ಚಿತ್ರದುರ್ಗ:
ಕಾರ್ಮಿಕರಿಗೆ ಅನ್ಯಾಯ ಮಾಡುವ ಯಾವ ಪಕ್ಷವೇ ಆಗಲಿ ಅದರ ವಿರುದ್ದ ಹೋರಾಡುವುದೇ ನಮ್ಮ ಮುಖ್ಯ ಗುರಿ. ನಾವುಗಳು ಯಾವ ಪಕ್ಷದ ಪರ-ವಿರುದ್ದವಾಗಿ ಕೆಲಸ ಮಾಡುವುದಿಲ್ಲ ಎಂದು ಸಿ.ಐ.ಟಿ.ಯು.ಜಿಲ್ಲಾ ಖಜಾಂಚಿ ಸಿ.ಕೆ.ಗೌಸ್‍ಪೀರ್ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಎಚ್ಚರಿಸಿದರು.
ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸಿ.ಐ.ಟಿ.ಯು.ಚಿತ್ರದುರ್ಗ ತಾಲೂಕು ಪ್ರಥಮ ಸಮಾವೇಶದಲ್ಲಿ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು.ಇಲ್ಲಿಯವರೆಗೂ ನಡೆದಿರುವ ಎಲ್ಲಾ ಹೋರಾಟ, ಬಂದ್, ಪ್ರತಿಭಟನೆ, ಧರಣಿಯಲ್ಲಿ ಸಿ.ಐ.ಟಿ.ಯು.ಪಾತ್ರವಿದೆ. ಸಹಿ ಸಂಗ್ರಹದಲ್ಲಿಯೂ ಭಾಗಿಯಾಗಿದ್ದೇವೆ. ಬಹುತೇಕ ಹೋರಾಟಗಳಲ್ಲಿ ಕಟ್ಟಡ ಕಾರ್ಮಿಕರುಗಳೆ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ.
ದ್ವಿಚಕ್ರ ವಾಹನ ಮೆಕ್ಯಾನಿಕ್‍ಗಳ ಸಂಘದವರು ಹೋರಾಟ ನಮಗೆ ಸಂಬಂಧವಿಲ್ಲವೇನೋ ಎಂದು ತಾತ್ಸಾರ ಮಾಡುವುದು ಸರಿಯಲ್ಲ. ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆದುಕೊಳ್ಳಬೇಕಾದರೆ ಹೋರಾಟಕ್ಕೆ ಬೆಂಬಲಿಸಿ. ಯಾವುದೇ ಕಾರಣಕ್ಕೂ ಪ್ರತಿಷ್ಟೆಯನ್ನು ತೋರಿಸಬೇಡಿ. ಸಿ.ಐ.ಟಿ.ಯು. ಎಂದರೆ ಒಗ್ಗಟ್ಟಿನ ಸಂಕೇತ. ಮುಷ್ಟಿಯಲ್ಲಿ ಬಲವಿದೆ ಎನ್ನುವುದನ್ನು ಮರೆಯಬೇಡಿ ಎಂದು ಕಾರ್ಮಿಕರಿಗೆ ನೆನಪಿಸಿದರು.
ಜಿಲ್ಲೆಯ ಬೇರೆ ಬೇರೆ ತಾಲೂಕುಗಳಲ್ಲಿ ಸಮ್ಮೇಳನ ನಡೆದಿದೆ. ಮುಂದಿನ ತಿಂಗಳು ನಾಲ್ಕನೇ ತಾರೀಖು ಚಳ್ಳಕೆರೆಯಲ್ಲಿ ಜಿಲ್ಲಾ ಸಮಾವೇಶ ನಡೆಸಲಾಗುವುದು. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸರ್ಕಾರಕ್ಕೆ ಶಕ್ತಿ ಪ್ರದರ್ಶಿಸಬೇಕಾಗಿದೆ. ಎಲ್ಲಾ ಕಾರ್ಮಿಕರಿಗೂ ಗುರುತಿನ ಕಾರ್ಡ್‍ಗಳನ್ನು ಸಿ.ಐ.ಟಿ.ಯು.ವತಿಯಿಂದ ಕೊಡಿಸಲಾಗುವುದು. ನಿಮ್ಮ ನಿಮ್ಮ ವಿಳಾಸ ಹಾಗೂ ಮೊಬೈಲ್ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಿ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಲ್ಲಿಯವರೆಗೂ ಕಾರ್ಮಿಕರಿಗೆ ಅನ್ಯಾಯ ಮಾಡಿಕೊಂಡು ಬರುತ್ತಿವೆ. ಬಂಡವಾಳಶಾಹಿ, ಉದ್ಯಮಿ, ಕಾರ್ಪೋರೇಟರ್‍ಗಳಿಗೆ ರತ್ನಗಂಬಳಿ ಹಾಸುತ್ತಿವೆ. ಮುಂದಿನ ದಿನಗಳಲ್ಲಿ ಹೊಸ ಹೊಸ ಕಂಪನಿಗಳು ದೇಶಕ್ಕೆ ಲಗ್ಗೆಯಿಟ್ಟು, ಫ್ಯಾಕ್ಟರಿಗಳನ್ನು ಮುಚ್ಚಿದರೂ ಆಶ್ಚರ್ಯವಿಲ್ಲ. ಇದರ ವಿರುದ್ದ ಸದಾ ಹೋರಾಟಕ್ಕೆ ಸಿದ್ದರಿರಬೇಕು. ಗ್ರಾಮ ಪಂಚಾಯಿತಿ ನೌಕರರಿಗೆ ಸಮಯಕ್ಕೆ ಸರಿಯಾಗಿ ಸಂಬಳ ಸಿಗುತ್ತಿಲ್ಲ.
ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರು ಹಾಗೂ ಸಹಾಯಕಿಯರ ಪಾಡು ಹೇಳತೀರದಂತಾಗಿದೆ. ಎರಡು ಮೂರು ಸಾವಿರ ರೂ. ಗೌರವಧನಕ್ಕಾಗಿ ಹತ್ತಾರು ವರ್ಷಗಳಿಂದಲೂ ಜೀವನ ಭದ್ರತೆಯಿಲ್ಲದೆ ದುಡಿಯುತ್ತ ದೌರ್ಜನ್ಯ, ದಬ್ಬಾಳಿಕೆ, ಹಿಂಸೆ ಅನುಭವಿಸುತ್ತಿದ್ದಾರೆ . ಇದರ ವಿರುದ್ದ ಕಾರ್ಮಿಕರು ಎಚ್ಚೆತ್ತುಕೊಂಡು ಹೋರಾಟಕ್ಕೆ ಮುಂದಾಗಬೇಕೆಂದು ಹೇಳಿದರು.
ಕಟ್ಟಡ ಕಾರ್ಮಿಕರಿಗೂ ಸಾಕಷ್ಟು ಸೌಲಭ್ಯಗಳಿವೆ. ಅದರೆ ಸಂಘಟನೆಯ ಕೊರತೆಯಿಂದ ಸವಲತ್ತುಗಳು ಸರಿಯಾಗಿ ಸಿಗುತ್ತಿಲ್ಲ. ಹಮಾಲರ ಜೀವನ ನಿಕೃಷ್ಟವಾಗಿದೆ. ಬೆಳೆ ಬಂದರೆ ಮಾರುಕಟ್ಟೆಯಲ್ಲಿ ಕೆಲಸ ಇಲ್ಲವಾದರೆ ಕುಟುಂಬವೇ ಉಪವಾಸವಿರಬೇಕಾಗುತ್ತದೆ. ಮಳೆಯಿಲ್ಲದೆ ರೈತರಿಗೆ ಬೆಳೆಯಿಲ್ಲ. ಬೆಳೆಯಿದ್ದರೂ ಬೆಂಬಲ ಬೆಲೆ ಇಲ್ಲದಂತಾಗಿದೆ. ಹೀಗಾಗಿ ಅನ್ನದಾತ ರೈತ ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾನೆ.
ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರೈತರು ಬೆಳೆದ ಬೆಳೆಗಳಿಗೆ ಲಗತ್ತಾದ ಮಾರುಕಟ್ಟೆ ಸಿಗಬೇಕು. ದೊಡ್ಡ ದೊಡ್ಡ ಆಸ್ಪತ್ರೆಗಳಲ್ಲಿ ಬಿ.ಪಿ.ಎಲ್.ಕಾರ್ಡ್‍ಗಳಿಗೆ ಮಾನ್ಯತೆ ಸಿಗುತ್ತಿಲ್ಲ. ಕಾಯಿಲೆಗೆ ತುತ್ತಾಗುವ ಕಾರ್ಮಿಕರು ಚಿಕಿತ್ಸೆಯಿಲ್ಲದೆ ಪರದಾಡುವಂತಾಗಿದೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಕಾರ್ಮಿಕರ ಗೋಳನ್ನು ಕೇಳುವವರೆ ಇಲ್ಲದಂತಾಗಿದ್ದಾರೆ. ಇವೆಲ್ಲದರಿಂದ ಪರಿಹಾರ ಕಂಡುಕೊಳ್ಳಬೇಕಾದರೆ ಹೋರಾಟವೊಂದೆ ದಾರಿ. ಅದಕ್ಕಾಗಿ ಕಾರ್ಮಿಕರು ಮೊದಲು ಒಂದಾಗಿ ಎಂದು ಮನವಿ ಮಾಡಿದರು.ಸಿ.ಐ.ಟಿ.ಯು.ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಗ್ರಾ.ಪಂ. ನೌಕರರ ತಾಲೂಕು ಉಪಾಧ್ಯಕ್ಷ ಗೋವಿಂದಪ್ಪ, ಕಟ್ಟಡ ಕಾರ್ಮಿಕರ ಸಂಘದ ಉಪಾಧ್ಯಕ್ಷ ನಾಗರಾಜಚಾರ್, ಸಣ್ಣಮ್ಮ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ