ, ದಿನೇಶ್, ಟಿ ಎಸ್ ತರುಣೇಶ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
